ಬೇಸಿಗೆ ಹಂಗಾಮು; ಮಾವು ನಿರ್ವಹಣೆಗೆ ರೈತರಿಗೆ ಸಲಹೆ
ಕೊಪ್ಪಳ, ಫೆಬ್ರವರಿ 15: ಬೇಸಿಗೆ ಹಂಗಾಮು ಆರಂಭವಾಗಿದ್ದು, ಮಾವಿನ ಹೂಗಳು, ಕಾಯಿಗಟ್ಟುವ ಹಂತದಲ್ಲಿದೆ. ಮಾವು ಬೆಳೆಯುವ ರೈತರಿಗೆ ಬೇಸಿಗೆ ಹಂಗಾಮಿನಲ್ಲಿ ಮಾವು ನಿರ್ವಹಣೆಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವತಿಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ಹಣ್ಣಿನ ರಾಜ ಮಾವು ಸುಮಾರು 3000 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ 12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ಬೆಳೆಯಲಾಗುತ್ತಿದ್ದು, ಇದರಲ್ಲಿ ಬೆನೆಶಾನ್ ನಂತರ ಕೇಸರ ತಳಿ ತುಂಬಾ ಬೇಡಿಕೆ ಇರುವ ಪರಿಮಳವುಳ್ಳ ತಳಿಗಳು. ಕೊಪ್ಪಳ ಕೇಸರ ಎಂದೇ ಖ್ಯಾತಿ ಹೊಂದಿದ ಈ ತಳಿಗೆ ರಾಜ್ಯದ ತುಂಬೆಲ್ಲಾ ಬೇಡಿಕೆ ಇದೆ.

ಈ ವರ್ಷ ಮಳೆ ಕಮ್ಮಿಯಿದ್ದರೂ, ಬೆಳಗಿನ ತೇವಾಂಶ ಹಾಗೂ ಆರ್ದ್ರತೆಯಿಂದಾಗಿ ಹೂವು ಮತ್ತು ಕಾಯಿ ಕಚ್ಚುವುದು ತುಂಬ ತಡವಾಗಿದೆ. ಈಗ ಶೇ. 70ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹೂವು ಮತ್ತು ಹೀಚುಗಳು ಕಾಣಸಿಕೊಂಡಿವೆ. ಈ ಹಂತದಲ್ಲಿ ಕೀಟ ಮತ್ತು ರೋಗಗಳ ಬಾಧೆ ಅಲ್ಲದೇ ಹೂವು ಉದುರುವಿಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗೆ ಕೆಲ ಮಾವಿನ ತೋಟಗಳಿಗೆ ಭೇಟಿ ನೀಡಿ, ಬೇಸಿಗೆ ಹಂಗಾಮಿನಲ್ಲಿ ಮಾವು ಬೆಳೆ ನಿರ್ವಹಣಾ ಕ್ರಮಗಳ ಕುರಿತಾಗಿ ಸಲಹೆಗಳನ್ನು ನೀಡಿದ್ದಾರೆ.
ಬೆಳೆ ನಿರ್ವಹಣಾ ಕ್ರಮಗಳು: ಪ್ರಸ್ತುತ ತಾಪಮಾನ ಹೆಚ್ಚಾಗುತ್ತಿರುವುದರಿಂದ ಬೆಳಗ್ಗೆ ಅಥವಾ ಸಾಯಂಕಾಲ ಹನಿ ನೀರಾವರಿ ಇದ್ದಲ್ಲಿ 3 ರಿಂದ 4 ಗಂಟೆ ನೀರು ಹರಿಸಬೇಕು. ಹರಿ ನೀರಾವರಿ ಇದ್ದಲ್ಲಿ 8 ರಿಂದ 10 ದಿನಗಳಿಗೊಮ್ಮೆ ಮಣ್ಣಿನ ವಿಧವನ್ನು ಆದರಿಸಿ ನೀರು ಹರಿಸಬೇಕು.
ಗಿಡದ ಸುತ್ತಲೂ ಪಾತಿ ಮಾಡಿ ಸಸ್ಯಜನ್ಯ ಸಾವಯವ ಉಳಿಕೆಗಳನ್ನು ಹೊದಿಕೆ ಹಾಕಬೇಕು. ಹೂವಾಡುವ ಹಂತದಲ್ಲಿ ಜಾನುವಾರುಗಳು ಮತ್ತು ಯಂತ್ರಗಳ ಓಡಾಟ ಕಡಿಮೆ ಮಾಡಬೇಕು. ಇದರಿಂದಾಗಿ ಹೂವು ಕಾಯಿ ಉದುರುವುದನ್ನು ತಡೆಗಟ್ಟಬಹುದು. ಇರುವೆಗಳು ಹಾಗೂ ಗೆದ್ದಲುಗಳ ನಿಯಂತ್ರಣ ಮಾಡಬೇಕು.
ಗಿಡದ ಬಡ್ಡೆಗೆ ನೆಲದಿಂದ ಮೇಲಕ್ಕೆ ಮೂರು ಅಡಿಯಷ್ಟು ಸುತ್ತಲೂ ಸಿ.ಓ.ಸಿ. ಪುಡಿ ಅಥವಾ ಬೋರ್ಡೋ ಪುಡಿ ಅಥವಾ ಸುಣ್ಣವನ್ನು ಲೇಪನ ಮಾಡಬೇಕು. ಹೂವು, ಕಾಯಿ 40:60 ಅನುಪಾತದಲ್ಲಿದ್ದರೇ ರೋಗ, ಕೀಟಗಳ ಹತೋಟಿ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ರೈತರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಿಂಪರಣೆ ಮಾಡುವಾಗ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ದೊಡ್ಡ ಗಿಡಗಳಿಗೆ 8 ರಿಂದ 10 ಲೀಟರ್ ದ್ರಾವಣ ಸಿಂಪಡಿಸಬೇಕು.
ಹೂವು ಜಾಸ್ತಿ ಇದ್ದಾಗ ಸಿಂಪರಣೆ ಮಾಡಬಾರದು ಮತ್ತು ಅತಿ ಮುಖ್ಯವಾಗಿ ಗಂಧಕ ಮತ್ತು ಗಂಧಕಯುಕ್ತ ಪದಾರ್ಥಗಳನ್ನು ಸಿಂಪಡಿಸಬಾರದು. ಮಾವು ಅತ್ಯಂತ ಉಪಕಾರಿ ಬಹುವಾರ್ಷಿಕ ಹಣ್ಣಿನ ಬೆಳೆಯಾಗಿದ್ದು, ಅನೇಕ ಪರಭಕ್ಷಕ ಕೀಟಗಳು ಹಾಗೂ ಜೇನು ನೊಣದಂತಹ ಉಪಕಾರಿ ಕೀಟಗಳಿಗೆ ಆಶ್ರಯ ನೀಡುತ್ತದಾದ್ದರಿಂದ ಅನಾವಶ್ಯಕವಾಗಿ ಮತ್ತು ಹಾನಿಕಾರಕ ರಾಸಾಯನಿಕಗಳ ಸಿಂಪರಣೆ ಮಾಡಬಾರದು.
ಉತ್ತಮ ಪೋಷಣೆಗಾಗಿ ಮಾವು ಸ್ಪೇಷಲ್, ಜೀವಾಮೃತ, ಗೋಕೃಪಾಮೃತ ಅಲ್ಲದೇ ದ್ರವರೂಪದ ಗೊಬ್ಬರಗಳನ್ನು 15 ದಿನಗಳಿಗೊಮ್ಮೆ ಅಗತ್ಯವಿದ್ದಲ್ಲಿ ಸೂಕ್ತ ಪೀಡೆನಾಶಕಗಳೊಂದಿಗೆ ಬೆರೆಸಿ ಸಿಂಪರಿಸಬೇಕು ಅಥವಾ ಹನಿ ನೀರಾವರಿ ಮೂಲಕ ವಾರಕ್ಕೊಮ್ಮೆ ನೀಡಬೇಕು. ಮಾವು ಸ್ಪೆಷಲ್ ಕೇವಲ ಸಿಂಪರಣೆಗಾಗಿ ಉಪಯೋಗಿಸಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳುಗಳಾದ ಡಾ ಎಂ. ವಿ. ರವಿ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9480247745. ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಅವರನ್ನು ಮೊಬೈಲ್ ಸಂಖ್ಯೆ 9482672039 ಮೂಲಕ ಸಂಪರ್ಕಿಸಬಹುದು.












Click it and Unblock the Notifications