ಬೆಂಗಳೂರಲ್ಲಿ ಫೆ.22ರಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ
ಬೆಂಗಳೂರಿನಲ್ಲಿ ಫೆಬ್ರವರಿ 22 ರಿಂದ 25 ರವರೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜನೆ ಮಾಡಲಾಗಿದೆ.
ಬೆಂಗಳೂರು, ಫೆಬ್ರವರಿ 19; ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ 2023 ಆಯೋಜನೆ ಮಾಡಲಾಗಿದೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ತೋಟಗಾರಿಕೆ ಮೇಳ 2023 ಮೇಳ ನಡೆಯಲಿದೆ.
ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು, ಸಮಸ್ಯೆಗಳ ಪರಿಹಾರ ಸೇರಿದಂತೆ ಅನೇಕ ಅಂಶಗಳನ್ನು ತಿಳಿಸುವ ಸಲುವಾಗಿ ಫೆಬ್ರವರಿ 22 ರಿಂದ 25 ರವರೆಗೆ ಮೇಳ ಆಯೋಜನೆ ಮಾಡಲಾಗಿದೆ.

ಈ ಬಾರಿಯ ಮೇಳದ ವಿಶೇಷವಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಜೊತೆಗೆ ಇನ್ನಿತರ ಸಂಸ್ಥೆಗಳು ಹಾಗೂ ತೋಟಗಾರಿಕೆ ಉದ್ಯಮಿಗಳ ಸಹಯೋಗದಲ್ಲಿ ಮೇಳ ನಡೆಯಲಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ರೈತರು ಮೇಳಕ್ಕೆ ಆಗಮಿಸಲಿದ್ದಾರೆ.
ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ. ಸಂಸ್ಥೆ ಹೊಸದಾಗಿ ಸೃಷ್ಠಿಸಿದ ತಳಿಗಳು, ಅಭಿವೃದ್ಧಿ ಪಡಿಸಲಾದ ತೋಟಗಾರಿಕೆ ಬೀಜಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ.
ಮೂರು ದಿನಗಳ ಮೇಳದಲ್ಲಿ ಹೂವಿನ ತ್ಯಾಜ್ಯ ಬಳಕೆ ಪ್ರಯೋಜನ, ತರಕಾರಿ ಮತ್ತು ಔಷಧಿ ಬೆಳೆಗಳ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು, ಯುವ ಕೃಷಿಕರು ಸಂಸ್ಥೆಯ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆಯಲು ಸಹ ವ್ಯವಸ್ಥೆಯನ್ನು ಮಾಡಲಾಗಿದೆ.

ಮೇಳದಲ್ಲಿ ತೋಟಗಾರಿಕೆಗೆ ಸಂಬಂಧಪಟ್ಟ 250 ಮಳಿಗೆಗಳನ್ನು ತೆರೆಯಲಾಗುತ್ತದೆ. ಜೈವಿಕ ಗೊಬ್ಬರ, ವಿಶೇಷ ತಳಿಯ ಹಣ್ಣಿನ ಗಿಡಗಳು, ಬಿತ್ತನೆ ಬೀಜಗಳು, ಕೃಷಿ ಯಂತ್ರೋಪಕರಣಗಳ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಇದೆ.
ಫೆಬ್ರವರಿ 25 ರಂದು ನಡೆಯುವ ಸಮರೋಪ ಸಮಾರಂಭದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದ 20 ಉತ್ತಮ ರೈತರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ರೈತರು, ತೋಟಗಾರಿಕಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ರಾಗಿ ಖರೀದಿ ಕೇಂದ್ರ, ನೋಂದಣಿ; ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ನೋಂದಣಿ ಮತ್ತು ಖರೀದಿ ನಡೆಯುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಕ್ರಾಸ್ ಬಳಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಗೋದಾಮುಗಳಲ್ಲಿ ಸ್ಥಾಪಿತವಾಗಿರುವ ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ ತರುತ್ತಿದ್ದು ಜನಸಂದಣೆ ಉಂಟಾಗುತ್ತಿದೆ.
ರೈತರು ಸೂಚಿಸಿದ ದಿನಾಂಕದ ಬದಲಾಗಿ ಮುಂಚಿತವಾಗಿ ರಾಗಿ ತರುತ್ತಿದ್ದು ಇದರಿಂದ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ನಿಗದಿತ ದಿನಾಂಕಗಳಂದೇ ರೈತರು ರಾಗಿ ತರಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಜಿ. ಗಿರಿಜಾದೇವಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ರೈತರಿಂದ ರಾಗಿ ಖರೀದಿಗಾಗಿ ಒಟ್ಟು 5 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನೋಂದಾಯಿತ ಎಲ್ಲಾ ರೈತರ ರಾಗಿ ದಾಸ್ತಾನು ಖರೀದಿ ಮಾಡಲಾಗುತ್ತದೆ. ರೈತ ಬಾಂಧವರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಮಾಡಲಾಗಿರುತ್ತದೆ. ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ರೈತರು ತಮಗೆ ನೀಡಿದ ನಿಗದಿತ ದಿನಾಂಕದಂದು ಮಾತ್ರ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಎಂದು ತಿಳಿಸಲಾಗಿದೆ.
ರೈತರು ಯಾವುದೇ ತೊಂದರೆಗೆಳಿಗೆ ಮತ್ತು ಹೆಚ್ಚಿನ ವಿವರಗಳಿಗೆ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ 9964090996 , 9036878847 ಅಥವಾ 6366021925 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications