ಕೊಡಗಿನಲ್ಲಿ ಜನರನ್ನು ಸೆಳೆದ ಮಾವು ಮತ್ತು ಹಲಸು ಮೇಳ
ಮಡಿಕೇರಿ, ಮೇ 29; ಇದು ಮಾವು ಮತ್ತು ಹಲಸಿನ ಹಣ್ಣಿನ ಕಾಲ. ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ಜನರನ್ನು ಸೆಳೆಯುತ್ತಿವೆ. ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ಭಾನುವಾರದ ತನಕ ನಡೆದ 'ಮಾವು ಮತ್ತು ಹಲಸು ಮೇಳ 2023' ಜನರನ್ನು ಸೆಳೆಯಿತು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್ ಸಹಯೋಗದಲ್ಲಿ ಮೇ 26 ರಿಂದ 28ರ ಭಾನುವಾರದ ತನಕ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಿತು. ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಶುಕ್ರವಾರ ಮೇಳಕ್ಕೆ ಚಾಲನೆ ನೀಡಿದ್ದರು.

ಮಾವು ಮತ್ತು ಹಲಸು ಮೇಳ ಉದ್ಘಾಟಿಸಿ ಮಾತನಾಡಿದ್ದ ಶಾಸಕರು, "ಮಾವು ಮತ್ತು ಹಲಸು ಮೇಳದಿಂದ ರೈತರು ನೇರವಾಗಿ ತಾವು ಉತ್ಪಾದಿಸಿದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಜೊತೆಗೆ ಗ್ರಾಹಕರಿಗೂ ಸಹಕಾರಿಯಾಗಲಿದೆ" ಎಂದು ಹೇಳಿದ್ದರು.
"ಮಾವು ಮತ್ತು ಹಲಸು ಮೇಳದಿಂದ ರೈತರನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಹಕಾರಿಯಾಗಿದೆ. ಜಿಲ್ಲಾಡಳಿತ ಉತ್ತಮ ಕೆಲಸ ಕೈಗೊಂಡಿದೆ" ಎಂದು ಹೇಳಿದ್ದರು. ಶುಕ್ರವಾರದಿಂದ ಭಾನುವಾರದ ತನಕ ಸಾವಿರಾರು ಜನರು ಭೇಟಿ ನೀಡಿ ಮೇಳವನ್ನು ಯಶಸ್ವಿಗೊಳಿಸಿದರು.

ವಿವಿಧ ತಳಿಯ ಮಾವಿನ ಹಣ್ಣುಗಳು; ಮಾವು ಮತ್ತು ಹಲಸು ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವನ್ನು ಕೊಂಡು ಕೊಳ್ಳಲು ಈ ಮೇಳ ಗ್ರಾಹಕರು ಮತ್ತು ಬೆಳೆಗಾರರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿತು.
ಈ ಮಾವು ಮತ್ತು ಹಲಸು ಮೇಳದಲ್ಲಿ ಬಾದಾಮಿ, ರಸಪುರಿ, ಸಿಂಧೂರ, ತೋತಾಪುರಿ, ದಾಶೇರಿ, ನೀಲಂ, ರುಮಾನಿ, ಅಮ್ರಪಾಲಿ, ಕೊಡಗಿನ ಕಾಡು ಮಾವು, ಮಲ್ಗೋವ, ಮಲ್ಲಿಕಾ, ಬಂಗಿನಪಲ್ಲಿ, ಸಕ್ಕರೆ ಗುತ್ತಿ, ಕಲ್ಕತ್ತಾ ಗೋಲ್ಡ್, ಕೇಸರ್, ವಾಲಜ, ಇಮಾಮ್ ಪಸಂದ್, ಮುಂದ, ಕಾಲಪಾಡಿ, ಹೀಗೆ 15 ಹೆಚ್ಚು ರೀತಿಯ ಮಾವಿನ ಹಣ್ಣುಗಳು ಕಂಡು ಬಂದವು.
ಪಿಂಗಾರ ತೋಟಗಾರಿಕಾ ಫಾಮ್ರ್ಸ್ ಪ್ರೊಡ್ಯೂಷನ್ ವತಿಯಿಂದ ಹಲಸಿನಕಾಯಿ ಹಪ್ಪಳ, ಚಿಪ್ಸ್, ಹಲ್ವ, ಸುಕೇಲಿ, ಹಲಸಿನಕಾಯಿ ಬೀಜದ ಬಿಸ್ಕೇಟ್, ಬಾಳೆಹಣ್ಣಿನ ಹಪ್ಪಳ, ಪಲ್ಫ್ ಮತ್ತಿತರ ಹಲಸು ಮತ್ತು ಬಾಳೆ ಹಣ್ಣಿನ ತಿಂಡಿ ತಿನಿಸುಗಳು ಮೇಳದಲ್ಲಿ ಇಡಲಾಗಿತ್ತು.
ಪುತ್ತೂರಿನ ತೋಟಗಾರಿಕಾ ಇಲಾಖೆ ವತಿಯಿಂದ ವಿವಿಧ ಜಾತಿಯ ಮಾವಿನ ತಳಿಗಳಾದ ಮಲ್ಲಿಕಾ, ಕೇಸರ್, ಕಾಳಪಾಡಿ, ಮತ್ತಿತರ ಮಾವಿನ ಸಸಿಗಳನ್ನು ಮಾರಾಟ ಮಾಡಲಾಯಿತು. ರೈತರಿಗೆ ಸಾವಯವ ಕೃಷಿ ದೃಢೀಕರಣ ನೀಡುವ ಸಂಸ್ಥೆ ವತಿಯಿಂದ ಬೆಲ್ಲದ ಪುಡಿ ಹಾಗೂ ಅಚ್ಚು ಬೆಲ್ಲವನ್ನು ಮಾರಾಟ ಮಾಡಲಾಯಿತು.
ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮೇಳದ ಕುರಿತು ಮಾತನಾಡಿ, "ಮಾವು ಮತ್ತು ಹಲಸು ಮೇಳದಲ್ಲಿ 25ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ ಜಿಲ್ಲೆಯಿಂದ ಹೆಚ್ಚಿನ ಮಾವು ಬೆಳೆಗಾರರು ಆಗಮಿಸಿದ್ದಾರೆ. ರುಚಿಯಾದ ಮಾವು ಮತ್ತು ಹಲಸು ಹಣ್ಣನ್ನು ಗ್ರಾಹಕರು ಸವಿಯುವಂತಾಗಬೇಕು. ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಿದೆ" ಎಂದು ಹೇಳಿದ್ದರು.
ಮಾವು ಮತ್ತು ಹಲಸು ಋತುವಿನಲ್ಲಿ ಹಾಪ್‌ಕಾಮ್ಸ್ ವಿವಿಧ ಜಿಲ್ಲೆಗಳಲ್ಲಿ ಹಾವು & ಹಲಸು ಮೇಳ ಆಯೋಜನೆ ಮಾಡುತ್ತದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಈಗ 2023ನೇ ಸಾಲಿನ ಮಾವು ಮೇಳ ನಡೆಯುತ್ತಿದೆ.












Click it and Unblock the Notifications