Cardamom: ಏಲಕ್ಕಿಗೆ ಮಾರಕವಾದ ಕಟ್ಟೆರೋಗದ ನಿಯಂತ್ರಣ ಹೇಗೆ?

ಮಡಿಕೇರಿ, ಜುಲೈ 29: ಕೊಡಗಿನಲ್ಲಿ ಬಿಡುವು ಕೊಡದೆ ಮಳೆ ಸುರಿಯುತ್ತಿದ್ದು, ಇಡೀ ವಾತಾವರಣ ಶೀತಮಯವಾಗಿದೆ. ಈ ವಾತಾವರಣ ಕಾಫಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಮಿಡಿಗಚ್ಚಿದ ಕಾಫಿ ಉದುರಲಾರಂಭಿಸಿದೆ. ಇದು ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಇದೇ ಪರಿಸ್ಥಿತಿ ಮುಂದುವರೆದಿದ್ದೇ ಆದರೆ ಮುಂದಿನ ವರ್ಷ ಕಾಫಿ ಇಳುವರಿ ಕಡಿಮೆಯಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಕೆಲವು ದಶಕಗಳ ಹಿಂದೆ ಇದೇ ರೀತಿಯಾಗಿ ಮಳೆ ಸುರಿಯುತ್ತಿತ್ತು. ಹೀಗಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುವ ಏಲಕ್ಕಿಯನ್ನು ಎಲ್ಲರೂ ಬೆಳೆಯುತ್ತಿದ್ದರು. ಮಳೆ ಹೆಚ್ಚಾದಷ್ಟು ಏಲಕ್ಕಿ ಅದಕ್ಕೆ ಹೊಂದಿಕೊಂಡು ಬೆಳೆಯುತ್ತಿತ್ತು. ಹಾಗಾಗಿಯೇ ಮಳೆ ಹೆಚ್ಚು ಬೀಳುವ ಸ್ಥಳಗಳಲ್ಲಿ ಏಲಕ್ಕಿಯನ್ನು ಬೆಳೆಯುತ್ತಿದ್ದರು. ಇದೆಲ್ಲದರ ನಡುವೆ ವಾತಾವರಣದಲ್ಲಿ ಏರುಪೇರಾಗಿದ್ದು, ಮಳೆ ಕಡಿಮೆಯಾದ ಕಾರಣದಿಂದಾಗಿ ಏಲಕ್ಕಿ ಬೆಳೆ ಬೆಳೆಯುವುದನ್ನೆ ಬಿಟ್ಟು ಬಿಟ್ಟಿದ್ದಾರೆ.

Tips For Farmers How To Control The Deadly Blight Of Cardamom

ಈಗ ಜಿಲ್ಲೆಯ ಬಹುತೇಕ ಕಡೆ ಏಲಕ್ಕಿ ತೋಟದ ಸ್ಥಾನವನ್ನು ಕಾಫಿ ತುಂಬಿಕೊಂಡಿದೆ. ಆದರೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಾಫಿ ಫಸಲು ಉದುರಲಾರಂಭಿಸಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ವರ್ಷ ಫಸಲು ಇಳಿಮುಖವಾಗಲಿದ್ದು ಭಾರೀ ನಷ್ಟವಾಗುವ ಎಲ್ಲ ಸಾಧ್ಯತೆಯಿದೆ. ಇನ್ನೊಂದೆಡೆ ಪ್ರವಾಹ ಪರಿಸ್ಥಿತಿಯಿಂದ ಕಾಫಿ ತೋಟ ಜಲಾವೃತವಾಗುತ್ತಿದ್ದು ಗಿಡಗಳು ಕೊಳೆತು ಸಾಯುತ್ತಿವೆ. ಇನ್ನೊಂದೆಡೆ ಫಸಲು ಉದುರುತ್ತಿದೆ.

ಏಲಕ್ಕಿಯನ್ನು ಕಾಡುವ ಕಟ್ಟೆರೋಗ

ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಾಗಲೆಲ್ಲ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ. ಒಂದು ವೇಳೆ ಎಲ್ಲವೂ ಸರಿಯಾಗಿಯೇ ಇದ್ದಿದ್ದರೆ ಬಹುಶಃ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೇನೋ? ಆದರೂ ಕಷ್ಟವೋ ಸುಖವೋ ಕೆಲವರು ಇಂದಿಗೂ ಏಲಕ್ಕಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಅವರಿಗೆ ಸವಾಲ್ ಆಗಿರುವುದು ಏಲಕ್ಕಿಗೆ ತಗಲುವ ಕಟ್ಟೆರೋಗದ್ದಾಗಿದೆ.

ಇವತ್ತು ಬಹುತೇಕ ಬೆಳೆಗಾರರು ಏಲಕ್ಕಿ ಬೆಳೆಯುವುದರಿಂದ ವಿಮುಖರಾಗಿದ್ದರೆ ಅದಕ್ಕೆ ಕಾರಣ ಇದೇ ಕಟ್ಟೆರೋಗ ಎಂದರೆ ತಪ್ಪಾಗಲಾರದು. ಈ ಕಟ್ಟೆರೋಗವೊಂದು ಏಲಕ್ಕಿಗೆ ತಗಲದೆ ಹೋಗಿದ್ದರೆ ಬಹುಶಃ ಇವತ್ತಿಗೂ ಕೊಡಗಿನಲ್ಲಿ ಏಲಕ್ಕಿಯ ಘಮಲು ಮೂಗಿಗೆ ಬಡಿಯುತ್ತಿತ್ತೇನೋ? ಆದರೆ ಅದನ್ನು ಆಚೆಗಿಟ್ಟು ಅಳಿದುಳಿದ ಏಲಕ್ಕಿಯನ್ನು ಉಳಿಸಿಕೊಳ್ಳಲು ಕಟ್ಟೆರೋಗದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ.

Tips For Farmers How To Control The Deadly Blight Of Cardamom

ರೋಗ ಲಕ್ಷಣವನ್ನು ಗುರುತಿಸುವುದು ಸುಲಭ

ಏಲಕ್ಕಿಯನ್ನು ಬಲಿ ತೆಗೆದುಕೊಂಡ ಕಟ್ಟೆರೋಗದ ಬಗ್ಗೆ ಕೃಷಿ ಸಂಶೋಧನಾ ಕೇಂದ್ರದ ನೀಡಿದ ಮಾಹಿತಿಯಂತೆ ಹೇಳುವುದಾದರೆ ಇದೊಂದು ನಂಜು ರೋಗವಾಗಿದೆ. ಇದು ಪೆಂಟಲೋನಿಯಾ ನೈಗ್ರೋನೆರ್ವೋಸಾ ಎಂಬ ಒಂದು ಜಾತಿಯ ಗಿಡಹೇನು(ಕೀಟ)ವಿನಿಂದ ಬರುತ್ತದೆ. ಆಂಗ್ಲ ಭಾಷೆಯಲ್ಲಿ ಮೊಸಾಯಿಕ್ ಅಥವಾ ಮಾರ್ಬಲ್ ಎಂದು ಕರೆಯಲಾಗುತ್ತಿದೆ. ಸಾಮಾನ್ಯವಾಗಿ ಕಟ್ಟೆ ರೋಗವು ರೋಗಗ್ರಸ್ತ ತೋಟಗಳಿಂದ ಸಸಿಗಳನ್ನು ಆಯ್ಕೆ ಮಾಡಿ ನೆಡುವುದರಿಂದ ಶೀಘ್ರ ಪ್ರಮಾಣದಲ್ಲಿ ಹರಡುತ್ತದೆಯಂತೆ.

ಕೆಲವೊಂದು ಮೂಲಗಳ ಪ್ರಕಾರ ಈ ರೋಗವು ಬೀಜ ಅಥವಾ ಮಣ್ಣಿನ ಮೂಲಕ ಹರಡುವುದಿಲ್ಲವಂತೆ. ಕಟ್ಟೆ ರೋಗಕ್ಕೆ ತುತ್ತಾದ ಗಿಡವನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ಗಿಡದ ಎಳೆಯ ಎಲೆಯ ಮೇಲೆ ಕದರಿನ ಆಕಾರದ ಎರಡರಿಂದ ಐದು ಮಿಲಿ ಮೀಟರ್ ಉದ್ದನೆಯ ತೆಳುವಾದ ಹಸಿರು ಭಾಗ ಬಿಳಿಯ ಕೊಂಡ ಮಚ್ಚೆಗಳು ಕಾಣಸಿಗುತ್ತದೆ.

ಶೀಘ್ರವೇ ಗಿಡವನ್ನೆಲ್ಲ ವ್ಯಾಪಿಸುವ ರೋಗ

ಇದು ಕಟ್ಟೆರೋಗದ ಆರಂಭದ ಲಕ್ಷಣವಾಗಿದೆ. ಆ ನಂತರ ಮಚ್ಚೆಗಳು ಮಧ್ಯೆ ವಿವರ್ಣವಾದ ಹಸಿರು ಬಣ್ಣದ ನರದಿಂದ ಆರಂಭವಾಗಿ ಎಲೆಯ ಅಂಚಿನೆಡೆಗೆ ಎಲೆಯಲ್ಲಿನ ಇತರ ನರಗಳಿಗೆ ಸಮಾನಾಂತರವಾಗಿ ಇರುತ್ತವೆ. ನಂತರ ಮೂಡಿ ಬರುವ ಹೊಸ ಎಲೆಗಳ ಮೇಲೆ ವಿಶಿಷ್ಟವಾದ ಮಚ್ಚೆಗಳನ್ನೊಳಗೊಂಡ ಹಸಿರು ಅಂಗಾಂಶದ ಪಟ್ಟಿಗಳು ಕಂಡು ಬರುತ್ತದೆ.

Tips For Farmers How To Control The Deadly Blight Of Cardamom

ಕೆಲವೊಂದು ಸಂದರ್ಭಗಳಲ್ಲಿ ಎಲೆಯ ಕವಚದ ಮೇಲೆ ಹಾಗೂ ಎಲೆಯ ಮಿಥ್ಯಕಾಂಡದ ಮೇಲೆ ಬಣ್ಣ ಬಣ್ಣದ ವಿನ್ಯಾಸಗಳನ್ನೊಳಗೊಂಡ ಚುಕ್ಕೆಗಳು ಸಹ ಕಾಣಸಿಗುತ್ತವೆ. ಎಲೆಗಳು ಬೆಳೆದಂತೆಲ್ಲಾ ರೋಗವು ಸಹ ಹರಡತೊಡಗಿ ಗಿಡದ ಬುಡದಿಂದ ಹೊರ ಬರುವ ಹೊಸ ತಾಳುಗಳಿಗೂ ವ್ಯಾಪಿಸುತ್ತದೆ.

ಗಿಡದ ಬೆಳವಣಿಗೆಯಲ್ಲಿ ತೀವ್ರ ಕುಂಠಿತ

ಪೂರ್ತಿಯಾಗಿ ಬೆಳೆದ ಗಿಡಗಳಿಗಿಂತ ಎಳೆಯ ಗಿಡಗಳಲ್ಲಿ ರೋಗದ ಲಕ್ಷಣಗಳು ಚೆನ್ನಾಗಿ ಕಂಡು ಬರುತ್ತವೆ. ಸಂಪೂರ್ಣವಾಗಿ ರೋಗ ತಗುಲಿದ ಗಿಡಗಳು ಬೆಳವಣಿಗೆಯಲ್ಲಿ ಕುಂಠಿತಗೊಂಡು ಗಾತ್ರದಲ್ಲಿ ಚಿಕ್ಕದಾಗಿ, ತೆಳ್ಳನೆಯ ಕೃಶವಾದ ತಾಳುಗಳನ್ನು ಹೊಂದಿ ಚಿಕ್ಕದಾದ ಕೊತ್ತುಗಳನ್ನು (ಪುಷ್ಪ ಗೊಂಚಲು) ಬಿಡುತ್ತವೆ.

ಗಿಡ ನೆಟ್ಟ ವರ್ಷದಲ್ಲಿಯೇ ರೋಗ ತಗುಲಿದ್ದೇ ಆದರೆ ಪೂರ್ಣ ಪ್ರಮಾಣದ ಬೆಳೆ ನಷ್ಟವಾಗುತ್ತದೆ. ಫಸಲು ನೀಡುವ ಗಿಡಕ್ಕೆ ತಗಲಿದರೆ ಇಳುವರಿಯಲ್ಲಿ ಇಳಿಮುಖವಾಗಿ ನಷ್ಟವಾಗುತ್ತದೆ. ರೋಗಕ್ಕೆ ಬಲಿಯಾದ ಗಿಡಗಳು ಬಹು ಬೇಗನೇ ಸಾಯುವುದಿಲ್ಲವಾದುದರಿಂದ ರೋಗವನ್ನು ಮತ್ತೊಂದು ಗಿಡಕ್ಕೆ ಹರಡಲು ಸಹಾಯ ಮಾಡಿದಂತಾಗುತ್ತದೆ.

ಕಟ್ಟೆರೋಗದ ನಿಯಂತ್ರಣ ಹೇಗೆ?

ಕಟ್ಟೆ ರೋಗವನ್ನು ನಿಂತ್ರಿಸುವ ಕುರಿತಂತೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಆ ಪ್ರಕಾರ ಹೇಳುವುದಾದರೆ ರೋಗಕ್ಕೆ ಬಲಿಯಾದ ಗಿಡಗಳನ್ನು ಕ್ರಮಬದ್ಧವಾಗಿ ಕಿತ್ತು ನಾಶ ಮಾಡಬೇಕು. ಹೀಗೆ ಮಾಡುವುದರಿಂದ ರೋಗವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಇಡಬಹುದು. ತೋಟದಲ್ಲಿನ ಖಾಲಿ ಸ್ಥಳಗಳಲ್ಲಿ ಮಳೆಗಾಲದಲ್ಲಿ ಗಿಡಗಳನ್ನು ನೆಡುವುದರಿಂದ ರೋಗವನ್ನು ಹತೋಟಿ ಮಾಡಬಹುದು.

ರೋಗಗ್ರಸ್ಥ ತೋಟಗಳಿಂದ ಸಸಿಗಳನ್ನು ನಾಟಿಗೆ ಉಪಯೋಗಿಸಬಾರದು. ಆರೋಗ್ಯವಂತ ಗಿಡಗಳಿಗೆ ಐದು ಮಿಲಿ ಮೀಟರ್ ಪಾಸ್ಪೋ ಮಿಡಾನ್ ಅಥವಾ ಹದಿನಾರು ಮಿಲಿ ಮೀಟರ್ ಡೈಮೀಥೋಯೆಟ್ ಔಷಧಿಯನ್ನು ಹತ್ತು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ರೋಗ ಬಾಧಿತ ಗಿಡಗಳನ್ನು ಕೀಳುವಾಗ ಬುಡದಲ್ಲಿ ಬಿಗಿಯಾಗಿ ಹಿಡಿದು ನೆಲದಿಂದ ಹೊರಗೆ ಕೀಳಬೇಕು.

ರೋಗವನ್ನು ನಿಯಂತ್ರಿಸುವುದೇ ಹೋರಾಟ

ಗಿಡದ ಎಲೆ ಕವಚಗಳ ನಡುವೆ ಇರುವ ರೋಗ ಹರಡುವ ಪೆಂಟಲೋನಿಯಾ ನೈಗ್ರೋನರ್ವೋಸಾ ಎಂಬ ಜಾತಿಯ ಗಿಡ ಹೇನುಗಳನ್ನು ಕೊಲ್ಲಬಹುದು. ಈ ರೀತಿ ಕಿತ್ತ ಗಿಡಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ತೋಟದಿಂದ ಹೊರಗಡೆ ತೆಗೆದುಕೊಂಡು ಹೋಗಿ ಅವುಗಳನ್ನು ಸುಟ್ಟು ನಾಶ ಮಾಡಬೇಕು.

ಅಮೋಮಮ್ ಕನ್ನಾಕಾರ್ಪಮ್, ಅಮೋಮಮ್ ಇನ್ ಪೋಲು ಕ್ರೆಟಮ್, ಅಮೋಮಮ್ ಮೈಕ್ರೋಸ್ಟೆಪನಮ್ ಅಲ್ಛಿನೀಯಾ ನುಟಿನ್ಸ್ ಮತ್ತು ಕುರ್ಕುಮಾನೈಲ್ಗೇರ್ರೆನ್ನಿಸ್ ಈ ಗಿಡಗಳು ರೋಗಕ್ಕೆ ಆಶ್ರಯ ನೀಡುತ್ತದೆ. ಈ ಗಿಡಗಳನ್ನು ಗುರುತಿಸಿ ನಾಶಪಡಿಸುವುದರಿಂದ ಕಟ್ಟೆ ರೋಗವನ್ನು ಒಂದಷ್ಟು ನಿಯಂತ್ರಿಸಬಹುದಾಗಿದೆ.

ರೋಗವನ್ನು ಸಂಪೂರ್ಣ ಹತೋಟಿಗೆ ತರುವುದು ಸಾಧ್ಯವಾಗದ ಕಾರಣ ಇದರೊಂದಿಗೆ ಹೆಣಗಾಡಿ ಸುಸ್ತಾದ ಬೆಳೆಗಾರ ಏಲಕ್ಕಿ ತೋಟವನ್ನು ಕಾಫಿತೋಟವನ್ನಾಗಿ ಮಾರ್ಪಾಡು ಮಾಡಿದ್ದಾನೆ. ಆದರೆ ಭಾರೀ ಮಳೆ ಬೀಳುವ ಕೆಲವು ಪ್ರದೇಶಗಳಲ್ಲಿ ಏಲಕ್ಕಿ ಹೊರತುಪಡಿಸಿ ಬೇರೆ ಬೆಳೆಗಳನ್ನು ಬೆಳೆಯಲಾರದ ಪರಿಸ್ಥಿತಿಯಿದೆ. ಹೀಗಾಗಿ ಕಟ್ಟೆರೋಗವನ್ನು ನಿಯಂತ್ರಿಸಿ ಏಲಕ್ಕಿಯನ್ನು ಬೆಳೆದರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+