ಮೂರು ಕೃಷಿ ಕಾಯ್ದೆ ವಾಪಸ್; ರಾಜಕೀಯ ನಾಯಕರು, ರೈತರ ಪ್ರತಿಕ್ರಿಯೆ ಏನು?
ನವದೆಹಲಿ, ನವೆಂಬರ್ ೧೯: ದೇಶದಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ. ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.
ಉತ್ತರ ಪ್ರದೇಶ ಪ್ರವಾಸಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.
Breaking: 3 ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ
ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ, ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು.
ಮೂರು ಕೃಷಿ ಕಾಯ್ದೆ ವಾಪಸ್ ಪಡೆದಿದ್ದಕ್ಕೆ ದೇಶದ ರಾಜಕೀಯ ನಾಯಕರು ಮತ್ತು ರೈತರ ಏನೇನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಮುಂದೆ ಓದಿ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ದೇಶದ ಅನ್ನದಾತರ ಸತ್ಯಾಗ್ರಹದಿಂದ ದುರಹಂಕಾರ ತಲೆ ತಗ್ಗಿಸಿದೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು. ಜೈ ಹಿಂದ್, ಜೈ ಹಿಂದ್ ರೈತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಡಿಸಿಎಂ ಪ್ರತಿಕ್ರಿಯೆ
11 ತಿಂಗಳಿನಿಂದ ರೈತರು ಧರಣಿ ನಡೆಸುತ್ತಿದ್ದರು. ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಇಲ್ಲದಿರುವುದಕ್ಕಿಂತ ನಿಧಾನವಾದರೂ ಒಳ್ಳೆಯದು. ಭಾರತ ಸರ್ಕಾರವು ತನ್ನ ತಪ್ಪನ್ನು ಒಪ್ಪಿಕೊಂಡಿತು ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಿತು. ನಾನು ಇದನ್ನು ಸ್ವಾಗತಿಸುತ್ತೇನೆ. ಪಂಜಾಬ್ ಸರ್ಕಾರ ಮಾಡಿದಂತೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 700 ಕುಟುಂಬಗಳಿಗೆ ಸರ್ಕಾರವೂ ಸಹಾಯ ಮಾಡಬೇಕು: ಪಂಜಾಬ್ ಉಪ ಮುಖ್ಯಮಂತ್ರಿ ಎಸ್.ಎಸ್. ರಾಂಧವಾ ಪ್ರತಿಕ್ರಿಯಿಸಿದ್ದಾರೆ.
ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದೇನು?
"ಸಂಸತ್ತಿನಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ನಂತರವೇ ನಡೆಯುತ್ತಿರುವ ರೈತ ಕಾನೂನು ವಿರೋಧಿ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು," ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಶುಕ್ರವಾರ ಹೇಳಿದ್ದಾರೆ.
"ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಇತರ ವಿಷಯಗಳ ಬಗ್ಗೆ ಸರ್ಕಾರ ರೈತರೊಂದಿಗೆ ಮಾತನಾಡಬೇಕು," ಎಂದು ಅವರು ಒತ್ತಿ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರತಿಕ್ರಿಯೆ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾನೂನಿನ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿರೋಧ ತೋರಿದ ಎಲ್ಲ ರೈತರಿಗೆ ನನ್ನ ನಮನಗಳು. ಸಂಸತ್ತಿನ ರಚನೆಯಲ್ಲಿ ಚರ್ಚೆ ಮುಖ್ಯವಾಗಿದೆ ಎಂದು ಟ್ವೀಟ್ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೃಷಿ ಕಾಯ್ದೆ ವಾಪಸ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಿಕೆಯು ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ಒತ್ತಾಯ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. 75 ವರ್ಷಗಳಿಂದ ರೈತ ವಿರೋಧಿ ನೀತಿಯಿಂದ ರೈತರು ಸಾಲಬಾಧೆಯಿಂದ ಸಾವನ್ನಪ್ಪಿದ್ದಾರೆ. ಕೃಷಿ ಸಮಿತಿಯನ್ನು ರಚಿಸಿ ಬೆಳೆ ದರವನ್ನು ನಿರ್ಧರಿಸಲಿ ಎಂದು ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ. ಇಂದಿನ ಘೋಷಣೆಯ ಮೂಲಕ ರೈತರ ಸಾಲವನ್ನು ಒಂದೇ ದಿನದಲ್ಲಿ ಮನ್ನಾ ಮಾಡಬೇಕು ಎಂದು ಬಿಕೆಯು-ಭಾನು ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ಒತ್ತಾಯಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತ
ಎಲ್ಲಾ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಸಂಸತ್ತಿನ ಕಾರ್ಯವಿಧಾನಗಳ ಮೂಲಕ ಜಾರಿಯಾಗುವ ಘೋಷಣೆಗಾಗಿ ಕಾಯುತ್ತೇವೆ. ಇದು ಸಂಭವಿಸಿದರೆ, ಇದು ಭಾರತದಲ್ಲಿ ಒಂದು ವರ್ಷದ ರೈತರ ಹೋರಾಟಕ್ಕೆ ಐತಿಹಾಸಿಕ ವಿಜಯವಾಗಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ರೈತರ ಜಯವೆಂದ ಮಲ್ಲಿಕಾರ್ಜುನ ಖರ್ಗೆ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿ ಇಷ್ಟು ದಿನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿಜಯವಾಗಿದೆ. 700ಕ್ಕೂ ಹೆಚ್ಚು ಜನರು ಸತ್ತರು. ಕೇಂದ್ರವೇ ತಪ್ಪಿತಸ್ಥರೆಂದು ತೋರುತ್ತದೆ. ಆದರೆ ರೈತರು ಅನುಭವಿಸಿದ ಸಂಕಷ್ಟಗಳಿಗೆ ಯಾರು ಹೊಣೆ ಹೊರುತ್ತಾರೆ? ಈ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ರೈತರ ಶ್ರಮಕ್ಕೆ ಫಲ ಎಂದ ರಾಜಸ್ಥಾನ ಸಿಎಂ
ರೈತರ ಶ್ರಮಕ್ಕೆ ಫಲ ಸಿಕ್ಕಿದೆ. ದೇಶದ ಪರಿಸ್ಥಿತಿಗಳನ್ನು ಗಮನಿಸಿದರೆ, ಪ್ರಧಾನಿಯವರು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು. ಇಂದಿನ ನಿರ್ಧಾರವು ಉತ್ತರಪ್ರದೇಶ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡಿದೆ. ಪ್ರಧಾನಿ ಮತ್ತು ಬಿಜೆಪಿ ಚುನಾವಣೆ ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಪಶ್ಚಿಮ ಬಂಗಾಳದಂತೆ ಶಾಕ್ ಆಗುತ್ತಾರೋ ಗೊತ್ತಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
700 ರೈತರ ಜೀವ ಉಳಿಸಬಹುದಿತ್ತು ಎಂದ ಕೇಜ್ರಿವಾಲ್
ನಾನು ದೇಶದ ಎಲ್ಲ ರೈತರನ್ನು ಅಭಿನಂದಿಸುತ್ತೇನೆ. ಅವರ ಆಂದೋಲನವು ಫಲಿತಾಂಶ ನೀಡಿದೆ. ಕೇಂದ್ರ ಸರ್ಕಾರ ಬೇಗ ಕೃಷಿ ಕಾಯ್ದೆ ರದ್ದುಗೊಳಿಸಿದ್ದರೆ 700 ರೈತರ ಜೀವ ಉಳಿಸಬಹುದಿತ್ತು. ಬಹುಶಃ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಆಂದೋಲನದಿಂದಾಗಿ ಸರ್ಕಾರ 3 ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಉ.ಪ್ರ ಮಾಜಿ ಸಿಎಂ ಮಾಯಾವತಿ ಪ್ರತಿಕ್ರಿಯೆ
ರೈತರ ತ್ಯಾಗಕ್ಕೆ ಫಲ ಸಿಕ್ಕಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂದೆಯೇ ತೆಗೆದುಕೊಳ್ಳಬೇಕಿತ್ತು. ಇನ್ನೂ ಎಂಎಸ್‌ಪಿ ಕಾನೂನೊಂದಕ್ಕೆ ರೈತರ ಬೇಡಿಕೆ ಬಾಕಿ ಇದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರವು ಈ ನಿಟ್ಟಿನಲ್ಲಿ (ಎಂಎಸ್‌ಪಿ) ಕಾನೂನು ತರಬೇಕು ಎಂದು ಬಿಎಸ್‌ಪಿ ಒತ್ತಾಯಿಸುತ್ತದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಟ್ವೀಟ್
ಉತ್ತಮ ಸುದ್ದಿ! ಪ್ರತಿ ಪಂಜಾಬಿಯ ಬೇಡಿಕೆಗಳಿಗೆ ಸಮ್ಮತಿಸುವುದಕ್ಕಾಗಿ ಮತ್ತು ಗುರುನಾನಕ್ ಜಯಂತಿಯ ಪುಣ್ಯ ಸಂದರ್ಭದಲ್ಲಿ 3 ಕಪ್ಪು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ರೈತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ. #ನೋಫಾರ್ಮರ್ಸ್_ನೋಫುಡ್ ಎಂದು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ
ಬಿಜೆಪಿಯು ನಿಮ್ಮನ್ನು (ರೈತರು) ನಡೆಸಿಕೊಂಡ ಕ್ರೌರ್ಯದಿಂದ ವಿಚಲಿತರಾಗದೇ ಪಟ್ಟುಬಿಡದೇ ಹೋರಾಡಿದ್ದೀರಾ. ಇದು ನಿಮ್ಮ ಹೋರಾಟಕ್ಕೆ ಸಿಕ್ಕ ವಿಜಯವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಅಭಿನಂದನೆ ಸಲ್ಲಿಸಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಯಿಂದ ಹಿಂದೆ ಸರಿದಿದ್ದರಿಂದ ಸುಮಾರು ಒಂದು ವರ್ಷ ಬಿಸಿ ಮತ್ತು ಮಂಜುಗಡ್ಡೆಯ ಚಳಿಯಲ್ಲಿ ಶಾಂತಿಯುತ ಸತ್ಯಾಗ್ರಹದಲ್ಲಿ ಕುಳಿತಿದ್ದ ರೈತರ ಸಂಕಷ್ಟವನ್ನು ಕೊನೆಗೊಳಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಆದರೆ ಎನ್‌ಇಸಿಯಲ್ಲಿ ಪ್ರಧಾನಿಯಿಂದ ಹಿನ್ನಡೆಗೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸದಿರಲು ಬಿಜೆಪಿ ಪ್ರಾಯಶ್ಚಿತ್ತ ಮಾಡಬೇಕಾಗಿದೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.