ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್
ನವದೆಹಲಿ, ಜನವರಿ 18: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪರಿಶೀಲಿಸಿದೆ.
"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರದ್ದು. ಹೀಗಾಗಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುದನ್ನು ಪೊಲೀಸರು ಮೊದಲು ನಿರ್ಧರಿಸಬೇಕಿದೆ. ಅವರೇ ಈ ವಿಷಯದಲ್ಲಿ ಮೊದಲು ನಿರ್ಧಾರ ತೆಗೆದುಕೊಳ್ಳಬೇಕಿರುವವರು" ಎಂದು ಹೇಳಿದೆ.
ಸೋಮವಾರ ವಿಚಾರಣೆ ನಡೆಸಿದ ಎಸ್.ಎ ಬೊಬ್ಡೆ ಅವರನ್ನೊಳಗೊಂಡ ಪೀಠವು, "ಪೊಲೀಸರು ಕಾನೂನಿನಡಿಯಲ್ಲಿ ಎಲ್ಲಾ ಅಧಿಕಾರ ಬಳಸಿಕೊಳ್ಳಲು ಅವಕಾಶವಿದೆ" ಎಂದು ತಿಳಿಸಿದ್ದು, ಜನವರಿ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಕಳೆದ ವಾರ ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ತಡೆಯೊಡ್ಡಿದ್ದ ಸುಪ್ರೀಂ ಕೋರ್ಟ್, ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ರೈತರು ಹಾಗೂ ಕೇಂದ್ರದ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮುಂದಾಗಿತ್ತು. ಆದರೆ ಈ ಸಮಿತಿಯ ಯಾವುದೇ ಸಭೆಗಳಿಗೂ ಹೋಗುವುದಿಲ್ಲ ಎಂದು ರೈತ ಸಂಘಟನೆಗಳು ನಿರ್ಧರಿಸಿದ್ದು, ತಮ್ಮ ನಿಲುವಿಗೆ ಬದ್ಧರಾಗಿ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆಗೆ ಅಡ್ಡಿ ಮಾಡದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.












Click it and Unblock the Notifications