ಮುಸುಕಿನ ಜೋಳ; ಸೈನಿಕ ಹುಳುವಿನ ಕೀಟ ಹತೋಟಿಗೆ ಸಲಹೆಗಳು
ಶಿವಮೊಗ್ಗ, ಜುಲೈ 17; ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಹಲವು ರೀತಿಯ ರೋಗಗಳು ಕಾಣಿಸಿಕೊಳ್ಳುತ್ತದೆ. ಇದರದಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳದ ಬೆಳೆಯಲ್ಲಿ ಕಾಂಡಕೊರಕ ಹಾಗೂ ಎಲೆ ತಿನ್ನುವ ಹುಳುಗಳ ಹೊರತಾಗಿ ಎಲೆ ತಿನ್ನುವ ವಿದೇಶಿ ಆಕ್ರಮಣಕಾರಿ ಸೈನಿಕ ಹುಳುವಿನ ಸಮಸ್ಯೆಯೂ ಕಂಡು ಬರುತ್ತಿದೆ.
ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ ಶಿವಮೊಗ್ಗ ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳದ ಬೆಳೆ ಬಿತ್ತನೆಯಾಗಿರುತ್ತದೆ. ಈ ಬಾರಿ ಮುಂಗಾರು ಹಂಗಾಮು ತಡವಾದ್ದರಿಂದ ಬಿತ್ತನೆಯು ಸಹ ತಡವಾಗಿದ್ದು ಇಲಾಖೆಯ ಅಧಿಕಾರಿಗಳು ಕುಂಸಿ, ಚೋರಡಿ, ಹುಣಸೋಡು, ಕುಂಚೇನಹಳ್ಳಿ, ಕಲ್ಲಾಪುರ, ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಗಳಾದ ಕಾಂಡಕೊರಕ ಹಾಗೂ ಎಲೆ ತಿನ್ನುವ ಹುಳುಗಳ ಜೊತೆಗೆ ಆಕ್ರಮಣಕಾರಿ ಸೈನಿಕ ಹುಳುವಿನ ಪ್ರಬೇಧ ಸ್ಪೊಡೋಪ್ಟೆರಾ ಫ್ರೂಜಿಪರ್ದಾ ಕಂಡುಬಂದಿದೆ.
ರೋಗ ಪತ್ತೆ, ಹತೋಟಿ ಕ್ರಮ; ಈ ಕೀಟವು ಸುಳಿಯಲ್ಲಿದ್ದುಕೊಂಡು ಎಲೆಗಳನ್ನು ತಿಂದು ಅಧಿಕ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುತ್ತದೆ. ಇದರಿಂದ ಮೆಕ್ಕೆಜೋಳದ ಇಳುವರಿ ಕುಂಠಿತವಾಗುತ್ತದೆ. ಆದ್ದರಿಂದ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
ಹತೋಟಿ ಕ್ರಮಗಳು 15 ರಿಂದ 20 ದಿನದ ಬೆಳೆಯಲ್ಲಿ ಪ್ರಾರಂಭ ಹಂತದಲ್ಲಿ ಬೇವಿನ ಎಣ್ಣೆ 2 ಮಿ. ಲಿ. ಪ್ರತಿ ಲೀ. ನೀರಿನೊಂದಿಗೆ ಸಿಂಪರಣೆ ಮಾಡುವುದು. ನಂತರದಲ್ಲಿ ಎಮಮೆಕ್ಟಿನ್ ಬೆಂಜೋಯೇಟ್ 5% ಎಸ್‍ಸಿ ಅಥವಾ 0.4 ಮಿ.ಲಿ. ಕ್ಲೋರಂತ್ರ ನಿಲಿಪ್ರೊಲ್ 18.5% ಅಥವಾ 1 ಮಿ.ಲಿ. ಲ್ಯಾಂಬ್ಡಸೈಹಲೋತ್ರಿನ್ 9.5% ಪ್ರತಿ ಲೀ. ನೀರಿಗೆ ಬೆರೆಸಿ 200-250 ಸಿಂಪರಣಾ ದ್ರಾವಣ ಬಳಸಬೇಕು. ಎಕರೆಗೆ 2 ರಂತೆ ಮೋಹಕ ಬಲೆ/ ಬೆಳಕಿನ ಬಲೆಗಳನ್ನು ಬಳಸಬೇಕು.
ವಿಷ ಪಾಷಣ ತಯಾರಿಕೆ 10 ಕೆಜಿ ಭತ್ತದ ತೌಡು, 2 ಕೆಜಿ ಬೆಲ್ಲ, 100 ಗ್ರಾಂ ಥಯೋಡಿಕಾರ್ಬ್ 75% ಡಬ್ಲ್ಯುಪಿ/250 ಎಂಎಲ್ ಮನೋಕ್ರೋಟೋಫಾಸ್ ಕೀಟನಾಶಕವನ್ನು 5 ಲೀ. ನೀರಿನಲ್ಲಿ ಬೆರೆಸಿ 24 ಗಂಟೆಗಳ ಕಾಲ ಗಾಳಿಯಾಡದಂತೆ ಚೀಲದಲ್ಲಿ ಕಟ್ಟಿ ಇಡುವುದು. 24 ಗಂಟೆಗಳ ನಂತರ ಸಂಜೆ ಸಮಯದಲ್ಲಿ ಈ ವಿಷ ಪಾಷಾಣವನ್ನು ಹೊಲದಲ್ಲಿ ಉಂಡೆ ಮಾಡಿ ಅಲ್ಲಲ್ಲಿ ಇಡಬೇಕು ಎಂದು ಸಲಹೆ ಕೊಡಲಾಗಿದೆ.
ಮೆಕ್ಕೆಜೋಳದ ಬಿತ್ತನೆ ಕ್ಷೇತ್ರದಲ್ಲಿ ಪರಿಶೀಲನೆ ವೇಳೆ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್. ಟಿ., ಕೃಷಿ ಅಧಿಕಾರಿಗಳಾದ ಚೇತನ್ ಸಿ. ಜಿ., ಸುನೀಲ್ ನಾಯ್ಕ್ ಮತ್ತು ರೈತರುಗಳಾದ ಜಗದೀಶ್, ಮಲ್ಲೇಶಪ್ಪ, ಹರಿಶ್ಚಂದ್ರನಾಯ್ಕ, ಉಮೇಶಪ್ಪ ಮತ್ತು ಇತರರು ಹಾಜರಿದ್ದರು.
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಹಾಕಿ; ಕೃಷಿ ಇಲಾಖೆಯು 2023-24ನೇ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಶಿವಮೊಗ್ಗ ಜಿಲ್ಲೆಯ ಆಸಕ್ತ ರೈತರಿಂದ ರಾಜ್ಯ ಮಟ್ಟದ ಕೃಷಿ ಪಂಡಿತ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆಯಲು ಅರ್ಜಿ ಕರೆದಿದೆ.
ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ರೈತರು ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿ ಮತ್ತು ಬೆಳೆ ವೈವಿದ್ಯೀಕರಣ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣ ಅಭಿವೃದ್ಧಿ, ನೀರಿನ ಸಮರ್ಥ ಬಳಕೆ ಇನ್ನಿತರ ಯಾವುದೇ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು.
ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಹಾಗೂ ಆತ್ಮ ಯೋಜನೆಯಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ, ವೈಜ್ಞಾನಿಕ ಯಂತ್ರೋಪಕರಣ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನಿಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಹಸಿರುಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು/ ಕುರಿ/ ಮೊಲ ಸಾಕಾಣಿಕೆ ಚಟುವಟಿಕೆಯಲ್ಲಿ ಸಾಧನೆ ಮಾಡಿದವರು ಪ್ರಶಸ್ತಿಗೆ ಅರ್ಹರು.
ಆಸಕ್ತ ರೈತರು ನಿಗದಿತ ನಮೂನೆ ಅರ್ಜಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಜುಲೈ 24ರೊಳಗಾಗಿ ಸಲ್ಲಿಸುವಂತೆ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications