ಮಂಜಿನ ನಗರಿ ಕೊಡಗು ಜಿಲ್ಲೆಯಲ್ಲಿ ಕೃಪೆ ತೋರದ ವರುಣದೇವ, ತತ್ತರಿಸಿದ ಕೃಷಿಕರು

ಮಡಿಕೇರಿ, ಜೂನ್‌, 29: ಜೂನ್ ತಿಂಗಳು ಕೊನೆಯಾದರೂ ವರುಣನ ಮುನಿಸು ಶಮನವಾದಂತೆ ಕಾಣುತ್ತಿಲ್ಲ. ಪರಿಣಾಮ ಮುಂಗಾರು ಯಾವಾಗ ನಮಗೆ ದಯೆ ತೋರುತ್ತದೆಯೋ ಎಂಬ ಚಿಂತೆಯಲ್ಲಿ ಜಿಲ್ಲೆಯ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆ. ಆದರೂ ಇದರಿಂದ ಸದ್ಯಕ್ಕೆ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.

ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯನ್ನು ಗಮನಿಸುವುದಾದರೆ, ಈ ಬಾರಿ ಸರಿಯಾಗಿ ಮಳೆ ಸುರಿಯಲೇ ಇಲ್ಲ. ಜೊತೆಗೆ ಜೂನ್ ತಿಂಗಳು ಮುಂಗಾರಿನ ಆರಂಭವಾದರೂ ವಾಡಿಕೆಯ ಮಳೆ ಬರಲೇ ಇಲ್ಲ. ಇದು ಕೇವಲ ರೈತರನ್ನು ಮಾತ್ರವಲ್ಲದೆ ಜನತೆಯನ್ನು ಕೂಡ ಆತಂಕಕ್ಕೆ ತಳ್ಳಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಮಳೆಯನ್ನು ನೋಡಿದ್ದ ಜನರು ಈ ಬಾರಿ ಇನ್ನೂ ಚೇತರಿಕೆ ಕಾಣದ ಮುಂಗಾರಿನತ್ತ ಭಯದ ನೋಟ ಬೀರುವಂತಾಗಿದೆ.

Monsoon rain

ಕಳೆದ ವರ್ಷ ನವೆಂಬರ್ ಕೊನೆಯ ತನಕವೂ ಮಳೆ ಸುರಿದಿತ್ತು. ಆದರೆ ಈ ವರ್ಷ ಜನವರಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಸುರಿದ ಮಳೆಯನ್ನು ನೋಡಿದರೆ ತೀರಾ ಕಡಿಮೆ ಆಗಿದೆ. ಬೇಸಿಗೆಯಲ್ಲಿ ಮಳೆ ಬಾರದೆ ಜನ ಕುಡಿಯುವ ನೀರಿಗೆ ಪರದಾಡಿದ್ದರು. ಅಷ್ಟೇ ಅಲ್ಲದೆ ಕಾಫಿ ಗಿಡಗಳು ಒಣಗಿ ಹೋಗಿದ್ದವು. ಉಷ್ಣಾಂಶವೂ ತೀವ್ರವಾಗಿತ್ತು.

ಸಾಮಾನ್ಯವಾಗಿ ಕೊಡಗಿನ ಕಾಫಿ ಬೆಳೆಗಾರರು ಮಳೆಯನ್ನೇ ನಂಬಿದ್ದಾರೆ. ಅದರಲ್ಲೂ ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆ ಸುರಿದರೆ ಕಾಫಿ ಹೂ ಅರಳಿ ಉತ್ತಮ ಫಸಲು ಪಡೆಯಲು ಸಾ‍ಧ್ಯ ಆಗುತ್ತದೆ ಎಂದು ನಂಬಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಮುಂಗಾರು ನಂಬಿ ಭತ್ತದ ಕೃಷಿ ಮಾಡೋದು ಕಷ್ಟ

ಇನ್ನು ಈ ಸಮಯದಲ್ಲಿ ಭತ್ತದ ಕೃಷಿ ವೇಗ ಪಡೆಯಬೇಕಾದರೆ ಮಳೆಯ ಅಗತ್ಯತೆವಿದೆ. ಮಳೆ ಸುರಿದು ಹೊಳೆ, ತೋಡು ತುಂಬಿ ಹರಿದು ಗದ್ದೆಗೆ ನೀರು ಬಂದರೆ ಮಾತ್ರ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಅದು ಕೂಡ ಕಷ್ಟವೇ. ಜಿಲ್ಲೆಯಲ್ಲಿ ಕೆಲವರಿಗೆ ಮಾತ್ರ ಕೆರೆ, ನದಿಯನ್ನು ಬಳಸಿ ಭತ್ತದ ಕೃಷಿ ಮಾಡಲು ಅವಕಾಶವಿದೆ.

ಉಳಿದಂತೆ ಹೆಚ್ಚಿನವರು ಮಳೆ ಸುರಿದು ಅಂತರ್ಜಲ ವೃದ್ಧಿಯಾಗಿ ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರನ್ನು ನಂಬಿ ಭತ್ತ ಬೆಳೆಯುತ್ತಾರೆ. ಅಂತಹವರು ಈ ಬಾರಿಯ ಮುಂಗಾರು ನಂಬಿ ಭತ್ತದ ಕೃಷಿ ಮಾಡುವುದು ಕಷ್ಟಸಾಧ್ಯವಾಗಿದೆ.

ಹಿಂದೆ ಈ ಹೊತ್ತಿಗೆ ರೈತರು ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ನಿರತರಾಗಿಬಿಟ್ಡಿದ್ದರು. ಆದರೆ ಈ ಬಾರಿ ಇನ್ನೂ ಕೂಡ ಕೃಷಿಕರು ಗದ್ದೆಯತ್ತ ಮುಖ ಮಾಡಿಲ್ಲ. ಮಳೆ ಕೊರತೆ ಕಾರಣದಿಂದ ಭತ್ತದ ಕೃಷಿಯತ್ತ ಎಲ್ಲರೂ ನಿರಾಸೆ ತಾಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅತೀವೃಷ್ಠಿಯಿಂದ ಜಿಲ್ಲೆಯ ಕೃಷಿಕರು ಹೆಚ್ಚು ನಷ್ಟ, ಸಮಸ್ಯೆ ಅನುಭವಿಸಿದ್ದಾರೆ. ಹಾಗೆಯೇ ಈ ಬಾರಿ ಆರಂಭದಲ್ಲಿಯೇ ಬರದ ಛಾಯೆ ನೋಡಿ ಮುಂದೇನು ಎಂಬ ಚಿಂತೆಯಲ್ಲಿ ರೈತರಿದ್ದಾರೆ.

ಕಾವೇರಿ ನೀರನ್ನು ಆಶ್ರಯಿಸಿರುವವರಿಗೆ ಆತಂಕ

ಇದೆಲ್ಲದರ ನಡುವೆ ಕಾವೇರಿಯನ್ನೇ ನಂಬಿಕೊಂಡಿರುವ ಕಾವೇರಿ ಕಣಿವೆಯ ಜನ ಕೂಡ ಆತಂಕದಲ್ಲಿದ್ದಾರೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಕಾವೇರಿ ತುಂಬಿ ಹರಿಯಲು ಸಾಧ್ಯ. ಆದರೆ ಈಗಾಗಲೇ ತಳ ತಲುಪಿರುವ ಕೆಆರ್‌ಎಸ್ ಜಲಾಶಯದ ನೀರು ಮೇಲೆ ಬರಬೇಕಾದರೆ ಮಳೆ ಬರಲೇಬೇಕು. ಆದರೆ ಈಗ ಕೊಡಗಿನಲ್ಲಿ ಸುರಿಯುತ್ತಿರುವ ಜಿನುಗು ಮಳೆಯಿಂದ ಏನು ಬೆಳೆಯಲಾರಂದತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಕೊಡಗಿನಲ್ಲಿ ಮಳೆಯ ಪ್ರಮಾಣವನ್ನು ನೋಡುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಇಲ್ಲಿಯವರೆಗೆ ಸುಮಾರು 358.59 ಮಿ.ಮೀ ಕಡಿಮೆ ಮಳೆ ಸುರಿದಿರುವುದು ಕಂಡುಬರುತ್ತದೆ. ಕಳೆದ ವರ್ಷ 648.24 ಮಿ.ಮೀ ಮಳೆ ಸುರಿದಿದ್ದರೆ, ಈ ಬಾರಿ ಕೇವಲ 289.65 ಮಿಮೀ ಮಾತ್ರ ಸುರಿದಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದ ಹಾರಂಗಿ ಜಲಾಶಯದ ನೀರಿನ ಮಟ್ಟವೂ ಕಡಿಮೆಯಾಗುತ್ತಲೇ ಇದೆ.

ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಇದೀಗ 2820.05 ಅಡಿಯಷ್ಟು ನೀರಿದೆ. ಕಳೆದ ವರ್ಷ ಈ ವೇಳೆಗೆ 2853.37 ಅಡಿಯಷ್ಟು ನೀರಿತ್ತು. ಜಲಾಶಯಕ್ಕೆ ಈಗ ಕೇವಲ 252 ಕ್ಯುಸೆಕ್‌ನಷ್ಟು ಮಾತ್ರ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಮುಂಗಾರು ಚೇತರಿಕೆ ಕಾಣುವ ತನಕ ಇಲ್ಲಿನವರು ಮಾತ್ರವಲ್ಲದೆ, ಕಾವೇರಿ ನೀರನ್ನು ಆಶ್ರಯಿಸಿರುವ ಎಲ್ಲರಿಗೂ ಆತಂಕ ತಪ್ಪಿದಲ್ಲ ಎನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+