ಯೂರಿಯ ರಸಗೊಬ್ಬರದ ಅತಿ ಬಳಕೆ: ರೈತರಿಗೆ ಮಾಹಿತಿ
ಬೆಂಗಳೂರು, ಜೂನ್ 28: ಮುಂಗಾರು ಮಳೆ ಆರಂಭವಾಗಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ರೈತರು ರಸಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಯೂರಿಯ ರಸಗೊಬ್ಬರ ಅತಿ ಬಳಕೆಯ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ.
ಚಾಮರಾಜನಗರದ ಕೃಷಿ ಇಲಾಖೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಆಧುನಿಕ ಕೃಷಿಯಲ್ಲಿ ನಮ್ಮ ರೈತರು ಮೂಲ ಕೃಷಿಗೆ ಬೇಕಾದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ತ್ಯಜಿಸಿ ಕೃತಕ ರಸಗೊಬ್ಬರಗಳನ್ನು ನಿಗದಿತ ಪ್ರಮಾಣಕ್ಕಿಂತ ಯಥೇಚ್ಛವಾಗಿ ವಿವೇಚನೆ ಇಲ್ಲದೇ ಅಸಮಪರ್ಕವಾಗಿ ಬಳಸುತ್ತಿರುವುದರಿಂದ ಕೃಷಿ ಉತ್ಪಾದನೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿರುವುದು ಕಂಡು ಬಂದಿರುತ್ತದೆ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬೆಲೆಗಳು ಹೆಚ್ಚಳವಾಗುತ್ತಿರುವುದರಿಂದ ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವ ಯೂರಿಯ ರಸಗೊಬ್ಬರವನ್ನು ಅಧಿಕವಾಗಿ ಬಳಸುತ್ತಿರುವುದು ಕಂಡು ಬಂದಿರುತ್ತದೆ. ಆದರೆ ಅಧಿಕ ಯೂರಿಯ ಬಳಕೆಯಿಂದಾಗುವ ದುಷ್ಪರಿಣಾಮಗಳು, ಯೂರಿಯ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಎಂದು ಮಾಹಿತಿ ನೀಡಲಾಗಿದೆ.
ರೈತರಿಗೆ ಸಲಹೆಗಳು: ಸಸ್ಯಗಳ ಬೆಳವಣಿಗೆ ಮಾತ್ರ ಹೆಚ್ಚಾಗಿ ಹೂವು, ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗಿ ಇಳುವರಿಯಲ್ಲಿ ನಷ್ಟವಾಗುತ್ತದೆ. ಸಸ್ಯಗಳು ಹುಲುಸಾಗಿ ಬೆಳೆದು ಮೃದುತ್ವ ಹೆಚ್ಚಾಗಿ ಕೀಟ ಮತ್ತು ರೋಗಗಳ ಭಾದೆ ಹೆಚ್ಚಾಗಿ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ.
ಅಧಿಕ ಯೂರಿಯ ಬಳಕೆಯಿಂದ ಸಸಿಗಳು ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಕಳೆದುಕೊಂಡು ನೆಲಕ್ಕೆ ಬಾಗಿ ಕಾಳು ಕಟ್ಟುವ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾಗಿ ಇಳುವರಿ ಕಡಿಮೆಯಾಗುತ್ತದೆ. ಅಧಿಕ ಪ್ರಮಾಣದಲ್ಲಿ ಯೂರಿಯ ಬಳಕೆಯಿಂದ ಮಣ್ಣಿನಲ್ಲಿ ರಾಸಾಯನಿಕ ಗುಣಧರ್ಮಗಳು ವ್ಯತ್ಯಾಸವಾಗಿ ಮಣ್ಣು ಹುಳಿಯಾಗಿ ಪರಿವರ್ತನೆಯಾಗುತ್ತದೆ.
ಅಧಿಕ ಪ್ರಮಾಣದ ಯೂರಿಯ ಬಳಕೆಯಿಂದ ಯೂರಿಯವು ಅಮೋನಿಯವಾಗಿ ನಂತರ ನೈಟ್ರೇಟ್ ಆಗಿ ಪರಿವರ್ತನೆಗೊಂಡು ಅಂತರ್ಜಲ ಸೇರಿ ಕುಡಿಯುವ ನೀರು ಸಹ ಕಲುಷಿತವಾಗುತ್ತದೆ ಮತ್ತು ನೀರಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾದಲ್ಲಿ ಅಂತಹ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ ಹಾಗೂ ಅಂತಹ ನೀರನ್ನು ಕುಡಿದ ಕುಟುಂಬಗಳಲ್ಲಿ ಹುಟ್ಟುವ ಶಿಶುಗಳು ನೀಲಿಶಿಶು ಎಂಬ ರೋಗಕ್ಕೆ ತುತ್ತಾಗಿ ಸಾಯುತ್ತವೆ.
ಸಮರ್ಪಕ ಮತ್ತು ಲಾಭದಾಯಕ ರೀತಿಯಲ್ಲಿ ಯೂರಿಯ ಬಳಕೆ ಮಾಡಬೇಕಿದೆ. ಯೂರಿಯ ಗೊಬ್ಬರವು ಇತರೆ ರಾಸಾಯನಿಕ ಗೊಬ್ಬರಗಳಿಗಿಂತ ವೇಗವಾಗಿ ಕರಗುವುದರಿಂದ ಕೇವಲ 35 ರಿಂದ 40 ಭಾಗ ಮಾತ್ರ ಬೆಳೆಗಳಿಗೆ ಉಪಯೋಗವಾಗಿ ಉಳಿದ ಭಾಗ ಆವಿಯಾಗುವುದು ಹಾಗೂ ನೀರಿನಲ್ಲಿ ಹರಿದು ಪೋಲಾಗುವುದು ಕಂಡುಬಂದಿರುತ್ತದೆ.
ಯೂರಿಯ ಉಪಯೋಗದ ಸಾಮರ್ಥ್ಯ ಹೆಚ್ಚಿಸಲು ಬೆಳೆಗಳಿಗೆ ಶಿಫಾರಸ್ಸಿನ ಪ್ರಮಾಣವನ್ನು ಕನಿಷ್ಟ 2 ಬಾರಿ ಹಂತಹಂತವಾಗಿ ಒದಗಿಸುವುದು. ಬೇವು ಲೇಪಿತ ಯೂರಿಯ ಬಳಕೆ ಮಾಡುವುದರಿಂದ ಕೊಚ್ಚಿ ಹೋಗುವ ನಷ್ಟವನ್ನು ತಡೆಯುವುದರ ಜೊತೆಗೆ ಬೆಳೆಯು ನಿಧಾನವಾಗಿ ಹೀರಿಕೊಳ್ಳಲು ಸಹಾಯವಾಗಿರುತ್ತದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಇವರನ್ನು ಭೇಟಿ ಮಾಡುವುದು.
ರೈತರು ಯೂರಿಯಾ ಗೊಬ್ಬರಕ್ಕಾಗಿ ಹೆಚ್ಚು ಅಲೆದಾಟ ನಡೆಸುವುದು ಬೇಡ. ನ್ಯಾನೋ ಯೂರಿಯಾ ದ್ರಾವಣವು ಪ್ರತಿಶತ 4 ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿರುತ್ತದೆ. ಒಂದು ಬಾಟಲ್ (500 ಮಿ. ಲೀ.) ನ್ಯಾನೊ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನಾಗಿದೆ. ರೈತರು ತಮ್ಮ ಬೆಳೆಗಳಿಗೆ ನ್ಯಾನೊ ಯೂರಿಯಾ ದ್ರಾವಣವನ್ನು ಬಳಸಬಹುದು ಎಂದು ಕೃಷಿ ಇಲಾಖೆ ಹೇಳಿದೆ.
ಬೆಳೆಯ ಬೆಳವಣಿಗೆಯಲ್ಲಿ ಸಾರಜನಕವು ಪ್ರಮುಖ ಪಾತ್ರ ವಹಿಸುತ್ತದೆ. ಸಾರಜನಕ ಬೇಡಿಕೆಯನ್ನು ಪೂರೈಸಲು ರೈತರು 2 ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರವನ್ನು ತಳ ಗೊಬ್ಬರ ಹಾಗೂ ಮೇಲೂ ಗೊಬ್ಬರವಾಗಿ ನೀಡುತ್ತಾರೆ. ಇದರಲ್ಲಿ ಶೇ.30-50 ರಷ್ಟು ಯೂರಿಯಾ ಮಾತ್ರ ಬೆಳೆಗಳಿಗೆ ದೊರೆಯುತ್ತದೆ. ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್‍ಆಕ್ಸೈಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲೀನಗೊಳಿಸುತ್ತದೆ. ಆದರೆ ನ್ಯಾನೊ ಯೂರಿಯಾದಿಂದ ಪರಿಸರ ಮಾಲಿನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications