ಕೆಬ್ಬೇಪುರ ಗ್ರಾಮದಲ್ಲಿ ಎರಡು ಹೆಕ್ಟೇರ್ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ಅನ್ನದಾತ ಕಣ್ಣೀರು
ಚಾಮರಾಜನಗರ, ಆಗಸ್ಟ್, 03: ಹಳೆ ವೈಶಮ್ಯ ಹಿನ್ನೆಲೆ ಯಾರೋ ಕಿಡಿಗೇಡಿಗಳು ರಾತ್ರೋರಾತ್ರಿ ಎರಡು ಹೆಕ್ಟೇರ್ ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಕೆಬ್ಬೇಪುರ ಗ್ರಾಮದಲ್ಲಿ ಮಂಜು ಎಂಬುವವರು ಎರಡು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮ್ಯಾಟೊ ಗಿಡಗಳನ್ನು ಕಿಡಿಗೇಡಿಗಳು ಬುಡ ಸಮೇತ ಕಿತ್ತು ನಾಶ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೋ ಬೆಳೆ ಕಳೆದುಕೊಂಡ ರೈತ ಮಂಜು ತನ್ನ ಜಮೀನಿನಲ್ಲಿ ಮಲಗಿ ಕಣ್ಣೀರು ಹಾಕಿ ಗೋಳಾಡಿದ್ದಾನೆ. ಅಲ್ಲದೆ ಕಣ್ಣೀಡಿರುತ್ತಲೇ ಹೋಗಿ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮೊದಲೇ ಕೆ.ಜಿ. ಟೊಮೆಟೋ ಬೆಲೆ ಶತಕ ದಾಟಿದ್ದು, ಇದು ರೈತರಿಗೆ ಹಣ ಮಾಡಿಕೊಳ್ಳಲು ಉತ್ತಮವಾದ ಸಮಯವಾಗಿದೆ. ಅದರಲ್ಲೂ ಟೊಮೆಟೋ ಬೆಲೆ ಗಗನಕ್ಕೇರಿದ್ದೇ ತಕ್ಷಣ ರೈತರು ತಮ್ಮ ತಮ್ಮ ಜಮೀನುಗಳ ಬಳಿ ದಿನದ 24 ಗಂಟೆಯೂ ಕಾವಲು ಕಾಯಲು ಶರು ಮಾಡಿದ್ದಾರೆ. ಇಲ್ಲದಿದ್ದರೆ ರಾತ್ರೋರಾತ್ರಿಯೇ ಗಿಡಗಳ ಸಮೇತ ಟೊಮೆಟೋ ಬೆಳೆಯೇ ನಾಶವಾಗುವ ಸಾಧ್ಯತೆಯಿದೆ. ಅಲ್ಲದೆ ಕಾವಲು ಇದ್ದರೂ ಕೂಡ ಟೊಮೆಟೋ ಕದ್ದಿಯುತ್ತಿರುವ ಪ್ರಕರಣಗಳು ಪ್ರತಿನಿತ್ಯ ವರದಿ ಆಗುತ್ತಲೇ ಇವೆ.
ಟೋಮೆಟೋ ದರ ಏರಿಕೆಯಾಗಿದ್ದು ರೈತರಿಗೆ ಒಂದು ಕಡೆ ಸಂತೋಷವಾದರೆ, ಮತ್ತೊಂದೆಡೆ ಕಾವಲು ಕಾಯುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
15ಕ್ಕೂ ಹೆಚ್ಚು ತೆಂಗಿನ ಮರಗಳ ನಾಶ
ಇನ್ನು ಇತ್ತೀಚೆಗಷ್ಟೇ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ದಾಳಿ ನಡೆಸಿದ ಕಾಡಾನೆಗಳ ಹಿಂಡು ತೋಟದಲ್ಲಿನ 5 ದೊಡ್ಡ ತೆಂಗಿನ ಮರ, 10ಕ್ಕೂ ಹೆಚ್ಚು ಸಸಿಗಳನ್ನು ನಾಶ ಮಾಡಿದ್ದವು.
ತಗಚಗೆರೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ದಾಳಿ ಮಾಡಿದ ಕಾಡಾನೆಗಳ ಹಿಂಡು ಶಶಿಧರ ಎಂಬುವರಿಗೆ ಸೇರಿದ ತೆಂಗಿನಮರಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೆ ತೋಟದಲ್ಲಿ 20ಕ್ಕೂ ಹೆಚ್ಚು ಎಳನೀರು ಕುಡಿದು, ಪಕ್ಕದ ತೋಟದಲ್ಲಿಯೂ ತೆಂಗು, ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿವೆ. ಇಷ್ಟೆಲ್ಲ ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಸಹಾಯಕರಂತೆ ಕೈಕಟ್ಟಿ ಕುಳಿತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದರು.
ಇತ್ತೀಚೆಗಷ್ಟೇ ರಾಮನಗರ ಜಿಲ್ಲೆಯಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಆದರೂ ಕೂಡ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ನಿಂತಿಲ್ಲ. ಜಿಲ್ಲೆಯ ಕಬ್ಬಾಳು ಅರಣ್ಯ ಪ್ರದೇಶ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿ ವಿವಿಧೆಡೆ 20ಕ್ಕೂ ಹೆಚ್ಚು ಕಾಡಾನೆಗಳು ಬಿಡುಬಿಟ್ಟಿವೆ. ಕಳೆದ ಮೂರು ವರ್ಷಗಳಿಂದ ಇವುಗಳ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಹಲವರ ಜೀವವನ್ನು ತೆಗೆದಿವೆ. ಈ ಭೀತಿಯಿಂದಲೇ ನಾವು ಕೃಷಿಯನ್ನೇ ಕೈಬಿಟ್ಟಿದ್ದೇವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.












Click it and Unblock the Notifications