ಕುಲಾಂತರಿ ಸಾಸಿವೆ ಬಿಡುಗಡೆ; ಯಥಾಸ್ಥಿತಿಗೆ ಸುಪ್ರೀಂ ಆದೇಶ
ನವದೆಹಲಿ, ನ.03: ಬೀಜ ಉತ್ಪಾದನೆ ಮತ್ತು ಪರೀಕ್ಷೆಗಾಗಿ ತಳೀಯವಾಗಿ ಮಾರ್ಪಡಿಸಿದ (ಜಿಎಂ) ಸಾಸಿವೆಯನ್ನು ಪರಿಸರಕ್ಕೆ ಬಿಡುಗಡೆ ಮಾಡಲು ಅನುಮತಿಸುವ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ) ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಆದೇಶಿಸಿದೆ.
ಸುಪ್ರೀಂಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 10 ರಂದು ನಿಗದಿಪಡಿಸಿದೆ.
ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 18, 2022 ರ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (GEAC) ನಿರ್ಧಾರ ಮತ್ತು ಅಕ್ಟೋಬರ್ 25ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನಂತರದ ನಿರ್ಧಾರದ ಮೇಲೆ ಯಥಾಸ್ಥಿತಿಗೆ ಆದೇಶಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಂಸ್ಥೆಯಾದ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ) ಕುಲಾಂತರಿ ಸಾಸಿವೆಗೆ ಪರಿಸರ ಅನುಮತಿಗೆ ಅನುಮೋದನೆ ನೀಡಿದ ಕೆಲವು ದಿನಗಳ ನಂತರ ಈ ನಿರ್ಧಾರ ಬಂದಿದೆ.

ಅಕ್ಟೋಬರ್ 18 ರಂದು ಜಿಇಎಸಿ ಸಭೆಯಲ್ಲಿ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು ಮತ್ತು ಬೀಜ ಉತ್ಪಾದನೆಗೆ ಬೀಜವನ್ನು ಪರಿಸರಕ್ಕೆ ಬಿಡುಗಡೆ ಮಾಡಲು ಶಿಫಾರಸು ಮಾಡಿದ ನಂತರ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
ಧಾರಾ ಸಾಸಿವೆ ಹೈಬ್ರಿಡ್ (DMH-11) ಒಂದು ಹೈಬ್ರಿಡ್ ಬೀಜ ವಿಧವಾಗಿದ್ದು, ಅದರ ವಾಣಿಜ್ಯೀಕರಣದ ಬಗ್ಗೆ ವಿಜ್ಞಾನಿಗಳು, ರೈತರು ಮತ್ತು ಸಾಮಾಜಿಕ ಹೋರಾಟಗಾರರ ನಡುವೆ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇದು ಭಾರತದಲ್ಲಿ ವಾಣಿಜ್ಯಿಕವಾಗಿ ಬಿಡುಗಡೆಯಾದ ಮತ್ತು ರೈತರು ಬೆಳೆದ ಮೊದಲ ಕುಲಾಂತರಿ ಬೆಳೆಯಾಗಿದೆ.
ಜೆನಿಟಿಕ್ ಮಾಡಿಫೈಟ್ ಫ್ರೀ ಇಂಡಿಯಾ ಒಕ್ಕೂಟವು ಈ ಕ್ರಮವನ್ನು ಅವೈಜ್ಞಾನಿಕ ಎಂದು ಪ್ರತಿಪಾದಿಸಿದ್ದು, ಪ್ರಕ್ರಿಯೆಯಲ್ಲಿ ಯಾವುದೇ ಜೈವಿಕ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಿದೆ.

ಇನ್ನು ಕುಲಾಂತರಿ ಸಾಸಿವೆಗಳ ವಿಷಯದಲ್ಲಿ ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಈಗಾಗಲೇ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿ, ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.












Click it and Unblock the Notifications