ಬಳ್ಳಾರಿಯಲ್ಲಿ ನಿರ್ಮಾಣವಾಗಲಿದೆ ಆಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್
ಬಳ್ಳಾರಿ, ಜನವರಿ 11: ಗಣಿನಾಡು ಬಳ್ಳಾರಿ ಜಿಲ್ಲೆಯ ರೈತರಿಗೆ ಸಿಹಿಸುದ್ದಿಯೊಂದಿದೆ. ಬಳ್ಳಾರಿಯಲ್ಲಿ ಆಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತದೆ. ಈ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ, ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಸಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, "ಬಳ್ಳಾರಿ ಜಿಲ್ಲೆಯಲ್ಲಿ ಕೆಎಂಇಆರ್‌ಸಿ ಅನುದಾನದಲ್ಲಿ ರೂ.20 ಕೋಟಿ ಹೆಚ್ಚಿನ ವೆಚ್ಚದಲ್ಲಿ ಬಳ್ಳಾರಿ ಆಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್ (ಬಿಎಪಿಸಿ) ನಿರ್ಮಾಣಕ್ಕೆ ರಾಜ್ಯ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ರೈತರಿಗೆ ಸಹಾಯಕವಾಗಲಿದೆ; ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, "ಬಳ್ಳಾರಿ ಜಿಲ್ಲೆಯು ಮೆಣಸಿನಕಾಯಿ ಬೆಳೆಗೆ ಹೆಸರುವಾಸಿಯಾಗಿದೆ. ನಮ್ಮ ಭಾಗದ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದ ಬಿಎಪಿಸಿ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ" ಎಂದು ತಿಳಿಸಿದರು.
"ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಖರೀದಿದಾರರ ಮತ್ತು ಮಾರಾಟಗಾರರ ಸಹಕಾರ ಅಗತ್ಯವಿದೆ" ಎಂದು ತಿಳಿಸಿದರು.
ಕೇರಳದ ಕೊಚ್ಚಿನ್‍ನ ಭಾರತೀಯ ಸಂಬಾರು ಮಂಡಳಿಯ (ಅಭಿವೃದ್ಧಿ) ನಿರ್ದೇಶಕ ಧರಮೇಂದರ್ ದಾಸ್ ಮಾತನಾಡಿ, "ಕರ್ನಾಟಕ ರಾಜ್ಯವು ಮಸಾಲೆ ಪದಾರ್ಥಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಕರ್ನಾಟಕ ರಾಜ್ಯವು ಮೆಣಸಿನಕಾಯಿ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಭಾರತದ ಮಸಾಲೆ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ" ಎಂದರು.
"ಭಾರತವು ನಾನಾ ಮಸಾಲೆಗಳ ತವರು ಭೂಮಿಗೆ ಹೆಸರುವಾಸಿಯಾಗಿದೆ. 2022-23 ರ ಅವಧಿಯಲ್ಲಿ ಭಾರತವು 14 ಲಕ್ಷ ಮೆಟ್ರಿಕ್ ಟನ್ ಮಸಾಲೆ ಹಾಗೂ ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಿದೆ. 2030ರ ವೇಳೆಗೆ 10 ಶತಕೋಟಿ ಡಾಲರ್‌ಗಳನ್ನು ಸಾಧಿಸಲು ಭಾರತ ದೇಶವು ಮಸಾಲೆ ರಫ್ತು ಗುರಿಯನ್ನು ಹೊಂದಿದೆ" ಎಂದು ತಿಳಿಸಿದರು.
"ಅದೇರೀತಿಯಾಗಿ ದೇಶದಿಂದ ಮಸಾಲೆಗಳ ರಫ್ತು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮಾವೇಶಗಳ ಮೂಲಕ ಪರಿಚಯಿಸುತ್ತಿದೆ. ಖರೀದಿದಾರರು ಮತ್ತು ಮಾರಾಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.
ಭಾರತೀಯ ಸಂಬಾರು ಮಂಡಳಿಯು ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಮತ್ತು ಅವರ ಕೃಷಿ ಉತ್ಪನ್ನಗಳ ಗರಿಷ್ಠ ಬೆಲೆಯನ್ನು ಪಡೆಯಲು ಖರೀದಿದಾರರೊಂದಿಗೆ ನೇರವಾಗಿ ವ್ಯಾಪಾರ ಸಂಪರ್ಕವನ್ನು ರಚಿಸುವ ಮೂಲಕ ರಫ್ತುಗಳನ್ನು ಬೆಂಬಲಿಸಲು ಸಾಮಾನ್ಯ ವೇದಿಕೆಯನ್ನೂ ಕಲ್ಪಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹೊರತಂದ 'ಮೆಣಸಿನಕಾಯಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು' ಎಂಬ ಕಿರು ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರದಲ್ಲಿ ಸಂಬಾರು ಪದಾರ್ಥಗಳ ಖರೀದಿದಾರ ಮತ್ತು ಮಾರಾಟಗಾರರ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ನಾನಾ ತಳಿಗಳ ಮೆಣಸಿನಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಯ ಪದಾರ್ಥಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಹಲವು ರೈತರು ಸಮಾವೇಶ ಮತ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications