ಕೊಪ್ಪಳ: ಹಣ್ಣು ಮತ್ತು ಜೇನು ಮೇಳ, ದಾಖಲೆಯ ವಹಿವಾಟು
ಕೊಪ್ಪಳ, ಮಾರ್ಚ್ 10: ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ಮೂರು ದಿನಗಳ ಹಣ್ಣು ಮತ್ತು ಜೇನು ಮೇಳ 2024ಕ್ಕೆ ತೆರೆ ಬಿದ್ದಿದೆ. ಮಹಾಶಿವರಾತ್ರಿ ಅಂಗವಾಗಿ 7ನೇ ವರ್ಷದ ಹಣ್ಣು ಮತ್ತು ಜೇನು ಮೇಳ ಮಾಚ್ 6 ರಿಂದ 9ರ ತನಕ ನಡೆಯಿತು. ದಾಖಲೆಯ ವಹಿವಾಟು ಈ ಮೇಳದಲ್ಲಿ ನಡೆದಿದೆ.
ಈ ಕುರಿತು ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಅಂಗವಾಗಿ ಹಣ್ಣು ಮತ್ತು ಜೇನು ಮೇಳ 2024 ಅನ್ನು ತೋಟಗಾರಿಕೆ ಇಲಾಖೆ (ಜಿಪಂ) ಕೊಪ್ಪಳ ಕಛೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಹಿಂದಿನ ಮೇಳಕ್ಕಿಂತಲೂ ಹೆಚ್ಚಿನ ವಹಿವಾಟು ನಡೆದು ದಾಖಲೆ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ 10ಕ್ಕೂ ಹೆಚ್ಚಿನ ವಿವಿಧ ಹಣ್ಣುಗಳಾದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಬಾಳೆ, ಡ್ರಾಗನ್ ಫ್ರೂಟ್, ಸಪೋಟಾ, ಪಪ್ಪಾಯ ಹಾಗೂ ಜೇನು ಹಾಗೂ ಜೇನಿನ ವಿವಿಧ ಉತ್ಪನ್ನಗಳನ್ನು ಸಹ ಮಾರಾಟ ಮಾಡಲು 18ಕ್ಕೂ ಹೆಚ್ಚು ಮಳಿಗೆಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿತ್ತು.
ಈ ಮೇಳದಲ್ಲಿ ವಿವಿಧ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆ, ಕೊಪ್ಪಳ ರೈತರು ಸಹ ಜಿಲ್ಲೆಯಲ್ಲಿ ರೈತರಿಂದ ಹಣ್ಣುಗಳನ್ನು ಖರೀದಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಮೇಳದಲ್ಲಿ ರೈತರ ವಿವಿಧ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಎಷ್ಟು ವಹಿವಾಟು ನಡೆಯಿತು?; ಮೇಳದಲ್ಲಿ ದ್ರಾಕ್ಷಿಯ ವಿವಿಧ ತಳಿಗಳಲ್ಲದೇ ಕಲ್ಲಂಗಡಿ ಹಣ್ಣಿನ ಹಳದಿ ಮತ್ತು ಗುಲಾಬಿ ತಿರುಳು ಹೊಂದಿದ ತಳಿಗಳು ಮತ್ತು ಪಪ್ಪಾಯ ಹಣ್ಣಿನ ಮೂರು ತರಹದ ತಳಿಗಳು ಮತ್ತು ಪೇರಲ ಹಾಗೂ ದಾಳಿಂಬೆ ಹಣ್ಣಿನ ತಳಿಗಳನ್ನು ಗ್ರಾಹಕರಿಗೆ ಪೂರೈಸಲಾಗಿದೆ.
ಮೇಳದಲ್ಲಿ ಉತ್ಕೃಷ್ಟ ಗುಣಮಟ್ಟದ ಜೇನು ತುಪ್ಪ ಹಾಗೂ ಜೇನಿನ ಉಪ ಉತ್ಪನ್ನಗಳನ್ನು ಕಲ್ಲಳ್ಳಿ ಜೇನು ಶಿರಸಿ ಅವರು ಹಾಗೂ ಕೊಪ್ಪಳದ ರೈತ ಜೇನು ಬೆಳೆಗಾರರು ಕೂಡಾ ಭಾಗವಹಿಸಿ ಗ್ರಾಹಕರಿಗೆ ಪೂರೈಸಿದರು. ಈ ಮೇಳದಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಲಾಭವನ್ನು ಪಡೆದರು.
ಈ ಮೇಳದಲ್ಲಿ 25,000ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿರುತ್ತಾರೆ ಹಾಗೂ ರೂ. 38 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುತ್ತದೆ. ಮೇಳದಲ್ಲಿ ಗ್ರಾಹಕರು ಹಳದಿ ತಿರುಳಿನ ಕಲ್ಲಂಗಡಿ ಹಣ್ಣನ್ನು ಅತೀ ಹೆಚ್ಚು ಖರೀದಿಸಿದರು ಹಾಗೂ ಕೆಂಪು ತಿರುಳಿನ ಕಲ್ಲಂಗಡಿ ಸಹ ಮಾರಾಟವಾಗಿ ಒಟ್ಟು 30 ಟನ್‌ಗೂ ಹೆಚ್ಚಿನ ಕಲ್ಲಂಗಡಿ ಮಾರಾಟವಾಯಿತು. 15 ಟನ್‌ಗೂ ಹೆಚ್ಚಿನ ಕರಬೂಜ, 5 ಟನ್‌ಗೂ ಹೆಚ್ಚು ದಾಳಿಂಬೆ, 10 ಟನ್‌ಗೂ ಹೆಚ್ಚು ದ್ರಾಕ್ಷಿ ಹಾಗೂ ಅಂಜೂರ, ಪೇರಲ, ಚಿಕ್ಕು, ಬಾಳೆ ಹಾಗೂ ವಿವಿಧ ಹಣ್ಣುಗಳು ಮಾರಾಟವಾದವು.
ಹಳದಿ ಮತ್ತು ಕೆಂಪು ತಿರುಳಿನ ಕಲ್ಲಂಗಡಿಯನ್ನು ಅಲ್ಲಿಯೇ ಗ್ರಾಹಕರಿಗೆ ಕತ್ತರಿಸಿ ಪೂರೈಸುವ ವ್ಯವಸ್ಥೆ ಸಹ ಮಾಡಲಾಗಿತ್ತು. 5 ಟನ್‌ಗೂ ಹೆಚ್ಚಿನ ಕಲ್ಲಂಗಡಿ ಹಣ್ಣುಗಳನ್ನು ಗ್ರಾಹಕರು ಸವಿದರು. ಈ ಮೇಳದಲ್ಲಿ 3 ಟನ್‌ಗೂ ಹೆಚ್ಚಿನ ಜೇನು ಹಾಗೂ ಜೇನಿನ ವಿವಿಧ ಉತ್ಪನ್ನಗಳು ಮಾರಾಟವಾದವು. ಗ್ರಾಹಕರು ಜೇನು ಹಾಗೂ ಜೇನಿನ ಉತ್ಪನ್ನಗಳನ್ನು ಮುಗಿಬಿದ್ದು ಖರೀದಿಸಿದರು.
ರೈತರಿಗೆ ನೇರ ಮಾರುಕಟ್ಟೆ ಮತ್ತು ಬಾಕ್ಸ್ ಪ್ಯಾಕಿಂಗ್‌ಗಳಲ್ಲಿ ಹಣ್ಣುಗಳನ್ನು ಪೂರೈಸುವ ಮೂಲಕ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ಮಾರುಕಟ್ಟೆ ಕಂಡುಕೊಳ್ಳುವ ಕೌಶಲ್ಯವನ್ನು ತಿಳಿಸಿಕೊಟ್ಟಂತಾಗಿದೆ.
10ಕ್ಕೂ ಹೆಚ್ಚು ದ್ರಾಕ್ಷಿಯ ವಿವಿಧ ತಳಿಗಳು, ಕಲ್ಲಂಗಡಿ ಹಣ್ಣಿನ 4 ವಿವಿಧ ತಳಿಗಳು (ಕೆಂಪು, ಹಳದಿ, ಬಿಳಿ, ಕಿತ್ತಳೆ ಬಣ್ಣ ಇತ್ಯಾದಿ), ಪೇರಲ ಹಣ್ಣಿನ 5 ಕ್ಕೂ ಹೆಚ್ಚು ತಳಿಗಳು ಮತ್ತು ದಾಳಿಂಬೆಯ 2 ತಳಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಕಮಲಾಪೂರದ ಕೆಂಪು ಬಾಳೆ, ನೇಂದ್ರನ್ ಬಾಳೆ ಹಾಗೂ ಬೆಣ್ಣೆ ಹಣ್ಣು, ಹಸಿರು ಸೇಬು ಹಾಗೂ ವಿವಿಧ ಸಂಸ್ಕರಿಸಿದ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಗ್ರಾಹಕರು ಇವುಗಳನ್ನು ನೋಡಿ ಅತ್ಯಂತ ಖುಷಿಪಟ್ಟರಲ್ಲದೇ ರೈತರು ಕೂಡಾ ಪ್ರದರ್ಶನದಲ್ಲಿ ಇಟ್ಟಿರುವ ವಿವಿಧ ದ್ರಾಕ್ಷಿ ತಳಿಗಳನ್ನು ಹಾಗೂ ಬೆಣ್ಣೆ ಹಣ್ಣು, ನೇಂದ್ರನ್ ಬಾಳೆ ನೋಡಿ ತಾವು ಸಹ ಈ ರೀತಿಯ ತಳಿಗಳನ್ನು ಬೆಳೆಯಬೇಕೆಂದು ಇಚ್ಛಿಸಿರುತ್ತಾರೆ ಹಾಗೂ ಇಲಾಖೆಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳ ಸದ್ಭಳಕೆ ಮಾಡಿಕೊಂಡು ದ್ರಾಕ್ಷಿ ಅಲ್ಲದೇ ಇತರೇ ಹಣ್ಣುಗಳನ್ನು ಬೆಳೆಯಲು ಆಸಕ್ತಿ ಹೊಂದಿರುತ್ತಾರೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಈ ಮೇಳದಲ್ಲಿ ಹಣ್ಣುಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡಲು ಪುನೆಟ್ ಬಾಕ್ಸ್ ಮತ್ತು ರಟ್ಟಿನ ಬಾಕ್ಸ್ ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮೌಲ್ಯವರ್ಧನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು, ರೈತರು ಪುನೆಟ್ ಬಾಕ್ಸ್ ನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಪ್ಯಾಕ್ ಮಾಡಿ ಹೆಚ್ಚಿನ ಮೌಲ್ಯಕ್ಕೆ ಸರಬರಾಜು ಮಾಡಿರುತ್ತಾರೆ.
ರೈತರು ಮತ್ತು ಗ್ರಾಹಕರ ನಡುವೆ ಉತ್ತಮ ಸೇತುವೆ ಕಲ್ಪಿಸುವಲ್ಲಿ ಈ ಮೇಳ ಅತ್ಯಂತ ಸಹಕಾರಿಯಾಗಿದ್ದು, ರೈತರಿಗೆ ಉತ್ತಮ ದರ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಯೋಗ್ಯ ದರದಲ್ಲಿ ಒದಗಿಸುವಲ್ಲಿ ಸಹಕಾರಿಯಾಗಿದೆ. ಈ ಮೇಳವು ರೈತರ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿದಲ್ಲದೇ ಗ್ರಾಹಕರಿಗೂ ಸಹ ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಒಂದೇ ಸೂರಿನಡಿ ಹತ್ತಾರು ಹಣ್ಣುಗಳನ್ನು ಮಹಾಶಿವರಾತ್ರಿ ಹಬ್ಬಕ್ಕೆ ಖರೀದಿಸಲು ಅವಕಾಶ ಕಲ್ಪಿಸಲಾಯಿತು.












Click it and Unblock the Notifications