ಕರ್ನಾಟಕದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ.ಸಾಲ: ಸಿಎಂ ಬೊಮ್ಮಾಯಿ

ಕಲಬುರಗಿ ,ನವೆಂಬರ್ 15: "ಕರ್ನಾಟಕದ ಸರಿಸುಮಾರು 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಿರುವ ರಾಜ್ಯ ಸರ್ಕಾರ, ಈ ಸಂಬಂಧ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸಂಪೂರ್ಣ ಗಣಕೀಕರಣ ಮಾಡಲು ತೀರ್ಮಾನಿಸಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಆಯೋಜಿಸಿದ್ದ '69ನೇ ಅಖಿಲ ಭಾರತ ಸಹಕಾರ ಸಪ್ತಾಹ- 2022' ಉದ್ಘಾಟಿಸಿ ಮಾತನಾಡಿದರು.

"ರಾಜ್ಯದ ಲಕ್ಷಾಂತರ ರೈತರಿಗೆ ಆರ್ಥಿಕ ನೆರವು ಒದಗಿಸಲಿದ್ದೇವೆ. ರೈತರಿಗೆ ಒಟ್ಟು 24 ಸಾವಿರ ಕೋಟಿ ರೂ. ಸಾಲ ನೀಡುವುದಾಗಿ ಅಂದಾಜಿಸಿರುವ ರಾಜ್ಯ ಸರ್ಕಾರ ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಸಾಲವನ್ನು ರೈತರ ಖಾತೆಗೆ ನೇರವಾಗಿ ಪಾವತಿಸುವ ಸಲುವಾಗಿ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಗಣಕೀರಣ ಮಾಡಲಾಗುವುದು" ಎಂದರು.

"ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದರೆ ರೈತರ ಆದಾಯವೂ ಹೆಚ್ಚುತ್ತದೆ. ಆಗ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಹೆಕ್ಟೇರಿಗೆ ನೀಡುವ ಸಾಲದ ಮೊತ್ತಕ್ಕೆ ಆರ್ಥಿಕ ಮಾಪನವನ್ನು ಸಹಕಾರ ಸಂಘಗಳೇ ತೀರ್ಮಾನಿಸಬೇಕು. ಆಗ ಮಾತ್ರ ರೈತರು ಮೀಟರ್ ಬಡ್ಡಿಯ ಸುಳಿಗೆ ಸಿಲುಕದೇ ಅವರ ಬಾಳು ಹಸನಾಗುತ್ತದೆ" ಎಂದು ಹೇಳಿದರು.

"ರಾಜ್ಯ ಸರ್ಕಾರ ರೈತರಿಗೆ ನೆರವಾಗುವ ಕೆಲಸ ಮಾಡುತ್ತಿದೆ. ಕೃಷಿ ಮೇಲಿನ ಬಂಡವಾಳವನ್ನು ಹೆಚ್ಚಿಸುವ ಕೆಲಸ ಪ್ರಾರಂಭಿಸಿದೆ. 10 ಲಕ್ಷ ಜನ ರೈತರಿಗೆ ಸಾಲ, ಯಶಸ್ವಿನಿ ಮತ್ತೆ ಜಾರಿ, ಬ್ಯಾಂಕುಗಳ ಕಂಪ್ಯೂಟರೀಕರಣ ಮಾಡಲಾಗುತ್ತಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ನೀಡಿರುವ ಸರ್ಕಾರ ನಮ್ಮದು" ಎಂದು ಅವರು ವಿವರಿಸಿದರು.

ಡಿಸಿಸಿ ಬ್ಯಾಂಕ್‌ನಿಂದ 2ಲಕ್ಷ ಮಂದಿಗೆ ಸಾಲ

ಡಿಸಿಸಿ ಬ್ಯಾಂಕ್‌ನಿಂದ 2ಲಕ್ಷ ಮಂದಿಗೆ ಸಾಲ

"ರಾಜ್ಯ ಸರ್ಕಾರದ ಬೆಂಬಲದಿಂದಲೇ ಸಂಕಷ್ಟದಲ್ಲಿದ್ದ ಕಲಬುರಗಿ ಡಿಸಿಸಿ ಬ್ಯಾಂಕ್ ಕಾಯಕಲ್ಪ ಮಾಡಿ, ಸದೃಢ ಬ್ಯಾಂಕ್ ಆಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಅದಕ್ಕೂ ಮೊದಲ ಬ್ಯಾಂಕ್ ಮುಚ್ಚುವ ಹಂತದಲ್ಲಿತ್ತು. ಇದೀಗ ಈ ಬ್ಯಾಂಕ್ ಜಿಲ್ಲಾ ವ್ಯಾಪ್ತಿಯ 2 ಲಕ್ಷ ರೈತರಿಗೆ 1,012 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದೆ. ಸರ್ಕಾರದ ಸಹಕಾರದಿಂದ 2 ಲಕ್ಷ ರೈತರ ಜೀವನವನ್ನು ಈ ಮೂಲಕ ಸುಗಮಗೊಳಿಸಲಾಗಿದೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಆರೋಗ್ಯ ಹಿತರಕ್ಷಣೆಗಾಗಿ ಯಶಸ್ವಿನಿ ಮತ್ತೆ ಪ್ರಾರಂಭ

ಆರೋಗ್ಯ ಹಿತರಕ್ಷಣೆಗಾಗಿ ಯಶಸ್ವಿನಿ ಮತ್ತೆ ಪ್ರಾರಂಭ

ರೈತರ ಆರೋಗ್ಯ ಹಿತರಕ್ಷಣೆಗೆ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ 'ಯಶಸ್ವಿನಿ ಯೋಜನೆ' ಮರು ಆರಂಭಿಸಲಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆ ದೊರೆಯುತ್ತದೆ. ಈ ವರ್ಷ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಗೆ 300 ಕೋಟಿ ಇಡಲಾಗಿದೆ. ಯಶಸ್ವಿನಿ ಯೋಜನೆಯಿಂದ ಚಿಕಿತ್ಸೆಗೆ ಅಲೆದಾಟ ತಪ್ಪಿಸಲಿದೆ. ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಲಾಭ ಪಡೆಯಬಹುದಾಗಿದೆ. ಹೃದಯ, ಕಿಡ್ನಿ, ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಯೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ.

ಕಳೆದ ನವೆಂಬರ್ 1ರಿಂದಲೇ ನೋಂದಣಿ ಪ್ರಾರಂಭವಾಗಿದೆ. ಡಿಸೆಂಬರ್‌ವರೆಗೆ ನೋಂದಣಿಯಾಗಲಿದೆ. ಜನವರಿಯಿಂದ ಮುಂದಿನ ಒಂದು ವರ್ಷದವರೆಗೂ ಟ್ರಸ್ಟಿನ ಮೂಲಕ ರೈತರಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ರೈತರಿಗೆ ಸ್ಪಂದಿಸುವ ಮಹತ್ವದ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಪುರಸ್ಕರಿಸಿದೆ ಎಂದು ತಿಳಿಸಿದರು.

ಸಹಕಾರಿ ರಂಗದಿಂದ ಶ್ರಮಿಕರಿಗೆ ಉತ್ತಮ ಸಹಕಾರ

ಸಹಕಾರಿ ರಂಗದಿಂದ ಶ್ರಮಿಕರಿಗೆ ಉತ್ತಮ ಸಹಕಾರ

ಎಲ್ಲಿಯವರೆಗೆ ರೈತರು ಆರ್ಥಿಕವಾಗಿ ಬಲಿಷ್ಠ, ಸಬಲೀಕರಣ, ಸ್ವಾವಲಂಬಿ ಆಗುವುದಿಲ್ಲವೋ ಅಲ್ಲಿಯವರೆಗೂ ಈ ದೇಶದ ಆಹಾರ ಸುರಕ್ಷತೆಯ ಪ್ರಶ್ನೆ ಏಳುತ್ತದೆ. ರೈತರನ್ನು ಸಶಕ್ತರನ್ನಾಗಿಸುವ ಹಲವಾರು ಕಾರ್ಯಕ್ರಗಳನ್ನು ನಾವು ರೂಪಿಸಿದ್ದೇವೆ. ಸರ್ಕಾರ ರೈತರ ವಿದಾಭ್ಯಾಸ ನೋಡಿಕೊಳ್ಳುತ್ತದೆ. ಈ ವರ್ಷ 10 ಲಕ್ಷ ಜನ ರೈತರ ಮಕ್ಕಳಿಗೆ, 6 ಲಕ್ಷ ರೈತ ಕೂಲಿಕಾರರ ಮಕ್ಕಳಿಗೆ, ನೇಕಾರರು, ಟ್ಯಾಕ್ಸಿಚಾಲಕರು, ಆಟೋಚಾಲಕರ ಮಕ್ಕಳಿಗೆ ವಿಸ್ತರಣೆ ಮಾಡಲಾಗಿದೆ. ಕಾಯಕ ಯೋಜನೆಯಡಿ ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಸಹಾಯಧನ ಒದಗಿಸಲಾಗುತ್ತಿದೆ. ದುಡಿಯುವ ವರ್ಗ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದುಡಿಮೆ ನಂಬಿದ ಈ ಸಮಾಜಕ್ಕೆ ಸಹಕಾರಿ ರಂಗ ದೊಡ್ಡ ಮತ್ತು ಉತ್ತಮ ಸಹಕಾರ ನೀಡುತ್ತಿದೆ.

ಡಿಸಿಸಿ ಬ್ಯಾಂಕ್ ಮತ್ತೊಂದು ಯಶೋಗಾಥೆ ಬರೆಯಲಿ

ಡಿಸಿಸಿ ಬ್ಯಾಂಕ್ ಮತ್ತೊಂದು ಯಶೋಗಾಥೆ ಬರೆಯಲಿ

ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಹಕಾರಿ ರಂಗ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ಅಡಿಯಲ್ಲಿ ಈ ಸಹಕಾರ ರಂಗವನ್ನು ಇನ್ನಷ್ಟು ಗಟ್ಟಿಗೊಳಿಸಿ ಇದಕ್ಕೆ ಆರ್ಥಿಕ ಬೆಂಬಲ ಕೊಟ್ಟು ಬಲಿಷ್ಠಗೊಳಿಸಲು ಕೇಂದ್ರ ನಿರ್ಧಾರ ಕೈಗೊಂಡಿದೆ. ಪ್ರಥಮ ಬಾರಿಗೆ ಸಹಕಾರಿ ಇಲಾಖೆಯನ್ನು ಸೃಷ್ಟಿಸಿದ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಈ ರಂಗದಲ್ಲಿ ದೊಡ್ಡ ಕ್ರಾಂತಿಗೆ ಮುಂದಾಗಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.

ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ದೊಡ್ಡ ಪ್ರಮಾಣದ ಹಾಲು ಉತ್ಪಾದಕರಿಗೆ ಆಶ್ರಯವಾಗಿದೆ. ಕ್ಯಾಂಪ್ಕೋ ಕೂಡ ಯಶಸ್ಸಿನ ಕಥೆ. ಅದೇ ರೀತಿ ಕಲಬುರಗಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಬರುವ ದಿನಗಳಲ್ಲಿ ಅತಿ ಹೆಚ್ಚು ಜನರಿಗೆ ಸಾಲವನ್ನು ಕೊಟ್ಟು ಮತ್ತೊಂದು ಯಶೋಗಾಥೆಯನ್ನು ಬರೆಯಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು.

ಜಿಟಿ ದೇವೇಗೌಡರಿಗೆ ಸರ್ಕಾರ ಸ್ಪಂದನೆ

ಜಿಟಿ ದೇವೇಗೌಡರಿಗೆ ಸರ್ಕಾರ ಸ್ಪಂದನೆ

ಸರ್ಕಾರ ಸಹಕಾರಿ ರಂಗದಲ್ಲಿ ಇನ್ನಷ್ಟು ಬದಲಾವಣೆ ಅಭಿವೃದ್ಧಿಪರ ನಿರ್ಣಯಗಳನ್ನು ಕೈಗೊಳ್ಳಲಿದೆ. ಸಹಕಾರಿ ಚಿಂತನೆಯ ಸಪ್ತಾಹ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಡೆಯುತ್ತಿದ್ದು, ಜಿ. ಟಿ. ದೇವೇಗೌಡರ ನೇತೃತ್ವದಲ್ಲಿ ಸಪ್ತಾಹದಲ್ಲಿ ಮೂಡಿಬಂದ ವಿಚಾರಗಳಿಗೆ ಸರ್ಕಾರ ಸಂಪೂರ್ಣವಾಗಿ ಸ್ಪಂದಿಸಲಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗದಲ್ಲಿ ಸಹಕಾರಿ ಕ್ಷೇತ್ರ ಮುಖ್ಯವಾಹಿನಿಗೆ ಬರಬೇಕು. ಜನರಿಂದ ಜನರಿಗೋಸ್ಕರವಾಗಿ ಇರುವ ಸಹಕಾರ ಚಳವಳಿ ಯಶಸ್ವಿಯಾಗಬೇಕು. ನಾಡಿನ ದುಡಿಯುವ ವರ್ಗಕ್ಕೆ ಸಹಕಾರ ಸ್ಪಂದಿಸಬೇಕು. ಸಹಕಾರ ರಂಗ ಸರ್ವಸ್ಪರ್ಶಿ, ಸರ್ವವ್ಯಾಪಿವಾಗಲಿ ಎಂದರು.

ಈ ವೇಳೆ ಕೇಂದ್ರ ಸಚಿವರಾದ ಭಗವಂತ ಖೂಬಾ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಸಂಸದ ಉಮೇಶ ಜಾಧವ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡ್, ಜಿ.ಟಿ.ದೇವೇಗೌಡ, ವಿಧಾನ‌ ಪರಿಷತ್ ಸದಸ್ಯರಾದ ಶಶೀಲ್, ಬಾಬುರಾವ್ ಚಿಂಚನಸೂರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+