KRS dam: ಕುಸಿಯುತ್ತಲೇ ಇದೆ ನೀರಿನ ಮಟ್ಟ, ಒಂದು ವಾರದಲ್ಲಿ ಮಳೆಯಾಗದಿದ್ರೆ ಈ ಜಿಲ್ಲೆ ರೈತರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ

ಮಂಡ್ಯ, ಸೆಪ್ಟೆಂಬರ್‌, 15: ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದಂತೆಯೇ ಕಳೆದ ಐದು ವರ್ಷಗಳ ಹಿಂದೆ ಮಂಡ್ಯದ ರೈತರು ಅನುಭವಿಸಿದ ಸಂಕಷ್ಟ ನೆನಪಾಗತೊಡಗಿದೆ. ಅವತ್ತು ರೈತರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದವರು ನೀರಿನ ಕೊರತೆಯಿಂದಾಗಿ ಸಂಕಷ್ಟಕ್ಕೀಡಾಗಿದ್ದರು. ಸಾಲದ ಶೂಲಕ್ಕೆ ಸಿಕ್ಕಿದವರ ಪೈಕಿ ಕೆಲವರು ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗೆಯೇ ಇದೀಗ ಮಳೆಯಿಲ್ಲದೆ ಮತ್ತೆ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಇವತ್ತಿನ ಸ್ಥಿತಿಯನ್ನು ಗಮನಿಸಿದರೆ ಕಬ್ಬು ಮತ್ತು ಭತ್ತವನ್ನಷ್ಟೆ ಬೆಳೆಯುತ್ತಿರುವ ಮಂಡ್ಯದ ರೈತರಿಗೆ ನೀರಿನ ಅಭಾವವಾಗಿ ಯಾವುದೇ ಬೆಳೆಯನ್ನು ಬೆಳೆಯಲಾರದ ಸ್ಥಿತಿಗೆ ಬಂದು ತಲುಪಿಬಿಟ್ಟರೆ ಮುಂದೇನು ಗತಿ? ಈಗಾಗಲೇ ಲಕ್ಷಾಂತರ ರೂಪಾಯಿ ಬಂಡವಾಳ ಸುರಿದು ಭತ್ತ, ಕಬ್ಬನ್ನು ಬೆಳೆದ ರೈತನಿಗೆ ಸಕಾಲದಲ್ಲಿ ನೀರು ಸಿಗದೆ ಹೋದರೆ ಮಾಡುವುದೇನು? ಹೀಗೆ ಒಂದಲ್ಲ ಒಂದು ಪ್ರಶ್ನೆಗಳು ರೈತರ ತಲೆಯನ್ನು ಗಿರ್ರೆನಿಸುತ್ತಿದೆ.

Water level down in KRS Dam: Mandya district Farmers are worried

ಹೆಚ್ಚಿನ ರೈತರ ಬದುಕು ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡ ಎಂಬ ಮಾತಿನಂತೆಯೇ ನಡೆಯುತ್ತಿದೆ. ಕಷ್ಟನೋ ಸುಖನೋ.. ಬೆಲೆ ಇರಲಿ ಇಲ್ಲದಿರಲಿ ಕಬ್ಬು ಅಥವಾ ಭತ್ತವನ್ನು ಬೆಳೆಯುವ ಅನಿವಾರ್ಯತೆ ಬಂದೊದಗಿದೆ. ಹಾಗೆನೋಡಿದರೆ ಕಳೆದ ಐದು ವರ್ಷಗಳ ಕಾಲ ನೀರಿಗೆ ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ನೀರಿಗೆ ಕೊರತೆ ಆಗುವುದು ಖಚಿತ. ಹೀಗಿರುವಾಗ ನೀರನ್ನು ಆ‍ಶ್ರಯಿಸಿ ಕೃಷಿ ಮಾಡುತ್ತಿದ್ದ ರೈತರ ಪಾಡೇನು?

ಕೃಷಿಗೆ ಅಂತರ್ಜಲವೂ ಬಹುಮುಖ್ಯ

ಕಳೆದ ಐದು ವರ್ಷಗಳ ಹಿಂದೆ ಬರದಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ರೈತರು ಬೆಳೆ ಬೆಳೆಯಲಾರದ ಸ್ಥಿತಿಗೆ ತಲುಪಿದ್ದರು. ಅಷ್ಟೇ ಅಲ್ಲದೆ, ಕೆರೆಗಳು ಒಣಗಿ ಜಾನುವಾರುಗಳಿಗೆ ನೀರು ಮೇವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಅದೆಷ್ಟೋ ಜಮೀನು ಪಾಳು ಬಿದ್ದಿತ್ತು. ಕೃಷಿ ಮಾಡಿಕೊಂಡು ಸ್ವಾಭಿಮಾನದಿಂದ ಬಾಳುತ್ತಿದ್ದವರ ಪೈಕಿ ಕೆಲವರು ಕೆಲಸ ಹುಡುಕಿಕೊಂಡು ಪಟ್ಟಣದತ್ತ ಮುಖ ಮಾಡಿದ್ದರು. ಇನ್ನು ಕೆಲವರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾರ್ಗ ಹಿಡಿದಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದೇ ಭಯಾನಕ.

ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಆಹಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಈ ಆಹಾರ ಬೆಳೆಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಜಮೀನಿನಲ್ಲಿ ಬೋರ್ ವೆಲ್ ಕೊರೆಯಿಸಿ ಕೃಷಿ ಮಾಡಲಾಗುತ್ತದೆ. ಆದರೆ ಮಳೆ ಸುರಿಯದೆ ಹೋದರೆ, ಕೆರೆಕಟ್ಟೆಗಳ ನೀರು ಬತ್ತಿ ಹೋಗುತ್ತದೆ. ಆಗ ಅಂತರ್ಜಲ ಕುಸಿತವಾಗುವುದರಿಂದ ಬೋರ್ ವೆಲ್ ಇದ್ದರೂ ಪ್ರಯೋಜನಕ್ಕೆ ಬಾರದು. ಇದರ ಅನುಭವ ರೈತರಿಗಾಗಿದೆ.

ಅಡಿಕೆ ತೆಂಗು ಬೆಳೆಯುವ ಪ್ರಯತ್ನ

ಕಳೆದೊಂದು ದಶಕಗಳ ಹಿಂದೆಯೇ ಕೆಲವರು ನೀರಿನ ಸಮಸ್ಯೆಯನ್ನು ಅರಿತು ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ್ದರು. ಅದಕ್ಕೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕೆರೆಮೇಗಲದೊಡ್ಡಿಯ ನಿವಾಸಿ ವರದಣ್ಣ ಎಂಬ ರೈತರು ಉದಾಹರಣೆ. ನೀರಿನ ಸಮಸ್ಯೆ ಮತ್ತೊಂದೆಡೆ ದರ ಕುಸಿತ ಜೊತೆಗೆ ಸಕ್ಕರೆ ಕಾರ್ಖಾನೆಗೆ ಎಡತಾಕಿ ಕಬ್ಬು ಬೆಳೆಯುವುದು ಸಾಕು ಎಂಬ ಸ್ಥಿತಿಗೆ ಅವರು ಬಂದು ಬಿಟ್ಟಿದ್ದರು. ತಮ್ಮ ಜಮೀನಿನಲ್ಲಿ ಅಡಿಕೆ, ತೆಂಗು ಬೆಳೆಯುವ ಆಲೋಚನೆ ಮಾಡಿದ್ದರು.

ಶಿವಮೊಗ್ಗ, ಸಾಗರ, ತುಮಕೂರು ಕಡೆಗೆ ಪ್ರಯಾಣ ಬೆಳೆಸಿ, ಅಲ್ಲಿನ ಕೃಷಿಕರನ್ನು ಭೇಟಿ ಮಾಡಿ ಅವರು ಹೇಗೆ ಕೃಷಿ ಮಾಡಿದ್ದಾರೆ ಎಂಬುದನ್ನು ಅರಿತುಕೊಂಡು ಗಿಡ ನೆಡುವುದು, ಹನಿನೀರಾವರಿ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ತಮ್ಮ ಒಡೆತನದ ಹನ್ನೊಂದು ಎಕರೆ ಗದ್ದೆಯಲ್ಲಿ ಐದೂವರೆ ಎಕರೆಯಲ್ಲಿ ಅಡಿಕೆ, ಇನ್ನೂ ಐದೂವರೆ ಎಕರೆಯಲ್ಲಿ ತೆಂಗನ್ನು ಬೆಳೆದರು.

ಸಾಮಾನ್ಯವಾಗಿ ಅಡಿಕೆ ಮತ್ತು ತೆಂಗಿಗೆ ಬೆಲೆ ಕುಸಿತ ಸಮಸ್ಯೆ ಕಡಿಮೆಯೇ. ಜೊತೆಗೆ ನೀರನ್ನು ಬಯಸದ ಕಾರಣದಿಂದ ಅವರು ನೆಮ್ಮದಿಯುಸಿರು ಬಿಟ್ಟಿದ್ದರು. ಆದರೆ ಹೀಗೆ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಭತ್ತ ಬೆಳೆಯುವ ಪ್ರದೇಶದಲ್ಲಿ ಭತ್ತ ಹೊರತುಪಡಿಸಿ ಬೇರೆ ಬೆಳೆ ಬೆಳೆಯುವುದು ಕಷ್ಟವೇ. ಕಬ್ಬು ಬೆಳೆಯು ರೈತರ ಪರಿಸ್ಥಿತಿ ಹೊರತಾಗಿಲ್ಲ. ಈಗ ರೈತರು ಮುಂದೇನು ಮಾಡಬೇಕು ಎಂಬುದು ಬಹುಮುಖ್ಯವಾಗಿದೆ.

ಮುಂಗಾರು ಮಳೆಯ ಕೊರತೆಯಿಂದಾಗಿ ಮಂಡ್ಯದ ರೈತರು ಸಂಕಷ್ಟಕ್ಕೆ ಸಿಲುಕುವ ಎಲ್ಲ ಲಕ್ಷಣಗಳು ಕಂಡು ಬರುತ್ತವೆ. ಹೀಗಿರುವಾಗ ನಮ್ಮ ಜೀವನಾಡಿ ರೈತ ಅಂತ ಹೇಳುವವರು ರೈತರ ಸಂಕಷ್ಟಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಬಹುಮುಖ್ಯವಾಗಿದೆ. ರೈತರು ಕೂಡ ಸಂಕಷ್ಟವನ್ನು ನಿಭಾಯಿಸಲು ತಯಾರು ಮಾಡಿಕೊಳ್ಳಬೇಕಾಗಿದೆ. ಮುಂದೇನು ಕಾಲವೇ ಹೇಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+