ಮುಂಗಾರು ವಿಳಂಬ, ಕರ್ನಾಟಕಕ್ಕೆ ಕಾದಿದೆ ಸಂಕಟ
ಬೆಂಗಳೂರು, ಜೂ.15: ನೈಋತ್ಯ ಮುಂಗಾರು ರಾಜ್ಯದ ಕರಾವಳಿ ಹೊರತುಪಡಿಸಿದರೆ ಇನ್ನೂ ಕೂಡ ಒಳನಾಡನ್ನು ಪ್ರವೇಶಿಸಿಲ್ಲ. ಇದರಿಂದ ರೈತ ಸಮುದಾಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಹೈದರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗ ಬಿಸಿಲಿನ ತಾಪಕ್ಕೆ ಸುಡುತ್ತಿದೆ.
ಹೈದರಾಬಾದ್ ಸೇರಿದಂತೆ ಆಂಧ್ರ ಗಡಿ ಭಾಗದಲ್ಲಿರುವ ಕರ್ನಾಟಕದ ಮಂದಿ ತವರೂರಿನ ಕಡೆ ಮುಖ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಪಾದರಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕೆಲವೆಡೆ 49 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ಕೆಲವು ಮಂದಿ ಸಾವಿಗೂ ಕಾರಣವಾಗಿದೆ. ಇತ್ತ ಕರ್ನಾಟಕದಲ್ಲಿ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗ ಬಿಟ್ಟರೆ ಮಳೆ ನಿರೀಕ್ಷೆಯಲ್ಲಿ 15 ದಿನಗಳು ಬೆಂಕಿ ಬಿರುಗಾಳಿಯಂತೆ ಹಾದು ಹೋಗಿವೆ.[ದೆಹಲಿ ಸುಡುತ್ತಿದೆ, ಕೇರಳ, ಕರುನಾಡಿನಲ್ಲಿ ತಂಪು]
ಮುಂಗಾರು ವಿಳಂಬ: ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶಿಸುವುದು ವಾಡಿಕೆ. ಆದರೆ, ಎರಡು ವಾರ ಕಳೆದರೂ ಇನ್ನೂ ಕೂಡ ರಾಜ್ಯದ ಒಳನಾಡಿಗೆ ಮುಂಗಾರು ಎಂಟ್ರಿ ಕೊಡಲು ಹಿಂದೇಟು ಹಾಕುತ್ತಿದೆ. ಹವಾ ಮುನ್ಸೂಚನೆ ಪ್ರಕಾರ, ಈ ತಿಂಗಳ ಅಂತ್ಯದವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಇಲ್ಲ. ಇದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳದೆ ಮಂದವಾಗಿ ಸಾಗುತ್ತಿವೆ. ಪ್ರಮುಖ ಜಲಾಶಯಗಳಿಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿಲ್ಲ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಅವರ ಪ್ರಕಾರ, ಈ ಬಾರಿಯ ಮುಂಗಾರು ಕರಾವಳಿ ಬಿಟ್ಟು ಒಳನಾಡಿಗೆ ಪ್ರವೇಶವನ್ನೇ ಮಾಡಿಲ್ಲ. ನಿರೀಕ್ಷೆಯಂತೆ ಈ ಬಾರಿ ಮುಂಗಾರು ಸಾಕಷ್ಟು ವಿಳಂಬವಾಗಿದೆ. ಇದು ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಮುನ್ನಚ್ಚರಿಕೆ ವಹಿಸದಿದ್ದರೆ ಮಳೆಗಾಲದಲ್ಲೂ ಬಾಯಾರಿಕೆ ತಪ್ಪಿದ್ದಲ್ಲ ಎಂದಿದ್ದಾರೆ.
ವ್ಯಾಪಕ ಮಳೆ ನಿರೀಕ್ಷೆಯಿಲ್ಲ: ಭಾರತೀಯ ಹವಾಮಾನ ಇಲಾಖೆ[IMD ವೆಬ್ ನೋಡಿ] ಒಳನಾಡನ್ನು ಪ್ರವೇಶಿಸುತ್ತಿರುವುದಾಗಿ ಪ್ರಕಟಿಸಿದೆ. ಜೂನ್ ಅಂತ್ಯದವರೆಗೂ ರಾಜ್ಯದ ಒಳನಾಡಿನಲ್ಲಿ ಆಶಾದಾಯಕ ರೀತಿಯಲ್ಲಿ ಮಳೆಯಾಗುವ ಲಕ್ಷಣಗಳು ಇದುವರೆಗೂ ಗೋಚರಿಸಿಲ್ಲ.
ಆದರೆ, ಜುಲೈ ಮೊದಲ ವಾರದಲ್ಲಿ ವ್ಯಾಪಕ ಮತ್ತು ಸಮರ್ಪಕ ಮಳೆಯಾಗುವ ಲಕ್ಷಣಗಳಿವೆ. ಕಳೆದ ಮೇ ತಿಂಗಳಲ್ಲಿ ಬಿದ್ದ ಮಳೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಮುಂಗಾರಿನ ಆರಂಭದಲ್ಲೇ ರಾಜ್ಯ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಬಿತ್ತನೆಗೂ ಹಿನ್ನಡೆಯಾಗುತ್ತಿದೆ. ಈ ಬಾರಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಮಳೆ ಕೊರತೆ ತೀವ್ರವಾಗಿ ಕಂಡುಬಂದಿದೆ.
ಅಂಕಿ ಅಂಶಗಳಲ್ಲಿ ಮಳೆ ಕೊರತೆ : ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಜೂನ್ 1 ರಿಂದ ಇದುವರೆಗೆ ವಾಡಿಕೆ ಮಳೆ ಪ್ರಮಾಣ 82 ಮಿಲಿಮೀಟರ್ ಆಗಿದ್ದರೆ, ಕೇವಲ 56.5 ಮಿಲಿ ಮೀಟರ್‌ನಷ್ಟು ಮಾತ್ರ ಮಳೆಯಾಗಿದೆ.
ಇದರಿಂದ ಶೇ.31.1 ಮಿಲಿ ಮೀಟರ್‌ನಷ್ಟು ಮಳೆ ಕೊರತೆ ರಾಜ್ಯದಲ್ಲಿ ಉಂಟಾಗಿದೆ. ದಕ್ಷಿಣ ಒಳನಾಡು ಹೊರತುಪಡಿಸಿದರೆ ರಾಜ್ಯದ ಉಳಿದೆಲ್ಲ ಭಾಗಗಳಲ್ಲೂ ಮಳೆಯ ಕೊರತೆ ಕಂಡುಬಂದಿದೆ.


Click it and Unblock the Notifications
