ಮೈಸೂರು: ಹುಲಿಗೆ ಹೆದರಿ ಗ್ರಾಮ ಬಿಡಲು ಮುಂದಾದ ಗ್ರಾಮಸ್ಥರು!
ಮೈಸೂರು, ನವೆಂಬರ್, 16 : ಕಾಡಾನೆಯ ಉಪಟಳದಿಂದ ಬೇಸತ್ತಿದ್ದ ರೈತರನ್ನು ಇದೀಗ ನರಭಕ್ಷಕ ಹುಲಿರಾಯ ಕಾಡುತ್ತಿದ್ದು, ಆಳಲಹಳ್ಳಿ ಕಾಲೋನಿಯ ಆದಿವಾಸಿ ಮುಖಂಡನ ಮೇಲೆರಗಿ ಗಂಭೀರ ಗಾಯಗೊಳಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಸುತ್ತಮುತ್ತಲೂ ನರಭಕ್ಷಕ ಹುಲಿಯ ಘರ್ಜನೆ, ಹೆಜ್ಜೆ ಗುರುತು ಕಂಡ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಹುಲಿಯ ಕಾಟದಿಂದ ಪಾರಾಗಲು ನಂಜನಗೂಡು ತಾಲೂಕಿನ ಒಡೆಯನಪುರ ಗ್ರಾಮಸ್ಥರು ಗ್ರಾಮವನ್ನೇ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.[ಮೈಸೂರು : ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ]

ಒಡೆಯನಪುರ ಗ್ರಾಮದ ತುಂಬಾ ರಾತ್ರಿ, ಹಗಲು, ಎಲ್ಲ ಸಮಯದಲ್ಲೂ ಹುಲಿ ವಿಚಾರದ ಬಗ್ಗೆಯೇ ಮಾತುಗಳು ಕೇಳಿಬರುತ್ತಿವೆ. ಸಂಜೆ 6 ಗಂಟೆಯಾಗುತ್ತಿದ್ದಂತೆಯೇ ಇಡೀ ಗ್ರಾಮ ಸ್ತಬ್ದಗೊಳ್ಳುತ್ತದೆ. ಹುಲಿಯ ಭಯ ಕಾಡಾನೆಗಳ ಹೆದರಿಕೆಗೆ ರೈತರು ಹೊಲಗದ್ದೆಗಳ ಕಡೆಗೂ ಗಮನ ಹರಿಸಲು ಸಾಧ್ಯವಾಗದೆ ಫಸಲು ಹಾಳಾಗುತ್ತಿದ್ದು, ರೈತರಿಗೆ ಸಂಕಷ್ಟ ತಂದೊಡ್ಡುತ್ತಿವೆ.[ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?]
ಹುಲಿಯ ಉಪಟಳದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾ.ಒಡೆಯನಪುರ ಗ್ರಾಮದ ಗೋವಿಂದಯ್ಯ ಅವರು, 'ಕಳೆದ 45 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಹುಲಿಯ ಭಯವಿರಲಿಲ್ಲ. ಜಮೀನುಗಳಿಗೆ ಧೈರ್ಯವಾಗಿ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಈಗ ಮಚ್ಚು, ದೊಣ್ಣೆ ಇಟ್ಟುಕೊಂಡು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಗ್ರಾಮದಿಂದ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯನ್ನು ಹಿಡಿಯುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಇನ್ನು ಸಾಕಾನೆಗಳನ್ನು ಕರೆತಂದು ಕಾರ್ಯಾಚರಣೆ ಮಾಡುತ್ತಿದ್ದರೂ ಹುಲಿಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ.












Click it and Unblock the Notifications