ಕರ್ನಾಟಕದಲ್ಲಿ ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ : ಮೋದಿ
Recommended Video

ನವದೆಹಲಿ, ಡಿಸೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು ರೈತರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದನಿಯೆತ್ತಿರುವ ಸಂದರ್ಭದಲ್ಲೇ ಮೋದಿ ಅವರು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಸರ್ಕಾರವು, ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ ಮಾಡುತ್ತಿದೆ. 6 ತಿಂಗಳ ಅಧಿಕಾರ ಅವಧಿಯಲಿ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
'ಮೇರಾ ಬೂತ್ ಸಬ್ಸೆ ಮಜಬೂತ್' ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ಸಂಸದರಿರುವ ಬೆಳಗಾವಿ, ಬೀದರ್, ಧಾರವಾಡ, ದಾವಣಗೆರೆ ಹಾಗೂ ಹಾವೇರಿಯ ಬೂತ್ ಮಟ್ಟದ ಕಾರ್ಯಕರ್ತರ ಜತೆ ಏಕಕಾಲಕ್ಕೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಕೇವಲ ಅಧಿಕಾರಕ್ಕೆ ಹಂಬಲಿಸುತ್ತಿದೆ. ರೈತರು, ದಲಿತರು ಸಂಕಷ್ಟದಲ್ಲಿರುವಾಗ ನಾವೇನು ಮಾಡಬೇಕು ಎಂದು ಬೆಳಗಾವಿ ವಿಭಾಗದ ಅಧ್ಯಕ್ಶ ಶ್ರೀನಿವಾಸ್ ಪ್ರಶ್ನೆ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಕರ್ನಾಟಕದ ಜನರ ನೋವು ನನಗೆ ಅರ್ಥವಾಗುತ್ತದೆ. ಯಾರು ಸಂತುಷ್ಟರಾಗಿದ್ದಾರೆ, ಯಾರಿಗೆ ಅಸಮಾಧಾನ ಎಂಬುದೇ ಪ್ರತಿದಿನ ಕರ್ನಾಟಕದಲ್ಲಿ ಸುದ್ದಿ. ಅದೂ ಕೇವಲ ಮಂತ್ರಿಗಿರಿಗಾಗಿ ಅಧಿಕಾರದಲ್ಲಿರುವವರು ಮ್ಯೂಸಿಕಲ್ ಚೇರ್ ಆಡುತ್ತಿದ್ದಾರೆ.
ಜನರ ಆಶೋತ್ತರ ಅವರಿಗೆ ಬೇಕಿಲ್ಲ. ಸಂಪುಟ ದರ್ಜೆ ಸ್ಥಾನವಷ್ಟೇ ಅವರ ಚಿಂತೆ. ಸಾಮಾನ್ಯ ಜನರಿಗೆ ಅಭಿವೃದ್ಧಿ ಬೇಕು. ಆದರೆ ರಾಜ್ಯ ಸರ್ಕಾರದಲ್ಲಿರುವವರಿಗೆ ಕುಟುಂಬ ರಾಜಕಾರಣವೇ ಮುಖ್ಯ. ಜನರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕಿದ್ದರೆ, ಅಲ್ಲಿ ನಡೆಯುತ್ತಿರುವುದು ಮುಕ್ತ ಭ್ರಷ್ಟಾಚಾರ.
ಕರ್ನಾಟಕದ ರೈತರ ಆತ್ಮಹತ್ಯೆ ಹೊಣೆಯನ್ನೂ ಅವರು ಹೊರುತ್ತಾರೆಯೇ? ಬೆಳಗಾವಿ ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರ ಕಾರಣ. ಹಾಸನದಲ್ಲಾದ ದಲಿತರ ಮೇಲಿನ ದೌರ್ಜನ್ಯ ರಾಜ್ಯ ಸರ್ಕಾರದ ಹೊಣೆಗೇಡಿತನಕ್ಕೆ ಸಾಕ್ಷಿ. ಹೇಗಾದರೂ ಮಾಡಿ ಸರ್ಕಾರದಲ್ಲಿರಬೇಕು ಎಂಬುದಷ್ಟೇ ಇವರ ಆಸೆ. ಸದ್ಯದಲ್ಲೇ ಜನ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications