ರೈತರ ಮೇಲೆ ಕಾರು ಹತ್ತಿಸಿದ ಶಿರೋಮಣಿ ಅಕಾಲಿ ದಳ್ ನಾಯಕ: ಎಸ್‌ಕೆಎಂ ಖಂಡನೆ
ಉತ್ತರಪ್ರದೇಶದ ಲಿಖೀಂಪುರ್ ಖೇರಿಯಲ್ಲಿ ರೈತರ ಮೇಲೆ ನಡೆದ ದಾಳಿಯಂಥ ಭಯಂಕರ ಕೃತ್ಯವೊಂದು ಮಧ್ಯಪ್ರದೇಶದ ಫೆರೋಜ್‌ಪುರ್‌ನಿಂದ ಮೊನ್ನೆಯಷ್ಟೇ ವರದಿಯಾಗಿದೆ. ಸಮಾರಂಭವೊಂದಕ್ಕೆ ತೆರಳಿದ್ದ ಅಕಾಲಿದಳದ ನಾಯಕಿ, ಮಾಜಿ ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಅವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮುಂದಿಡಲು ಸೇರಿದ್ದ ರೈತರಿಗೆ ಕಾರ್ಯಕ್ರಮ ಮುಗಿದ ಮೇಲೆ ಭೇಟಿಯಾಗುವುದಾಗಿ ಹೇಳಿದ್ದರು, ಈಗ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಬೇಕಾಗಿ ಕೌರ್ ಕೋರಿದ್ದಾರೆ.
ಅಂತೆಯೇ ರೈತರು ತಾಳ್ಮೆಯಿಂದ ಕಾದಿದ್ದರು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಭೇಟಿ ನಿರಾಕರಿಸಿದ್ದಾರೆ. ಆಮೇಲೆ ನಡೆದದ್ದೇ ಬೇರೆ. ರೈತರ ಮೇಲೆ ಮೇಲೆ ಗುಂಡು ಹಾರಿಸಲಾಗಿದ್ದು, SAD (ಶಿರೋಮಣಿ ಅಕಾಲಿ ದಳ್) ನಾಯಕರು ಐವರು ರೈತರ ಮೇಲೆ ಕಾರು ಹತ್ತಿಸಿದ್ದಾರೆ.
ಶಿರೋಮಣಿ ಅಕಾಲಿ ದಳದ ಮಾಜಿ ಶಾಸಕ ನೋನಿ ಮಾನ್ ಚಳವಳಿ ನಿರತ ರೈತರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾರೆ. ರೈತ ಹರ್ನೇಕ್ ಸಿಂಗ್ ಕಾರಿಗೆ ಸಿಲುಕಿದ್ದರೂ ಒಂದು ಕಿಲೋಮೀಟರ್‌ವರೆಗೆ ಎಳೆದೊಯ್ಯಲಾಗಿದೆ. ಇದೊಂದು ಅಮಾನುಷ ಕೃತ್ಯವಾಗಿದ್ದು, ಈ ಕೃತ್ಯವನ್ನು ಸಂಯುಕ್ತ ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. SAD ನಾಯಕರ ಮೇಲೆ ಕೊಲೆ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿ ಗುರುವಾರ (ನ.11) ಫೆರೋಜ್‌ಪುರ್ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಜಾಥಾ ಹಮ್ಮಿಕೊಳ್ಳಲಾಗಿದೆ.
ದಿಲ್ಲಿ ಗಡಿಗಳಲ್ಲಿ ಜಮಾವಣೆಗೊಂಡಿರುವ ರೈತ ಚಳವಳಿಗೆ ಇದೇ ನವೆಂಬರ್ 26ಕ್ಕೆ ಒಂದು ವರ್ಷ ತುಂಬಲಿದೆ. ಇದೊಂದು ಐತಿಹಾಸಿಕ ರೈತ ಚಳವಳಿ. ಇಡೀ ದೇಶಾದ್ಯಂತ ರೈತರು ಜಾಥಾ, ಪ್ರತಿಭಟನೆ, ಮೆರವಣಿಗೆ ಸಭೆಗಳನ್ನು ಅತ್ಯಂತ ಉತ್ಸಾಹದಿಂದ ಮಾಡಿದ್ದಾರೆ. ಒಂದು ವರ್ಷ ತುಂಬಲಿರುವ ದಿನದಂದು ದೇಶದ ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 22ರಂದು ಲಕ್ನೋದಲ್ಲಿ ಅತಿದೊಡ್ಡ ಕಿಸಾನ್ ಮಹಾ ಪಂಚಾಯತ್ ಏರ್ಪಡಿಸಲಾಗಿದೆ. 28ರಂದು ಮುಂಬೈನಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ. ದಿನೇ ದಿನೇ ರೈತ ಚಳುವಳಿ ತನ್ನ ಕಾವು ಹೆಚ್ಚಿಸಿಕೊಳ್ಳುತ್ತಿದೆ.
ನವೆಂಬರ್ 29ಕ್ಕೆ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಂದು ಆರಂಭಗೊಂಡು ಪ್ರತಿ ದಿನ 500 ರೈತರು ಟ್ರಾಕ್ಟರ್‌ಗಳನ್ನು ಚಲಾಯಿಸಿಕೊಂಡು ಪಾರ್ಲಿಮೆಂಟ್ ಸುತ್ತವರಿಯಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.