ಮಳೆ ಕೊರತೆ: ಬರಿದಾಗುತ್ತಿದೆ ಈ ಜಲಾಶಯ, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆವರಿಸಿದ ಬರದ ಛಾಯೆ, ಅನ್ನದಾತ ಕಂಗಾಲು

ಬಳ್ಳಾರಿ, ಜೂನ್‌, 29: ಈ ಬಾರಿ ಮುಂಗಾರು ಮಳೆಯ ವಿಳಂಬ ಆಗಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರಿನ ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ಮೊದಲ ವಾರದಲ್ಲೇ ಕೃಷಿ ಚಟುವಟಿಕೆ ಗರಿಗೆದರಿತ್ತು. ಆದರೆ ಈ ಬಾರಿ ಜಿಲ್ಲೆಯ ರೈತರು ವರುಣನ ಕೃಪೆಗಾಗಿ ಮೋಡದ ಕಡೆ ಮುಖ ಮಾಡಿದ್ದಾರೆ.

ಜಿಲ್ಲೆಯ ರೈತರ ಜೀವನಾಧಾರ ಆಗಿರುವ ತುಂಗಭದ್ರಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಲಿದ್ದು, ಬರಿದಾಗು ಹಂತವನ್ನು ತಲುಪಿಸಿದೆ. ಕೃಷಿ ಚಟುವಟಿಕೆಯ ಚಾಲನಶಕ್ತಿ ಆಗಿರುವ ನರನಾಡಿಗಳಾದ ಕಾಲುವೆಗಳಿಗೆ ನೀರು ಹರಿಯುವುದನ್ನು ನೋಡಲು ಇನ್ನಷ್ಟು ದಿನ ಕಾಯುವಂತಾಗಿದೆ. ಟಿಬಿ ಡ್ಯಾಂ ತುಂಬಿದಾಗ, ಕಾಲುವೆಯಲ್ಲಿ ನೀರು ಹರಿದಾಗ ಮಾತ್ರ ಜಿಲ್ಲೆಯ ವ್ಯವಸಾಯ ಚಟುವಟಿಕೆಗಳು ಚುರುಕುಗೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆಯಬಹುದಾಗಿತ್ತು.

Monsoon rain

ಮುಂಗಾರು ಹಂಗಾಮಿನಲ್ಲಿ ಜುಲೈ ಅಂತ್ಯದವರೆಗೂ ಬಿತ್ತನೆ ಮಾಡಬಹುದಾದರೂ, ಮಳೆ ಬರದೇ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ರೈತರ ಪರಿಸ್ಥಿತಿ ಊಹಿಸಲು ಅಸಾಧ್ಯ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 1.74 ಲಕ್ಷ ಹೆಕ್ಟೇರ್ ಕೃಷಿ ಜಮೀನಿದ್ದು, ಅದರಲ್ಲಿ 1.09 ಲಕ್ಷ ಹೆಕ್ಟೇರ್ ನೀರಾವರಿ ಹಾಗೂ 85 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಜಮೀನಿದೆ.

ಪ್ರಸಕ್ತ ಸಾಲಿನಲ್ಲಿ 1.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಇದುವರೆಗೂ ಬಿತ್ತನೆ ಶೇಕಡಾ 1.17 ರಷ್ಟು ಮಾತ್ರ ಆಗಿದೆ. ಉಳಿದ ಶೇಕಡಾ 98.83ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಮುಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ.

ಶೇಕಡಾ1.17 ರಷ್ಟು ಮಾತ್ರ ಬಿತ್ತನೆ

ಮುಂಗಾರು ಮಳೆ ಬಿರುಸುಗೊಂಡಿಲ್ಲದ್ದ ಕಾರಣ ಜಿಲ್ಲೆಯಲ್ಲಿ ಶೇಕಡಾ 1.17ರಷ್ಟು ಮಾತ್ರ ಬಿತ್ತನೆಯಾಗಿದೆ. 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿರುವ ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2031 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ ಎಂದು ತಿಳಿದುಬಂದಿದೆ.

ಒಟ್ಟು ಕೃಷಿ ಭೂಮಿಯಲ್ಲಿ ನೀರಾವರಿ ಭೂಮಿಯಲ್ಲಿ 1572 ಹೆಕ್ಟೇರ್ ಮತ್ತು ಮಳೆಯಾಶ್ರಿತ ಜಮೀನುಗಳಲ್ಲಿ 459 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಬೆಳೆಗಳಲ್ಲಿ ಮೆಕ್ಕೆಜೋಳ 134 ಹೆಕ್ಟೇರ್, ಸಜ್ಜೆ 298 ಹೆಕ್ಟೇರ್, ಜೋಳ 71 ಹೆಕ್ಟೇರ್, ಸೂರ್ಯಕಾಂತಿ 310 ಹೆಕ್ಟೇರ್, ಹತ್ತಿ 1109 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ.

ಬರದ ಛಾಯೆಯ ಆತಂಕದಲ್ಲಿ ರೈತರು

ಇದೀಗ ಉತ್ತಮ ಮಳೆ ಬೀಳದ ಕಾರಣ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಜಿಲ್ಲೆಯಲ್ಲಿ ಬಿದ್ದ ಮಳೆ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ಸರಾಸರಿ ಶೇಕಡಾ 42ರಷ್ಟು ಮಳೆ ಕೊರತೆ ಕಾಡುತ್ತಿದೆ. ತಾಲೂಕುವಾರು ಮಳೆ ಕೊರತೆ ನೋಡುವುದಾದರೆ, ಬಳ್ಳಾರಿ ತಾಲೂಕಿನಲ್ಲಿ ಶೇಕಡಾ 49, ಸಂಡೂರು ಶೇಕಡಾ 59, ಸಿರಗುಪ್ಪ ಶೇಕಡಾ 55, ಕುರುಗೋಡು ಶೇಕಡಾ 28, ಕಂಪ್ಲಿಯಲ್ಲಿ ಶೇಕಡಾ 25ರಷ್ಟು ಮಳೆ ಕೊರತೆ ಕಂಡುಬಂದಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ 124 ಮಿಲಿ ಮೀಟರ್‌ ಮಳೆ ಆಗಬೇಕಿತ್ತು. ಆದರೆ 73 ಮಿಲಿ ಮೀಟರ್‌ ಮಾತ್ರ ಮಳೆಯಾಗಿದೆ. ಕಳೆದ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿತ್ತು. 599 ಮಿಲಿ ಮೀಟರ್‌ ಆಗಬೇಕಿದ್ದ ಮಳೆ 795 ಮಿಲಿ ಮೀಟರ್‌ ಮಾತ್ರ ಆಗಿತ್ತು. ಆದರೆ ಈ ಬಾರಿ ಮಳೆಯಲ್ಲಿ ಹೆಚ್ಚಾಗಿ ಕೊರತೆ ಕಂಡುಬಂದಿದೆ.

ರಸಗೊಬ್ಬರಕ್ಕಿಲ್ಲ ಕೊರತೆ

ಇನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಿರುವಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೂ ಹೆಚ್ಚು ರಸಗೊಬ್ಬರದ ಲಭ್ಯತೆವಿದೆ. ಡಿಎಪಿ, ಯೂರಿಯಾ ಸೇರಿದಂತೆ ಒಟ್ಟು 42 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನಿದೆ. ಇನ್ನು ಬಿತ್ತನೆ ಬೀಜಕ್ಕೂ ಕೊರತೆ ಇಲ್ಲ. ಜಿಲ್ಲೆಗೆ 7,500 ಕ್ವಿಂಟಾಲ್ ಬಿತ್ತನೆ ಬೀಜ ಬೇಕಿದ್ದು, 15 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಲಭ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಮಳೆ ವಿಳಂಬವಾದ ಹಿನ್ನೆಲೆ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆವಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ. ಹಾಗೆಯೇ ಇಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಿರುವಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜಕ್ಕೂ ಕೊರತೆಯಿಲ್ಲ ಎಂದು ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+