Get Updates
Get notified of breaking news, exclusive insights, and must-see stories!

ದಾವಣಗೆರೆ: ರೈತರ ಕರುಳು ಹಿಂಡುತ್ತಿರುವ ಗಿಳಿಗಳ ಹಿಂಡು, ಪಾಪ್ ಕಾರ್ನ್ ಮೆಕ್ಕೆಜೋಳ ಬೆಳೆದವರ ಪಾಡಂತೂ..

ದಾವಣಗೆರೆ, ಆಗಸ್ಟ್‌, 22: ಮಳೆ ಇಲ್ಲದಿದ್ದರೂ ಕೂಡ ದಾವಣಗೆರೆ ಜಿಲ್ಲೆಯ ಹಲವೆಡೆ ಪಾಪ್ ಕಾರ್ನ್ ಮಕ್ಕೆಜೋಳದ ಫಸಲು ಚೆನ್ನಾಗಿಯೇ ಬಂದಿವೆ. ಆದರೆ ಗಿಳಿಗಳ ಕಾಟದಿಂದ ಇವುಗಳನ್ನು ಉಳಿಸಿಕೊಳ್ಳುವುದೇ ಇಲ್ಲಿನ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮೊದಲೇ ಬೆಳೆ ಇಲ್ಲ. ಮಳೆ ಬಾರದೇ ಬೆಳೆ ಒಣಗಿ ಹೋಗಿತ್ತು. ಮತ್ತೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತರು ಬೆಳೆಯು ಚೆನ್ನಾಗಿ ಬರಬಹುದು ಎಂದುಕೊಂಡಿದ್ದರು. ಜುಲೈ ತಿಂಗಳಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದ ಪರಿಣಾಮ ಶೇಕಡಾ 50ರಷ್ಟು ಬೆಳೆ ನಷ್ಟವಾಗಿದೆ. ಈಗ ಗಿಳಿಗಳ ಹಿಂಡು ಬಂದು ಜೋಳ ತಿನ್ನುತ್ತಿವೆ. ಎಲ್ಲಿ ಹೋಗಿ ನೋಡಿದರೂ ಮೆಕ್ಕೆಜೋಳ ತೆನೆ ಕಾಣುತ್ತದೆ. ಆದರೆ ಮೆಕ್ಕೆಜೋಳ ಮಾತ್ರ ಕಾಣ ಸಿಗುವುದೇ ಇಲ್ಲ. ಅಲ್ಲೇನಿದ್ದರೂ ಖಾಲಿ ಖಾಲಿಯಾಗಿರುವ ದಿಂಡು ಕಣ್ಣಿಗೆ ಬೀಳುತ್ತವೆ.

Popcorn maize crop destroyed by Parrot, Farmers worried in Davanagere district

ಒಂದು ಕಡೆ ಮಳೆ ಅಭಾವದ ನಡುವೆಯೂ ರೈತರು ಸಾಲ ಸೋಲ ಮಾಡಿ ಪಾಪ್ ಕಾರ್ನ್ ಮೆಕ್ಕೆಜೋಳ ಬೆಳೆ ಬೆಳೆಯುತ್ತಿದ್ದರೆ, ಮತ್ತೊಂದೆಡೆಡೆ ಗಿಳಿಗಳಿಗೆ ಆಹಾರ ಸಿಗದೇ ರೈತರ ಜಮೀನುಗಳಿಗೆ ಹಿಂಡು ಹಿಂಡಾಗಿ ಲಗ್ಗೆ ಇಟ್ಟು ಸಂಪೂರ್ಣ ಬೆಳೆಗಳನ್ನು ನಾಶ ಮಾಡುತ್ತಿವೆ. ಚನ್ನಗಿರಿ ತಾಲೂಕಿನ ಸಂತೆಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಪರಿಸ್ಥಿತಿ ತಲೆದೋರಿದೆ.

ಇನ್ನು ಬೇರೆ ಕಡೆಗಳಲ್ಲಿ ಮೆಕ್ಕೆಜೋಳ ಬರುವುದಕ್ಕಿಂತ ಮುಂಚೆ ಇಲ್ಲಿ ಬೆಳೆ ಬರುವುದರಿಂದ ಗಿಳಿಗಳು ಇಲ್ಲಿಗೆ ಲಗ್ಗೆ ಇಡುತ್ತವೆ. ಆಹಾರ ಅರಸಿ ಬರುವ ಗಿಳಿಗಳ ಹಿಂಡುಗಳ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಬೆಳಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ಬರುವ ಗಿಳಿಗಳ ಹಿಂಡು ಪಾಪ್ ಕಾರ್ನ್ ಮೆಕ್ಕೆಜೋಳ ತಿಂದು ಹೋಗುತ್ತಿವೆ. ರೈತರು ಇವುಗಳನ್ನು ಓಡಿಸಲು ಪಡುತ್ತಿರುವ ಕಷ್ಟ ಮಾತ್ರ ಅಷ್ಟಿಷ್ಟಲ್ಲ.

ಕಳೆದ ವರ್ಷಗಳಲ್ಲಿ ಗಿಳಿಗಳ ಹಿಂಡು ಬರುತ್ತಿದ್ದವು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಪಾಪ್ ಕಾರ್ನ್ ಮೆಕ್ಕೆಜೋಳವನ್ನು ತಿಂದು ಹೋಗುತ್ತಿರಲಿಲ್ಲ. ಆದರೆ ಈ ಬಾರಿಯಂತೂ ಬರುತ್ತಿರುವ ಗಿಳಿಗಳ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯ ಜಗಳೂರು ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆಯಲಾಗುತ್ತದೆ.

ಅದರಲ್ಲೂ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೇರೆ ಕಡೆಗಳಿಂತ ಬೇಗನೇ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತದೆ. ಫಸಲೂ ಸಹ ಬೇಗನೇ ಬರುತ್ತದೆ. ಈ ಕಾರಣಕ್ಕಾಗಿ ಆಹಾರ ಅರಸಿ ಗಿಳಿಗಳು ಇಲ್ಲಿಗೆ ಬರುತ್ತಿವೆ.

ರೈತರಿಗೆ ಗಿಳಿಗಳು ಉಳಿಯಬೇಕು ಎಂಬ ಅಪೇಕ್ಷೆಯಿದೆ. ಆದರೆ ಸಾಲ ಮಾಡಿ ಬೆಳೆದ ಬೆಳೆಗಳೆಲ್ಲ ಗಿಳಿಗಳ ಪಾಲಾಗುತ್ತಿರುವುದು ಬೇಸರ ತರಿಸಿದೆ. ಅರಣ್ಯ ಇಲಾಖೆ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ರೈತರಿಗೆ ಗಿಳಿಗಳನ್ನು ಸಾಯಿಸಲು ಮನಸ್ಸು ಆಗುತ್ತಿಲ್ಲ. ಇತ್ತ ಬೆಳೆ ಹಾಳಾಗುತ್ತಿರುವುದನ್ನು ನೋಡಿ ತಡೆದುಕೊಳ್ಳಲೂ ಆಗುತ್ತಿಲ್ಲ. ಹೀಗೆ ಅಡ್ಡಕತ್ತರಿಯಲ್ಲಿ ಸಿಲುಕಿ ಹಾಕಿಕೊಂಡಿರುವ ರೈತರು ನಿತ್ಯವೂ ಯಾತನೆ ಅನುಭವಿಸುವಂತಾಗಿದೆ.

ಗಿಳಿಗಳ ಹಿಂಡು ತಡೆಗೆ ಪ್ಲ್ಯಾನ್

ರೈತರು ಸಹ ಗಿಳಿಗಳ ಹಿಂಡು ಹಿಮ್ಮೆಟ್ಟಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಗೊಂಬೆಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ ತರಕಾರಿ ಮಾರಾಟ ಮಾಡಲು ತಳ್ಳು ಗಾಡಿಗಳಲ್ಲಿ ಉಪಯೋಗಿಸುವ ಧ್ವನಿವರ್ಧಕ ಬಳಕೆ ಮಾಡುತ್ತಿದ್ದಾರೆ. ಪಟಾಕಿ ಸಿಡಿಸುತ್ತಾರೆ, ಕೂಗಿ ಓಡಿಸುತ್ತಾರೆ. ಆದರೂ ಗಿಳಿಗಳ ಕಾಟ ನಿಂತಿಲ್ಲ. ಮನೆ ಮಂದಿಯೆಲ್ಲಾ ಬೇರೆ ಕೆಲಸ ಬಿಟ್ಟು ಮೆಕ್ಕೆಜೋಳ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಗಿಳಿಗಳು ಇದುವರೆಗೆ ಅಂದಾಜಿನ ಪ್ರಕಾರ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶಪಡಿಸಿವೆ. ದಿಂಡುಗಳು ಮಾತ್ರ ಕಾಣ ಸಿಗುತ್ತಿದ್ದು, ಮೆಕ್ಕೆಜೋಳ ಬೆಳೆದ ರೈತರ ಬದುಕು ಈ ಬಾರಿ ಮೂರಾಬಟ್ಟೆಯಾಗಿದೆ. ಕೆಲವೆಡೆ ಮಳೆ ಬಾರದ ಕಾರಣ ಮೆಕ್ಕೆಜೋಳ ಒಣಗಿ ಹೋಗುತ್ತಿದ್ದರೆ, ಇಲ್ಲಿ ಬೆಳೆ ಬಂದರೂ ಉಳಿಸಿಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ಸಂಕಟ ರೈತ ಸಮುದಾಯದ್ದಾಗಿದೆ.

ಸೂಕ್ತ ಕ್ರಮಕ್ಕೆ ಆಗ್ರಹ

ಗಿಳಿಗಳ ಚಿಲಿಪಿಲಿ, ಅವುಗಳ ಹಾರಾಟ ನೋಡುವುದು ಚೆಂದ. ಅತಿಯಾದರೆ ಅಮೃತ ಕೂಡ ವಿಷ ಎಂಬಂತೆ ಇದೀದ ಮಕ್ಕೆಜೋಳ ನಾಶ ಮಾಡುತ್ತಿರುವ ಗಿಳಿಗಳ ಹಿಂಡು ನೋಡಿ ರೈತರು ಖುಷಿ ಪಡುವ ಸ್ಥಿತಿಯಲ್ಲಿಲ್ಲ. ಮೆಕ್ಕೆಜೋಳ ಹಿಂಡಿ ಹೀರುವ ಗಿಳಿಗಳ ಹಿಂಡನ್ನು ನೋಡುತ್ತಿದ್ದರೆ ಮೆಕ್ಕೆಜೋಳ ಬೆಳೆಗಾರರ ಕರುಳು ಹಿಂಡುವಂತಾಗಿದೆ.

ಆದ್ದರಿಂದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಈ ಮೂಲಕ ಗಿಳಿಗಳ ಕಾಟದಿಂದ ರೈತರಿಗೆ ಮುಕ್ತಿ ಕೊಡಿಸಬೇಕು ಎಂದು ಚನ್ನಗಿರಿಯ ಪ್ರಜಾಕೀಯ ಪಕ್ಷದ ಹೆಚ್.ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ರೈತರು ಹೇಳುವುದೇನು?

ಕಳೆದ ಕೆಲವು ದಿನಗಳಿಂದ ಸಾಕು ಸಾಕಾಗಿ ಹೋಗಿದೆ. ಗಿಳಿಗಳ ಹಿಂಡು ಬಂದು ಹೋದ ಬಳಿಕ ಜಮೀನಿಗೆ ಕಾಲಿಟ್ಟರೆ ಮೆಕ್ಕೆಜೋಳ ಕಾಣಸಿಗುವುದೇ ಇಲ್ಲ. ಅಲ್ಲಿ ಏನಿದ್ದರೂ ಜೋಳ ಇಲ್ಲದ ದಿಂಡುಗಳೇ ಕಣ್ಣಿಗೆ ಬೀಳುತ್ತವೆ. ಸ್ವಲ್ಪವಾದರೂ ಜೋಳ ಬಂತಲ್ಲಾ ಎಂಬ ಖುಷಿಯೂ ಮಾಯವಾಗುತ್ತಿದೆ. ದಿನಕ್ಕೆ ಏನಿಲ್ಲಾ ಅಂದರೂ ಎರಡೂವರೆ ಲಕ್ಷ ಗಿಳಿಗಳು ಬಂದು ಹೋಗುತ್ತಿವೆ.

ಮೆಕ್ಕೆಜೋಳ ಬೆಳೆಗೆ ಇನ್ಶೂರೆನ್ಸ್ ಮಾಡಿಸಿದರೆ ಪರಿಹಾರ ಸಿಗಬಹುದು. ಇಲ್ಲದಿದ್ದರೆ ಹಾಳಾಗಿರುವ ಬೆಳೆಗೆ ಪರಿಹಾರವೂ ಸಿಗುವುದಿಲ್ಲ. ಮೆಕ್ಕೆಜೋಳ ಬೆಳೆದವರ ಗೋಳು ಯಾರೂ ಕೇಳುತ್ತಿಲ್ಲ. ಸೂಕ್ತ ಪರಿಹಾರ ಆದರೂ ನೀಡಬೇಕು. ಇಲ್ಲವೇ ಗಿಳಿಗಳ ಕಾಟಕ್ಕೆ ಮುಕ್ತಿ ಕೊಡಿಸಬೇಕು ಎಂದು ದೊಡ್ಡಬ್ಬಿಗೆರೆ ಗ್ರಾಮದ ರೈತ ಹಾಲಸ್ವಾಮಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+