ಮಳೆಯಿಲ್ಲದೆ ಬರಡಾಗಿದ್ದ ಮಂಡ್ಯದ ನದಿಗಳಿಗೆ ಜೀವಕಳೆ
ಮಂಡ್ಯ, ಅಕ್ಟೋಬರ್ 16: ಸಕ್ಕರೆ ನಾಡು ಮಂಡ್ಯದಲ್ಲಿ ಕೆಲವು ವರ್ಷಗಳ ಬಳಿಕ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿದೆ. ಅಷ್ಟೇ ಅಲ್ಲ ಇಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ನದಿಗಳಲ್ಲೂ ನೀರು ಹರಿಯುತ್ತಿದೆ. ಇದು ರೈತಾಪಿ ವರ್ಗದಲ್ಲಿ ಹರ್ಷದ ಹೊನಲನ್ನು ತರಿಸಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಸಾಮಾನ್ಯವಾಗಿ ಮುಂಗಾರಿನಲ್ಲಿ ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿತ್ತು. ಆಗ ಇಲ್ಲಿರುವ ಕಾವೇರಿಯ ಕೆಲವು ಉಪನದಿಗಳು ತುಂಬಿ ಹರಿಯುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ಭೀಕರ ಬರ ಕಾಣಿಸಿದ್ದರಿಂದ ನದಿಗಳು, ಕೆರೆಗಳು ನೀರಿಲ್ಲದೆ ಬತ್ತಿ ಹೋಗಿದ್ದವು.
ಕೆರೆಗಳನ್ನು ತುಂಬಿಸೋಣ ಎಂದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಿಲ್ಲದೆ ಕೆಆರ್‍ಎಸ್ ಜಲಾಶಯವೇ ಭರ್ತಿಯಾಗದ ಸ್ಥಿತಿ ತಲೆದೋರಿತ್ತು. ಇತ್ತೀಚೆಗೆ ಕೆಆರ್‍ಎಸ್ ಜಲಾಶಯಕ್ಕೆ ಮುಂಗಾರಿನಲ್ಲೂ ನೀರು ಹರಿದು ಬಾರದ ಸ್ಥಿತಿ ನಿರ್ಮಾಣವಾಗಿದೆ.
ನಾಲ್ಕೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕೊಡಗಿನಲ್ಲಿ ಭಾರೀ ಮಳೆಯಾಗಿ ಕಾವೇರಿ ನದಿ ಉಕ್ಕಿ ಹರಿದಾಗ ಕೆಆರ್‍ಎಸ್ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಬಿಡುತ್ತಿದ್ದರಿಂದ ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ವೇಳೆ ಕೆರೆಕಟ್ಟೆಗಳು ತುಂಬಿ ಕಾಲುವೆ, ನದಿಗಳಲ್ಲಿ ನೀರು ಹರಿಯಲು ಅವಕಾಶವಾಗುತ್ತಿತ್ತು.
ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ತಲೆಕೆಳಗಾಗಿದ್ದು, ಕಾವೇರಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರೂ ಹರಿದು ಬರುತ್ತಿಲ್ಲ. ಇದರಿಂದ ಜಲಾಶಯವೂ ಭರ್ತಿಯಾಗುತ್ತಿಲ್ಲ. ಇದರ ಪರಿಣಾಮ ಕಾವೇರಿ ನದಿಯ ಉಪ ನದಿಗಳು ಕೂಡ ಬರಡಾಗಿದ್ದವು.

ನದಿಗಳ ಜೀವ ತುಂಬಿದ ಹಿಂಗಾರು ಮಳೆ
ಇದೀಗ ಈ ಬಾರಿಯ ಹಿಂಗಾರು ಮಳೆ ಮತ್ತೆ ಇಲ್ಲಿನ ನದಿಗಳಿಗೆ ಜೀವಕಳೆ ನೀಡಿದೆ. ಬತ್ತಿ ಹೋಗಿದ್ದ ನದಿಗಳಲ್ಲಿ ನೀರು ಕಾಣಿಸತೊಡಗಿದೆ. ಜಿಲ್ಲೆಯ ಪ್ರಮುಖ ನದಿ ಶಿಂಷೆಯಲ್ಲಿ ನಾಲ್ಕೈದು ಅಡಿಯಷ್ಟು ನೀರು ನಿರಂತರ ಹರಿಯುತ್ತಿದೆ.
ಇನ್ನು ಕೆಲವು ವರ್ಷಗಳಿಂದ ನೀರೇ ಕಾಣದ ವೀರವೈಷ್ಣವಿ ಮತ್ತು ಲೋಕಪಾವನಿ ನದಿಗಳಿಗೂ ಜೀವ ಕಳೆ ಬಂದಂತಾಗಿದೆ. ಜಿಲ್ಲೆಗೆ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆಯ ಕಣ್ವ, ಅರ್ಕಾವತಿ ನದಿಗಳಲ್ಲೂ ನೀರು ಹರಿಯುತ್ತಿದೆ.

ಪ್ರಮುಖ ನದಿಗಳಲ್ಲಿ ಹರಿಯುತ್ತಿದೆ ಜೀವಜಲ
ಜಿಲ್ಲೆಯ ರೈತರಿಗೆ ನೀರುಣಿಸುವ ಶಿಂಷಾನದಿ ತುಮಕೂರಿನ ದೇವರಾಯ ದುರ್ಗದಲ್ಲಿ ಹುಟ್ಟಿ ಶಿಂಷಾ ಕೌಡ್ಲೆ ಮೂಲಕ ಮಂಡ್ಯ ಪ್ರವೇಶಿಸಿ ನಾಗಮಂಗಲ, ಮದ್ದೂರು ಮತ್ತು ಮಳವಳ್ಳಿ ಮೂಲಕ ಶಿವನಸಮುದ್ರ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಇಲ್ಲಿನ ಮತ್ತೊಂದು ನದಿ ಲೋಕಪಾವನಿಯು ಶ್ರೀರಂಗಪಟ್ಟಣದ ಹೊನಕೆರೆಯ ಬಳಿ ಹುಟ್ಟಿ ಕರೀಘಟ್ಟ ಮೂಲಕ ಹರಿದು ಶ್ರೀರಂಗಪಟ್ಟಣದಲ್ಲಿ ಕಾವೇರಿಯನ್ನು ಸೇರುತ್ತದೆ.

ವೀರವೈಷ್ಣವಿ ನದಿಯಲ್ಲಿ ನೀರು
ತುಮಕೂರು ಜಿಲ್ಲೆ ಕುಣಿಗಲ್ ಸಮೀಪದ ಮಾರ್ಕೋನಹಳ್ಳಿ ಜಲಾಶಯದ ಹೆಚ್ಚುವರಿ ನೀರು ಮತ್ತು ಬೆಳ್ಳೂರು, ನೆಲ್ಲಿಗೆರೆ, ನಾಗಮಂಗಲ ಸುತ್ತಲ ಮಳೆಯಾಶ್ರಿತ ನೀರು ಸೇರಿ ಸೃಷ್ಠಿಯಾಗಿರುವ ವೀರವೈಷ್ಣವಿ ನದಿ ನೆಲ್ಲಿಗೆರೆ ಮೂಲಕ ಮಂಡ್ಯ ಪ್ರವೇಶಿಸಿ ಶಿಂಷಾ ನದಿಯನ್ನು ಸೇರುತ್ತದೆ. ಈ ನದಿ ಕೂಡ ಜಿಲ್ಲೆಯ ಜನರಿಗೆ ನೀರು ಒದಗಿಸುತ್ತಾ ಬಂದಿದೆ. ಆದರೆ ಬರಕ್ಕೆ ತತ್ತರಿಸಿ ನದಿಯಲ್ಲಿ ನೀರು ಹರಿಯದ ಪರಿಸ್ಥಿತಿ ಈ ಹಿಂದೆ ನಿರ್ಮಾಣವಾಗಿತ್ತು.

ರೈತರಿಗೆ ಸಂತಸ ತಂದ ಮಳೆ
ಈ ಹಿಂದೆ ಉತ್ತಮವಾಗಿ ಮಳೆಯಾಗುತ್ತಿದ್ದರಿಂದ ನದಿಯಲ್ಲಿ ನೀರು ಹರಿಯುತ್ತಿತ್ತು. ಆದರೆ ಇತ್ತೀಚೆಗೆ ಮರಳುಗಣಿಗಾರಿಕೆ, ಮಳೆಯ ಕೊರತೆ ಹೀಗೆ ಹಲವು ಕಾರಣಗಳಿಂದಾಗಿ ನದಿ ಬತ್ತಿ ಹೋಗಿದ್ದವು.
ಆದರೆ, ಕೊನೆಗೂ ವರುಣನ ದಯೆಯಿಂದಾಗಿ ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ನದಿಗಳಲ್ಲಿ ನೀರು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ರೈತನ ಮೊಗದಲ್ಲಿ ಸಂತಸ ಮೂಡುವಂತಾಗಿದೆ.












Click it and Unblock the Notifications