Honey Festival 2022: ಮಡಿಕೇರಿಯಲ್ಲಿ ಡಿ. 24, 25ರಂದು ಜೇನು ಹಬ್ಬ
ಮಡಿಕೇರಿ, ಡಿಸೆಂಬರ್ 22; ಕೊಡಗು ಜಿಲ್ಲೆಯಲ್ಲಿ ಜೇನು ಕೃಷಿಯನ್ನು ಉತ್ತೇಜಿಸಲು 'ಜೇನು ಹಬ್ಬ-2022' ಆಯೋಜನೆ ಮಾಡಲಾಗಿದೆ. ಡಿಸೆಂಬರ್ 24 ಮತ್ತು 25ರಂದು ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಜೇನು ಹಬ್ಬ ನಡೆಯಲಿದೆ.
ಜೇನು ಕೃಷಿಕರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸಹಕಾರ ಸಂಘಗಳು ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆಯ ಸಂಸ್ಥೆಯನ್ನು ಒಂದೇ ವೇದಿಕೆಗೆ ಕರೆತಂದು ಕೊಡಗಿನ ಜೇನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಹಬ್ಬ ಆಯೋಜನೆ ಮಾಡಲಾಗಿದೆ.
"ರಾಜಸೀಟ್ ಉದ್ಯಾನವನದಲ್ಲಿ ಜೇನು ಹಬ್ಬ-2022 ನಡೆಯಲಿದ್ದು, ಜಿಲ್ಲೆಯ ಜೇನು ಕೃಷಿಕರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳುಬೇಕು" ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಕರೆ ನೀಡಿದ್ದಾರೆ.

ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಈ ಹಬ್ಬ ಆಯೋಜನೆ ಮಾಡಲಾಗಿದೆ. ವರ್ಷಾಂತ್ಯ, ಕ್ರಿಸ್‌ಮಸ್ ರಜೆ ಪ್ರಯುಕ್ತ ಜಿಲ್ಲೆಗೆ ಡಿಸೆಂಬರ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದಾರೆ. ಅವರಿಗೂ ಸಹ ಸಹಾಯಕವಾಗುವಂತೆ ಜೇನು ಹಬ್ಬದ ದಿನಾಂಕ ನಿಗದಿ ಮಾಡಲಾಗಿದೆ.
ಕೊಡಗಿನ ಜೇನು ವೈಶಿಷ್ಟ್ಯ; ಕೊಡಗಿನ ಜೇನು ತುಪ್ಪ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಇಲ್ಲಿನ ಜೇನಿಗೆ ದೇಶ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕೊಡಗಿನಲ್ಲಿ ಜೇನು ಕೃಷಿ ಯನ್ನು ಉತ್ತೇಜನಗೊಳಿಸಲು, ಜೇನು ಬೆಳೆಗಾರರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸೊಸೈಟಿ ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆ ಕಂಪನಿಯನ್ನು ಒಂದೇ ವೇದಿಕೆಗೆ ತಂದು ಕೊಡಗಿನ ಜೇನನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಜೇನು ಹಬ್ಬ ಆಯೋಜಿಸಲಾಗಿದೆ.
ಈ ಜೇನು ಹಬ್ಬದಲ್ಲಿ ವಿವಿಧ ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ಸಂಘ ಸಂಸ್ಥೆಗಳು, ಜೇನು ತುಪ್ಪ ಉತ್ಪಾದನೆ ಮಾಡುವ ರೈತ ಉತ್ಪಾದನಾ ಕಂಪನಿಗಳು, ಜೇನು ಪೆಟ್ಟಿಗೆ, ಜೇನು ಮೇಣ, ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಕಂಪನಿಗಳು ಪಾಲ್ಗೊಳ್ಳಲಿವೆ.

ಸ್ಥಳೀಯ ಸಂಶೋಧನ ಕೇಂದ್ರದ ವಿಜ್ಞಾನಿಗಳು, ಅರಣ್ಯ ಕಾಲೇಜಿನ ಜೇನು ವಿಭಾಗದ ವಿಜ್ಞಾನಿಗಳು ಹಾಗೂ ಇಲಾಖೆಯ ಜೇನು ಕೃಷಿ ಅಧಿಕಾರಿಗಳಿಂದ ಜೇನು ಸಾಕಾಣಿಕೆ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ಪ್ರದರ್ಶನ ನೀಡಲಾಗುತ್ತದೆ. ವಸ್ತು ಪ್ರದರ್ಶನ ಮಳಿಗೆಗಳನ್ನು ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ಸಂಘ ಸಂಸ್ಥೆಗಳು, ರೈತ ಉತ್ಪಾದನಾ ಕಂಪನಿಗಳು, ಜೇನು ಪೆಟ್ಟಿಗೆ, ಜೇನು ಮೇಣ, ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಮೂಲ ಕಂಪನಿಗಳಿಗೆ ಮಾತ್ರ ನೀಡಲಾಗುತ್ತದೆ.
ಮಡಿಕೇರಿ ರಾಜಸೀಟ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ವಿಶೇಷ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಜನರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಮಾತನಾಡಿ, "ಇದುವರೆಗೆ 20 ವಿವಿಧ ಜೇನು ಉತ್ಪನ್ನ ಸಹಕಾರ ಸಂಸ್ಥೆಗಳು ಜೇನು ಹಬ್ಬ-2022ರಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದ್ದು, ಪುತ್ತೂರು, ಸುಳ್ಯ ಭಾಗದಿಂದಲೂ ಜೇನು ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಅವಕಾಶ ಕಲ್ಪಿಸುವಂತೆ ಅರ್ಜಿ ಸಲ್ಲಿಕೆಯಾಗಿದ್ದು, ಎಲ್ಲರಿಗೂ ಅವಕಾಶ ನೀಡಲಾಗುವುದು" ಎಂದರು.
ಜೇನು ಕೃಷಿಯತ್ತ ಒಲವು; ಕೊಡಗು ಜಿಲ್ಲೆಯಲ್ಲಿ ಹಿಂದೆ ಜೇನು ಕೃಷಿಯು ಒಂದು ಪ್ರಮುಖ ಉಪ ಕಸುಬು ಆಗಿ ಹೆಚ್ಚು ಪ್ರಸಿದ್ಧಿ ಹೊಂದಿ, ರೈತರ ಜೀವನೋಪಾಯದ ಮುಖ್ಯ ಆಧಾರವಾಗಿತ್ತು. ಆದರೆ ನಂತರದಲ್ಲಿ ಥಾಯ್ಯಶಾಕ್ ಬ್ರೂಡ್ ಎಂಬ ವೈರಸ್ ರೋಗದಿಂದ ಕೊಡಗಿನಲ್ಲಿ ಜೇನು ಕೃಷಿಯು ಅವನತಿಯ ಹಾದಿ ತಲುಪಿತ್ತು. ಆದರೆ ಕಳೆದ 10-12 ವರ್ಷಗಳಲ್ಲಿ ಕೊಡಗಿನಲ್ಲಿ ಜೇನು ಕೃಷಿಯು ಪುನಶ್ಚೇತನಗೊಂಡಿದೆ. ರೈತರು ಸಹ ಜೇನು ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ.
ಕೊಡಗಿನ ಜೇನು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬರುವ ವಿವಿಧ ಜಾತಿಯ ಮರ, ಗಿಡ, ಬಳ್ಳಿಗಳ ಪುಷ್ಪಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ, ಜೇನು ತುಪ್ಪದ ಉತ್ಪಾದನೆ ಮಾಡುವುದರಿದ ಕೊಡಗಿನ ಜೇನು ಹೆಚ್ಚು ಶ್ರೇಷ್ಠವಾಗಿದ್ದು, ಔಷಧಿಯ ಗುಣ ಹೊಂದಿದೆ. ಜೇನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ.
ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ 12,897 ಸಂಖ್ಯೆಯ ಜೇನು ಕೃಷಿಕರಿದ್ದು, ಜೇನು ಪೆಟ್ಟಿಗೆಯು 60,500 ಕ್ಕೂ ಹೆಚ್ಚು ಇದ್ದು, ವಾರ್ಷಿಕ 499.47 ಟನ್ ಜೇನು ಉತ್ಪಾದನೆ ಆಗುತ್ತಿದೆ. ಆದ್ದರಿಂದ ಕೊಡಗಿನಲ್ಲಿ ಜೇನು ಕೃಷಿಯನ್ನು ಉತ್ತೇಜನಗೊಳಿಸಲು ಜೇನು ಹಬ್ಬ-2022 ಆಯೋಜನೆ ಮಾಡಲಾಗಿದೆ.












Click it and Unblock the Notifications