ಮಳೆ ಕೊರತೆ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತ, ಬಿತ್ತನೆಯಾದ ಬೆಳೆಗಳ ವಿವರ ತಿಳಿಯಿರಿ
ಚಿಕ್ಕಬಳ್ಳಾಪುರ, ಆಗಸ್ಟ್, 02 ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ಅಲ್ಲಲ್ಲಿ ಬಿರು ಮಳೆಯಾಗಿದೆ. ಆದರೆ ಹೇಳಿಕೊಳ್ಳುವಂತಹ ಮಳೆಯೇನೂ ಆಗಿಲ್ಲ. ಮಳೆ ವಿಳಂಬವಾದ ಹಿನ್ನೆಲೆ ಬಿತ್ತನೆಗಾಗಿ ಕಾದು ಕುಳಿತಿದ್ದ ರೈತರು ಈಗ ಬಿತ್ತನೆಯಲ್ಲಿ ತೊಡಗಿಕೊಂಡಿದ್ದು, ಬೇರೆ ಬೆಳೆಗಿಂತ ರಾಗಿ ಬಿತ್ತನೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಕಳೆದ 7 ದಿನಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 21.3 ಮಿಲಿ ಮೀಟರ್ ಆಗಿದ್ದು, ಒಟ್ಟು 26.2 ಮಿಲಿ ಮೀಟರ್ ಮಳೆಯಾಗಿದೆ. ಹೀಗಾಗಿ ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಜೋರಾಗಿ ನಡೆದಿದೆ. ಇಷ್ಟು ದಿನ ಮಳೆಗಾಗಿ ಕಾದು ಕುಳಿತಿದ್ದ ರೈತರು ಉಳುಮೆ ಮಾಡಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆಯಾಗುತ್ತಿದ್ದ ಶೇಂಗಾ, ಮುಸುಕಿನ ಜೋಳ ಬಿತ್ತನೆಗೆ ಅವಧಿ ಮುಗಿದಿರುವುದರಿಂದ ಹೆಚ್ಚಿನ ರೈತರು ರಾಗಿ ಬಿತ್ತನೆ ಕಡೆ ಮೊರೆಹೋಗಿದ್ದಾರೆ.

ಇನ್ನೊಂದು ಉತ್ತಮ ಪ್ರಮುಖ ಬೆಳೆಯಾದ ನೆಲಗಡಲೆಯನ್ನು ಕಳೆದ ಬಾರಿ ಇಷ್ಟೊತ್ತಿಗಾಗಲೇ 20,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇಕಡಾ 75ರಷ್ಟು ಗುರಿ ಸಾಧನೆ ಮಾಡಲಾಗಿತ್ತು. ಆದರೆ ಈ ಬಾರಿ ಇದುವರೆಗೂ ಕೇವಲ 11,550 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇಕಡಾ 43ರಷ್ಟು ಮಾತ್ರ ಬಿತ್ತನೆಯಾಗಿದೆ. ಹೀಗಾಗಿ ಈ ಬಾರಿ ನಿರೀಕ್ಷಿತ ಗುರಿ ಮುಟ್ಟುವುದು ಅಸಾಧ್ಯವಾಗಿದ್ದು, ನೆಲಗಡಲೆ ಅಭಾವ ಉಂಟಾಗುವ ಆತಂಕವೂ ಸಹ ಎದುರಾಗಿದೆ. ಬಹುತೇಕ ರೈತರು ರಾಗಿ ಅಥವಾ ಹುರುಳಿ ಮೊರೆ ಹೋಗುವ ಸಾಧ್ಯತೆಯೂ ಇದೆ.
ಕಳೆಗುಂದಿದ ಸೂರ್ಯಕಾಂತಿ
ಕಳೆದ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬೆಳೆಯನ್ನು ನಿರೀಕ್ಷೆಗೂ ಮೀರಿ 336 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಹೀಗಾಗಿ ಈ ಬಾರಿ 330 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತಾದರೂ ಕೈಕೊಟ್ಟ ಮಳೆಯಿಂದ ಇದುವರೆಗೂ ಜಿಲ್ಲೆಯಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ.
ತೊಗರಿ ಬಿತ್ತನೆಗೂ ತೊಡಕು
ಕಳೆದ ಎರಡು-ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮುಸುಕಿನ ಜೋಳದ ಬಿತ್ತನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿತ್ತು. ಕಳೆದ ಬಾರಿ ಇಷ್ಟೊತ್ತಿಗಾಗಲೇ 46,032 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇಕಡಾ 92ರಷ್ಟು ಬಿತ್ತನೆಯಾಗಿತ್ತು. ಆದರೆ ಈ ಬಾರಿ 28,523 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇಕಡಾ 56ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ಬಾರಿ 5841 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು. ಆದರೆ ಈ ಬಾರಿ ಕೇವಲ 2195 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಕಳೆದೆರೆಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆ ಕೊರತೆ ಹೆಚ್ಚಾಗಿದೆ. ಹಿಂದಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿದ್ದವು. ಆದರೆ ಈ ಬಾರಿ ಮಳೆ ವಿಳಂಬದಿಂದ ಬೆಳೆಗಳ ಬಿತ್ತನೆಯಲ್ಲೂ ಏರುಪೇರಾಗಿದ್ದು, ಹೆಚ್ಚಿನ ರೈತರು ರಾಗಿ ಬಿತ್ತನೆ ಕಡೆಗೆ ಒಲವು ತೋರುತ್ತಿದ್ದಾರೆ. ಈ ಬಾರಿ ಬಹುತೇಕ ಎಲ್ಲ ಬೆಳೆಗಳ ಬಿತ್ತನೆಯಲ್ಲೂ ಶೇಖಡವಾರು ಪ್ರಮಾಣದಲ್ಲಿ ಬಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇಷ್ಟೊತ್ತಿಗಾಗಲೇ ಬಿತ್ತನೆಯಾಗಬೇಕಿದ್ದ ಬೆಳೆಗಳ ಬದಲು ಈಗ ಎಲ್ಲರೂ ರಾಗಿ ಕಡೆ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂರಿಗೆ ಮೂಲಕ ಬಿತ್ತನೆ
ಕೃಷಿಯಲ್ಲಿ ಆಧುನಿಕತೆ ಬಂದಿದ್ದರೂ ಹೆಚ್ಚಿನ ರೈತರು ಬಿತ್ತನೆಗೆ ಕೂರಿಗೆ ಪದ್ಧತಿ ಅನುಸರಿಸುತ್ತಿರುವುದು ಕಾಣುತ್ತಿದೆ. ಈ ಪದ್ಧತಿಯಲ್ಲಿ ಜಾನುವಾರುಗಳನ್ನು ಬಳಸಿ ಬಿತ್ತನೆ ಮಾಡುವುದರಿಂದ ಸಮ ಪ್ರಮಾಣದಲ್ಲಿ ರಾಗಿ ಭೂಮಿಗೆ ಬಿದ್ದು, ಬೀಜ ಮೊಳಕೆಯೊಡೆಯಲು ಸಹಾಯಕವಾಗಿ ಉತ್ತಮ ಇಳುವರಿ ಹಾಗೂ ಕಳೆ ನಾಶಪಡಿಸಲು ಸಹಾಯಕವಾಗುತ್ತದೆ.
ಸಾಮಾನ್ಯವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಆದ್ರ್ರಾ, ಪುನರ್ವಸು, ಪುಷ್ಯಾ ಮಳೆಯ ಸಮಯ ರಾಗಿ ಬಿತ್ತನೆ ಸಕಾಲವಾಗಿದೆ. ಈಗಾಗಲೇ ಈ ಎಲ್ಲಾ ಮಳೆಗಳ ಕಾಲ ಮುಗಿದು ಹೋಗಿದೆ. ಆರ್ದ್ರಾ ಮಳೆಯ ಆರಂಭದಿಂದ ಹಿಡಿದು ಪುಷ್ಯಾ ಮುಗಿದರೂ ಹೇಳಿಕೊಳ್ಳುವಷ್ಟು ಬಿತ್ತನೆ ಆಗಿಲ್ಲ. ಸದ್ಯ ದೀರ್ಘಾವಧಿ ರಾಗಿ ಬೀಜದ ತಳಿಗಳ ಬಿತ್ತನೆ ಸಮಯ ಮುಗಿದು ಹೋಗಿದ್ದು, ಪ್ರಸ್ತುತ ಅಲ್ಪಾವಧಿ ತಳಿಯ ಬೀಜಗಳನ್ನು ಮಾತ್ರ ಬಿತ್ತನೆ ಮಾಡುವ ಅವಕಾಶವಿದೆ.

ಕೃಷಿಕರ ಬೇಡಿಕೆಗಳೇನು?
ಜಿಲ್ಲೆಯ 8 ತಾಲೂಕುಗಳಲ್ಲಿ ವಾಡಿಕೆಯಂತೆ ಈ ಬಾರಿ ಮಳೆ ಇಲ್ಲದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದು, ಸಾಕು ಪ್ರಾಣಿಗಳಿಗೆ ಮೇವು, ಕುಡಿಯುವ ನೀರಿಗೆ ತೊಂದರೆಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸಚಿವರು ಹಾಗೂ ಶಾಸಕರು ಸರ್ಕಾರದ ಗಮನ ಸೆಳೆಯುವ ಮೂಲಕ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಕೃಷಿಕರು ಅಗ್ರಹಿಸಿದ್ದಾರೆ.
ಹಿಂದಿನ ಎರಡು ಮೂರು ವರ್ಷಗಳ ಕಾಲ ಅತಿವೃಷ್ಟಿಯಿ೦ದ ಸಮಸ್ಯೆಯಾಗಿತ್ತು. ಈ ಬಾರಿ ಮಳೆ ಕೊರತೆ ಎದುರಾಗಿದೆ. ಈಗೇನೋ ಮಳೆ ಬೀಳುವ ರೀತಿಯೇ ಇದೆ. ಆದರೆ ಎಲ್ಲಿಯೂ ಸರಿಯಾದ ಮಳೆಯಾಗಿಲ್ಲ. ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬಿತ್ತನೆ ಮಾಡಿದರೂ ಬೆಳೆ ಕೈಗೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಎಂದು ರೈತ ಮುಖಂಡರ ಚಿಕ್ಕತಮ್ಮನಹಳ್ಳಿಯ ವೇಣುಗೋಪಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳು ಮುಗಿಯುತ್ತ ಬಂದರರೂ ಇದುವರೆಗೂ ಸರಿಯಾದ ಮಳೆಯಾಗಿಲ್ಲ. ಬಿದ್ದಿರುವ ಅಲ್ಪ ಸ್ವಲ್ಪ ಮಳೆಯನ್ನು ನಂಬಿ ರಾಗಿಯನ್ನು ಬಿತ್ತನೆ ಮಾಡುತ್ತಿದ್ದೇವೆ. ಇದೀಗ ಚೆನ್ನಾಗಿ ಬಿದ್ದರೆ ಮಾತ್ರ ಬೆಳೆ ಚೆನ್ನಾಗಿ ಆಗಬಹುದು. ಇಲ್ಲವಾದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಸಿಗುವುದು ಕಷ್ಟವಾಗಲಿದೆ.
ಎಂದು ಇಡ್ರಹಳ್ಳಿಯ ರೈತರ ವೆಂಕಟರಾಯಪ್ಪ ಧರ್ಮರಾಜು ಅಳಲು ತೋಡಿಕೊಂಡಿದ್ದಾರೆ.
ಅರ್ಧದಷ್ಟು ಆಗದ ಬಿತ್ತನೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಜುಲೈ ಅಂತ್ಯಕ್ಕೆ ಶೇಕಡಾ 83ರಷ್ಟು ಬಿತ್ತನೆ ಕಾರ್ಯ ಮುಗಿದಿತ್ತು. ಆದರೆ ಈ ಬಾರಿ ಇದುವರೆಗೂ ಕೇವಲ ಕೇವಲ 41ರಷ್ಟು ಮಾತ್ರ ಬಿತ್ತನೆಯಾಗಿದೆ. ಆದರಲ್ಲೂ ಕಳೆದ ಬಾರಿ 2,232 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಿದ್ದು, ಇಷ್ಟೊತ್ತಿಗಾಗಲೇ ನಿರೀಕ್ಷೆ ಮೀರಿ 3,799 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿತ್ತು. ಆದರೆ ಈ ಬಾರಿ ಇದುವರೆಗೂ ಕೇವಲ 290 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.












Click it and Unblock the Notifications