ಕಮಲಾಪುರ ಕೆಂಬಾಳೆ, ತೊಗರಿ, ಸಿರಿಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸಿ
ಕಲಬುರಗಿ, ಡಿಸೆಂಬರ್ 21; ಕಲಬುರಗಿಯ ಕಮಲಾಪುರದಲ್ಲಿ ಬೆಳೆಯುವ ಕೆಂಬಾಳೆ, ಏಷ್ಯಾಯಾದಲ್ಲಿಯೇ ಗುಣಮಟ್ಟದಿಂದ ಕೂಡಿರುವ ಇಲ್ಲಿ ಬೆಳೆಯುವ ತೊಗರಿ, ಸಿರಿಧಾನ್ಯ ಸೇರಿದಂತೆ ಕೃಷಿ, ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆ ಮತ್ತು ಬ್ಯಾಂಡಿಂಗ್‌ಗೆ ಮುಂದಾಗಿ ಎಂದು ಸಚಿವರು ಅಧಿಕಾರಿಗಳಿಗೆ ಕರೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಯಾವ ರಾಜ್ಯದಲ್ಲಿಯೂ ಇರದ ಕೃಷಿ, ತೋಟಗಾರಿಕೆ, ಪಶುಸಂಗೋನೆ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ಇಲ್ಲಿ ಹೆಚ್ಚಿವೆ. ಇವೆಲ್ಲದರ ಸಹಕಾರ ಪಡೆಯಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬ್ರ್ಯಾಂಡಿಂಗ್‌ಗೆ ಸರ್ಕಾರ, ಕೆ.ಕೆ.ಆರ್.ಡಿ.ಬಿ. ಮಂಡಳಿ ಎಲ್ಲಾ ರೀತಿಯ ನೆರವು ನೀಡಲಿದೆ. ಡಿಪಿಆರ್ ತಯಾರಿಸಿಕೊಂಡು ಬನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ಸಲ ಕೋವಿಡ್ ಸಮದರ್ಭದಲ್ಲಿ ಬಹಳಷ್ಟು ರೈತರು ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು, ಮುಂದೆ ಹೀಗಾಗಬಾರದು. ಏನಾದರು ವಿನೂತನ ಪ್ರಯತ್ನ ಮಾಡಿ. ಇದರಿಂದ ರೈತರ ಆದಾಯ ದ್ವಿಗುಣವಾಗಬೇಕು ಎಂದರು.
ಇತ್ತೀಚೆಗೆ ತೆಲಂಗಾಣಾಗೆ ಹೋಗಿದ್ದಾಗ ಇಲ್ಲಿನ ತೊಗರಿ ಅಲ್ಲಿ ಮೂರು ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಂಸ್ಕರಣೆ, ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದಲ್ಲಿ ನಮ್ಮ ರೈತರ ಆದಾಯ ವೃದ್ಧಿ ಜೊತೆಗೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.
ಕೋಲ್ಡ್ ಸ್ಟೋರೇಜ್ ಸ್ಥಾಪನೆ; ಸಭೆಯಲ್ಲಿ ಶಾಸಕ ಬಿ. ಆರ್. ಪಾಟೀಲ ಮಾತನಾಡಿ, "ಆಳಂದ, ಕಲಬುರಗಿ ಸೇರಿದಂತೆ ಜಿಲ್ಲೆಯ ಅವಶ್ಯಕತೆ ಇದ್ದ ಕಡೆ ತೋಟಗಾರಿಕೆ ಬೆಳೆ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಸ್ಥಾಪಿಸಬೇಕು" ಎಂದು ಸಲಹೆ ನೀಡಿದರು.
ಶಾಸಕ ಎಂ. ವೈ. ಪಾಟೀಲ ಮಾತನಾಡಿ, "ತೋಟಗಾರಿಕೆ ಪ್ರದೇಶ ವಿಸ್ತರಣೆ ಆಗುತ್ತಿಲ್ಲ. ಯಾವುದೇ ಕ್ರಿಯಾತ್ಮಕ ಚಟುವಟಿಕೆ ಇಲಾಖೆಯಿಂದ ಕಂಡುಬರುತ್ತಿಲ್ಲ" ಎಂದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, "ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿಗಳ ಆಯ್ಕೆ ಪಾರದರ್ಶಕತೆಯಿಂದ ನಡೆಯುತ್ತಿಲ್ಲ, ನಕಲಿ ಬಿಲ್ ಪಾವತಿ ಆಗುತ್ತಿದೆ ಎಂಬ ಅರೋಪ ಕೇಳಿಬಂದಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇದು ಪುನರಾವರ್ತನೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿಲಾಗುವುದು" ಎಂದು ಎಚ್ಚರಿಸಿದರು.
ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮಾತನಾಡಿ, "ಮುಂದಿನ 2024-25ನೇ ಸಾಲಿನಲ್ಲಿ ರೈತರ ಹಿತಕಾಯುವ ನಿಟ್ಟಿನಲ್ಲಿ ಕೃಷಿ ವಲಯಕ್ಕೆ ಮಂಡಳಿ ಹೆಚ್ಚಿನ ಒತ್ತು ನೀಡಲು ಹೆಚ್ಚಿನ ಅನುದಾನ ಮೀಸಲಿರಿಸಲು ಚಿಂತನೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.62 ರಷ್ಟು ಕೃಷಿ ಅವಲಂಬನೆ ಇದೆ. ಪ್ರದೇಶದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಿನ ಒಂದು ತಿಂಗಳೊಳಗೆ ಕೃಷಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಡಿಪಿಆರ್ ಸಲ್ಲಿಸಬೇಕು" ಎಂದು ಹೇಳಿದರು.












Click it and Unblock the Notifications