• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು: ರೈತರ ಪಾಲಿಗೆ ಜೂಜಾಟವಾದ ಶುಂಠಿ ಕೃಷಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 13: ಕಳೆದ ಒಂದೆರಡು ದಶಕಗಳ ಹಿಂದೆ ಕೈನಲ್ಲಿ ಶುಂಠಿ ಹಿಡಿದುಕೊಂಡು ಬಂದ ಕೇರಳದ ಶುಂಠಿ ಬೆಳೆಗಾರರು ಮೈಸೂರಿನ ರೈತರ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದು ಹಣ ದೋಚಿಕೊಂಡು ಹೋಗಿದ್ದು ಹಳೆಯ ಕಥೆ. ಆದರೆ ಆ ನಂತರ ಇಲ್ಲಿನ ಬೆಳೆಗಾರರು ಶುಂಠಿ ಬೆಳೆಯಲು ಮುಂದಾಗಿ ನಷ್ಟ ಮಾಡಿಕೊಳ್ಳುತ್ತಿರುವುದು ಈಗಿನ ಕಥೆಯಾಗಿದೆ.

ಹಾಗೆ ನೋಡಿದರೆ ಶುಂಠಿ ಕೃಷಿ ಎನ್ನುವುದು ರೈತನ ಪಾಲಿಗೆ ಜೂಜಾಟ ಎಂದರೂ ತಪ್ಪಾಗಲಾರದು. ಎಲ್ಲವೂ ಸರಿಯಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆತರೆ ಲಕ್ಷಾಂತರ ಹಣವನ್ನು ಬಾಚಬಹುದು. ಅದೃಷ್ಟ ಕೈಕೊಟ್ಟರೆ ಕೃಷಿಗೆ ಖರ್ಚು ಮಾಡಿದ ಹಣವೂ ಬಾರದೆ ನಷ್ಟ ಅನುಭವಿಸಬೇಕಾದ ದುಸ್ಥಿತಿ ಎದುರಾದರೂ ಅಚ್ಚರಿಪಡುವಂತಿಲ್ಲ.

 ಶುಂಠಿ ಕೃಷಿಯಿಂದ ಲಾಭ ಪಡೆದ ಕೇರಳಿಗರು

ಶುಂಠಿ ಕೃಷಿಯಿಂದ ಲಾಭ ಪಡೆದ ಕೇರಳಿಗರು

ಶುಂಠಿ ಕೃಷಿಯನ್ನು ಎಕರೆಗಟ್ಟಲೆ ಮಾಡಬಹುದು ಎಂಬ ಕಲ್ಪನೆಯೂ ಇಲ್ಲದ ಕಾಲದಲ್ಲಿ ಶುಂಠಿ ಕೃಷಿ ಮಾಡುತ್ತೇವೆಂದು ಬಂದ ಕೇರಳದ ಶುಂಠಿ ಬೆಳೆಗಾರರು, ಎಕರೆಗೆ ಇಂತಿಷ್ಟು ಎಂಬಂತೆ ಒಂದು ವರ್ಷದ ಅವಧಿಗೆ ರೈತರ ಭೂಮಿಯನ್ನು ಗುತ್ತಿಗೆ ಪಡೆದು ಶುಂಠಿ ಕೃಷಿ ಮಾಡಿದರು. ಆದರೆ ಶುಂಠಿ ಕೃಷಿ ವಿಧಾನ ಮತ್ತು ಮಾರುಕಟ್ಟೆಯ ಗುಟ್ಟು ಬಿಟ್ಟುಕೊಡದ ಅವರು, ಉತ್ತಮವಾಗಿ ಬೆಳೆ ಬೆಳೆದು ಒಂದಷ್ಟು ಹಣ ಮಾಡಿಕೊಂಡರು. ಆ ನಂತರ ಸ್ಥಳೀಯರೇ ಶುಂಠಿ ಬೆಳೆಯಲು ಆರಂಭಿಸಿದರು. ಬಂಡವಾಳ ಹಾಕಿ ಕೃಷಿ ಮಾಡಿದರೆ ಲಕ್ಷಾಂತರ ರೂ. ಲಾಭ ಪಡೆಯಬಹುದು ಎಂಬ ಆಲೋಚನೆಯಲ್ಲಿಯೇ ಸಾಲ ಮಾಡಿ ತಂದು ಹಣ ಸುರಿದರು. ಆದರೆ ಅಂದುಕೊಂಡಂತೆ ಹೆಚ್ಚಿನವರಿಗೆ ಲಾಭ ಆಗಲೇ ಇಲ್ಲ.

 ನಷ್ಟ ಮಾಡಿಕೊಂಡವರ ಸಂಖ್ಯೆ ದೊಡ್ಡದು

ನಷ್ಟ ಮಾಡಿಕೊಂಡವರ ಸಂಖ್ಯೆ ದೊಡ್ಡದು

ಕೆಲವರಿಗೆ ಹೇಳಿಕೊಳ್ಳುವಷ್ಟು ಇಳುವರಿ ಬರಲಿಲ್ಲ. ಇನ್ನು ಕೆಲವರಿಗೆ ಇಳುವರಿ ಬಂದರೂ ಸೂಕ್ತ ಬೆಲೆ ಸಿಗಲಿಲ್ಲ. ಇನ್ನು ಕೆಲವರಿಗೆ ಒಂದಷ್ಟು ಲಾಭ ಬಂದರೂ, ಅದನ್ನು ಉಳಿಸಿಕೊಳ್ಳದೆ ಇನ್ನಷ್ಟು ಕೃಷಿ ಮಾಡಿ ಹೆಚ್ಚು ಲಾಭ ಪಡೆಯುವ ಆಸೆಗೆ ಬಿದ್ದು ನಷ್ಟ ಮಾಡಿಕೊಂಡರು. ಒಟ್ಟಾರೆಯಾಗಿ ಶುಂಠಿ ಕೃಷಿ ಮಾಡಿ ಉದ್ಧಾರವಾದವರ ಸಂಖ್ಯೆ ಕಡಿಮೆಯೇ. ಆದರೂ ಪ್ರತಿವರ್ಷವೂ ಆಶಾಭಾವನೆಯಿಂದಲೇ ಕೃಷಿ ಮಾಡುತ್ತಲೇ ಬರುವ ರೈತರು, ಅದನ್ನು ಕೀಳುವ ವೇಳೆಗೆ ದರ ಕಡಿಮೆಯಾಗಿ ನಷ್ಟ ಅನುಭವಿಸುವುದು ಮಾಮೂಲಿಯಾಗಿದೆ.

 ಬೆಲೆ ಕುಸಿತದಿಂದ ಕಂಗಾಲಾದ ರೈತರು

ಬೆಲೆ ಕುಸಿತದಿಂದ ಕಂಗಾಲಾದ ರೈತರು

ಈ ಬಾರಿಯೂ ಮೈಸೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರೈತರು ಸಾಲ ಮಾಡಿ ಶುಂಠಿ ಬೆಳೆದಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿದಿರುವುದರಿಂದ ಕಂಗಾಲಾಗಿದ್ದಾರೆ. ಶುಂಠಿ ಕೀಳಿಸಲು ಬಳಸಿಕೊಂಡ ಕಾರ್ಮಿಕರ ಕೂಲಿ ಹಣವೂ ಮಾರಾಟ ಮಾಡಿದ ಬಳಿಕ ಬಾರದ ಕಾರಣದಿಂದ ಬಹಳಷ್ಟು ಮಂದಿ ಬೆಳೆದ ಶುಂಠಿಯನ್ನು ಕೀಳಲು ಮುಂದಾಗದೆ ಸುಮ್ಮನಾಗಿದ್ದಾರೆ.

ಬೇಸಿಗೆಯಲ್ಲಿ ಶುಂಠಿಗೆ ಉತ್ತಮ ದರವಿರುತ್ತದೆ. ಈ ವೇಳೆ ರೈತರು ಸಾಲ ಮಾಡಿ ತಮ್ಮ ಜಮೀನು ಮಾತ್ರವಲ್ಲದೆ, ಪಾಳುಬಿದ್ದ ಜಾಗಗಳಲ್ಲಿಯೂ ಶುಂಠಿ ಕೃಷಿ ಮಾಡಲು ಮುಂದಾಗುತ್ತಾರೆ. ಇನ್ನು ಕೆಲವರು ಬೇರೆಯವರ ಜಮೀನನ್ನು ಎಕರೆಗೆ 50 ಸಾವಿರದಂತೆ ಗುತ್ತಿಗೆ ಪಡೆದು ಶುಂಠಿ ಕೃಷಿ ಮಾಡುತ್ತಾರೆ. ಆದರೆ ದರ ಕುಸಿದ ಪರಿಣಾಮ ಮುಂದೇನು ಎಂಬ ಚಿಂತೆ ಅವರನ್ನು ಈಗ ಕಾಡಲಾರಂಭಿಸಿದೆ.

 ಕೀಳಿಸಿದ ಕೂಲಿಯೂ ಬಾರದ ದುಸ್ಥಿತಿ

ಕೀಳಿಸಿದ ಕೂಲಿಯೂ ಬಾರದ ದುಸ್ಥಿತಿ

ಬೇಸಿಗೆಯಲ್ಲಿ 60 ಕೆಜಿಯ ಒಂದು ಚೀಲಕ್ಕೆ 900 ರಿಂದ 1000 ಬೆಲೆ ಇತ್ತು. ಆದರೆ ಈಗ 450 ರೂ.ಗೆ ಇಳಿದಿದೆ. ಈ ಬೆಲೆಗೆ ಶುಂಠಿ ಮಾರಾಟ ಮಾಡಿದರೆ ಖರ್ಚು ಮಾಡಿದ ಹಣವಿರಲಿ, ಕೀಳಿಸಿದ ಕೂಲಿ ಹಣವೂ ಬರುವುದಿಲ್ಲ. ಹೀಗಾಗಿ ಶುಂಠಿ ಬೆಳೆದ ರೈತರು ದಾರಿ ತೋಚದೆ ಮೌನಕ್ಕೆ ಶರಣಾಗಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಗೆ ಇಂತಹ ದುಸ್ಥಿತಿ ಬಂತಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಶುಂಠಿ ಬೆಳೆದ ರೈತರು ಹೇಳುವ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಕೃಷಿ ಮಾಡಬೇಕಾದರೆ ಕನಿಷ್ಟ ಎರಡೂವರೆಯಿಂದ ಮೂರು ಲಕ್ಷ ರೂ. ಖರ್ಚು ತಗಲುತ್ತದೆಯಂತೆ. ಎಲ್ಲವೂ ಸರಿ ಹೋಗಿ ಉತ್ತಮ ಬೆಳೆ ಬಂದರೆ ನಾನೂರರಿಂದ ಐನೂರು ಚೀಲದಷ್ಟು ಇಳುವರಿ ಪಡೆಯಬಹುದಂತೆ. ಉತ್ತಮ ದರ ಅಂದರೆ ಕನಿಷ್ಟ ಚೀಲವೊಂದಕ್ಕೆ ಎಂಟು ನೂರು ರೂಪಾಯಿ ಸಿಕ್ಕರೆ ರೈತರು ನಷ್ಟದಿಂದ ಪಾರಾಗಿ ಸ್ವಲ್ಪ ಲಾಭಾಂಶ ಕಾಣಬಹುದು. ಆದರೆ ಈ ಬಾರಿ ಆಗಿದ್ದೇ ಬೇರೆ. ಬೆಲೆ ಸಂಪೂರ್ಣ ಕುಸಿದಿದ್ದು, ಶುಂಠಿ ಬೆಳೆದ ರೈತರು ಆಕಾಶ ನೋಡುವಂತಾಗಿದೆ.
   ಅಧಿವೇಶನಕ್ಕೆ ಚಕ್ಕಡಿ ಗಾಡಿಯಲ್ಲಿ ಬಂದ ಕಾಂಗ್ರೆಸ್‌ ನಾಯಕರು.. | Oneindia Kannada
   English summary
   Mysuru farmers continue to suffer losses from ginger cultivation. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X