ಬೆಂಗಳೂರು: ವಿಂಡ್ ಟನಲ್ ಜಂಕ್ಷನ್ ಕೆಳಸೇತುವೆ ಪೂರ್ಣಕ್ಕೆ 3 ತಿಂಗಳ ಗಡುವು; ಜಿಬಿಎ
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಳಿಯಿರುವ ವಿಂಡ್ ಟನಲ್ ಜಂಕ್ಷನ್ ವ್ಯಾಪ್ತಿಯಲ್ಲಿ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದ್ದಾರೆ.
ವಿಂಡ್ ಟನಲ್ ಜಂಕ್ಷನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ರಸ್ತೆಯು ಹೆಚ್ಚಿನ ಸಂಚಾರ ದಟ್ಟಣೆಯುಳ್ಳ ಪ್ರದೇಶವಾಗಿದೆ. ಆದ್ದರಿಂದ ಹೆಚ್ಚುವರಿ ಯಂತ್ರೋಪಕರಣಗಳ ಬಳಸಿಕೊಳ್ಳಬೇಕು. ಮೂರು ಪಾಳಿಗಳಲ್ಲಿ ಕಾಮಗಾರಿ ನಡೆಸಿ ತ್ವರಿತವಾಗಿ ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ತಾಕೀತು ಮಾಡಿದರು.

ವಿಂಡ್ ಟನಲ್ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 3 ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆಳಸೇತುವೆ ಕಾಮಗಾರಿಗೆ ಸಂಚಾರಿ ಪೊಲೀಸ್ ವಿಭಾಗವು ಈಗಾಗಲೇ ಅನುಮತಿ ನೀಡಿದೆ. ಎಚ್‌ಎಎಲ್ ಕಡೆಯಿಂದ ನಗರದೊಳಗೆ ಬರುವ ರಸ್ತೆ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆರ್.ಸಿ.ಸಿ ಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದಲ್ಲಿ ಇರುವ ಜಲಮಂಡಳಿ ಪೈಪ್‌ಲೈನ್, ಕೇಬಲ್ ಸೇರಿದಂತೆ ಇತರೆ ಉಪಯುಕ್ತತೆಗಳನ್ನು ಸಮಾನಾಂತರವಾಗಿ ಸ್ಥಳಾಂತರಿಸಿ ಕಾಮಗಾರಿ ನಿರ್ವಹಿಸಬೇಕೆಂದರು.
300 ಮೀಟರ್ ಉದ್ದದ ಕೆಳಸೇತುವೆ
ವಿಂಡ್ ಟನಲ್ ಜಂಕ್ಷನ್‌ನಲ್ಲಿ 19 ಕೋಟಿ ರೂ. ವೆಚ್ಚದಲ್ಲಿ 300 ಮೀಟರ್ ಉದ್ದದ ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಇಲ್ಲಿ ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ 6 ಪಥಗಳ ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಒಂದು ಭಾಗದಲ್ಲಿ ಉಪಯುಕ್ತತೆಗಳ ಸ್ಥಳಾಂತರ, ಆರ್.ಸಿ.ಸಿ ಗೋಡೆ ನಿರ್ಮಾಣ, ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಮಧ್ಯಭಾಗದಲ್ಲಿ ಅಳವಡಿಸುವ ಬಾಕ್ಸ್ ಗಳ ತಯಾರಿಕೆ ಸೇರಿದಂತೆ ಶೇ.60 ರಷ್ಟು ಕೆಲಸ ಮುಗಿದಿದೆ ಎಂದು ಆಯುಕ್ತರಿಗೆ ವಲಯ ಅಧಿಕಾರಿಗಳು ಮಾಹಿತಿ ಕೊಟ್ಟರು.
ಕೆಳಸೇತುವೆ ಕಾಮಗಾರಿ ನಡೆಯುವ ಅವಧಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ಜಂಕ್ಷನ್‌ನ ಎರಡೂ ಬದಿಗಳಲ್ಲಿರುವ ರಕ್ಷಣಾ, ಇಸ್ರೋ, ಎನ್.ಎ.ಎಲ್. ಇಲಾಖೆ ಹಾಗೂ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ
ಮೂರು ಹಂತಗಳಲ್ಲಿ ಕೆಳಸೇತುವೆ ನಿರ್ಮಾಣ
ಮೊದಲ ಹಂತದಲ್ಲಿ ಉಪಯುಕ್ತತೆಗಳ ಸ್ಥಳಾಂತರ ಹಾಗೂ ತಡೆಗೋಡೆ ನಿರ್ಮಿಸಲಾಗುವುದು. ಎರಡನೇ ಹಂತದಲ್ಲಿ ಮಧ್ಯಭಾಗಕ್ಕೆ ಸಿದ್ಧಪಡಿಸಿರುವ ಬಾಕ್ಸ್‌ಗಳನ್ನು ಅಳವಡಿಸಿದರೆ, ಮೂರನೇ ಹಂತದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದೆಂದು ಅಧಿಕಾರಿಗಳು ಹೇಳಿದರು.
ಕೆಳಸೇತುವೆ ಕೆಲಸದ ಸ್ಥಳದಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್‌ಗಳು, ಕಾಷನ್ ಟೇಪ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಸವಾರರಿಗೆ ಗುಡ್‌ನ್ಯೂಸ್ ;17 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ
ಹಳೆ ವಿಮಾನ ನಿಲ್ದಾಣ ರಸ್ತೆಯ ಎ.ಎಸ್.ಇ ಜಂಕ್ಷನ್ ನಿಂದ ಹೋಫ್ ಫಾರ್ಮ್ ಜಂಕ್ಷನ್ ವರೆಗಿನ 17 ಕಿ.ಮೀ ಉದ್ದದ ಮಾರ್ಗವನ್ನು 3 ಕೆಳಸೇತುವೆ ಒಳಗೊಂಡಂತೆ ಸಮಗ್ರವಾಗಿ ಅಭಿವೃದ್ಧಿಪಡಿಸಲು 2015 ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಅದರಂತೆ, 2022ರಲ್ಲಿ ಕುಂದಲಹಳ್ಳಿ ಜಂಕ್ಷನ್ ಹಾಗೂ 2023 ರಲ್ಲಿ ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಕೆಳಸೇತುವೆ ಕಾಮಗಾರಿಗಳು ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಟ್ರಾಫಿಕ್ ಪೊಲೀಸರು ಅನುಮತಿ ನೀಡುವುದು ವಿಳಂಬ ಹಿನ್ನೆಲೆಯಲ್ಲಿ ವಿಂಡ್ ಟನಲ್ ಜಂಕ್ಷನ್‌ನ ಕಾಮಗಾರಿಗೆ ತಡವಾಗಿತ್ತು. ಇದೀಗ ಅನುಮತಿ ಕೊಟ್ಟಿದ್ದರಿಂದ ಮುಂದಿನ ಮೂರು ತಿಂಗಳಲ್ಲಿ ಕೆಳಸೇತುವೆ ಲೋಕಾರ್ಪಣೆ ಆಗಲಿದೆ.













Click it and Unblock the Notifications