ಕಾಯ್ದೆಗಳ ರದ್ದತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಕೇಂದ್ರ ಸಚಿವ ರಾಮದಾಸ್ ಅಠವಳೆ
ನವದೆಹಲಿ, ಡಿಸೆಂಬರ್ 21: ಪ್ರತಿಭಟನೆಯ ಕಾರಣಕ್ಕೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾರಕವಾಗಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ಸಂಸತ್‌ನಲ್ಲಿ ಅನುಮೋದನೆಗೊಂಡಿರುವ ಕಾನೂನುಗಳನ್ನು ಪ್ರತಿಭಟನೆಗೆ ಬಾಗಿ ಹಿಂದಕ್ಕೆ ಪಡೆದುಕೊಳ್ಳುವುದನ್ನು ಕೇಂದ್ರ ಸರ್ಕಾರ ಆರಂಭಿಸಿದರೆ ಅದು ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯಕಾರಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಬಗ್ಗೆ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಈ ಬೇಡಿಕೆಯು ನ್ಯಾಯಸಮ್ಮತವಾಗಿಲ್ಲ ಎಂದಿದ್ದಾರೆ.
'ಕಾನೂನನ್ನು ಸಂಸತ್‌ನಲ್ಲಿ ಬಹುಮತದಿಂದ ಅಂಗೀಕರಿಸಲಾಗಿದೆ. ಪ್ರತಿಭಟನೆಗಳು ಇವೆ ಎಂಬ ಕಾರಣಕ್ಕೆ ಅಂತಹ ಕಾನೂನುಗಳನ್ನು ವಾಪಸ್ ಪಡೆದುಕೊಂಡರೆ ಸಂಸತ್ತಿನ ಸದನಗಳಲ್ಲಿ ಅಂಗೀಕಾರವಾಗುವ ಪ್ರತಿ ಕಾಯ್ದೆಗಳ ವಿರುದ್ಧವೂ ಪ್ರತಿಭಟನೆ ನಡೆಸಲು ದೃಷ್ಟಾಂತ ನೀಡಿದಂತೆ ಆಗುತ್ತದೆ. ಇದರಿಂದ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ' ಎಂದು ಹೇಳಿದ್ದಾರೆ.

'ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಇತ್ತೀಚೆಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಕಾಯ್ದೆಗಳಿಂದ ಕನಿಷ್ಠ ಬೆಂಬಲ ದರ (ಎಂಎಸ್‌ಪಿ) ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಕೇಂದ್ರ ಸರ್ಕಾರ ಮುಂದಿಡುತ್ತಿರುವ ರಾಜಿ ಸಂಧಾನ ಸೂತ್ರಗಳನ್ನು ರೈತರು ಒಪ್ಪಿಕೊಳ್ಳಬೇಕು' ಎಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications