ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

INTERVIEW: ಕಾನೂನು ತಿದ್ದುಪಡಿಗಳ ಮೂಲಕ ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ!

|
Google Oneindia Kannada News

ಬೆಂಗಳೂರು, ಮೇ 18: ಉರಿವ ಮನೆಯಲ್ಲಿ ಗಳ ಹಿರಿಯುವುದು ಆಂದ್ರೆ ಇದೇ ಇರಬೇಕು. ಲಾಕ್‌ಡೌನ್‌ನಿಂದ ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳದಂತೆ, ರೈತರ ಪರವಾಗಿದ್ದ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಮಾತನಾಡಲು ಧಮ್ ಇಲ್ಲದ ಬಿಜೆಪಿ ಮುಖ್ಯಮಂತ್ರಿಗಳು, ಸಂಸದರು, ನಾಯಕರು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದೇ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗುವುದಿಲ್ಲ ಅನ್ನೋದು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಿ ಮಾತನಾಡುವ ತಾಕತ್ತು ಯಡಿಯೂರಪ್ಪ ಅವರಿಗೂ ಇಲ್ಲ. ಹೀಗಾಗಿ ಅವರೂ ಕೂಡ ರೈತ ವಿರೊಧಿ ಕಾನೂನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಅವರಿಗೆ ಬೇರೆ ಮಾರ್ಗವೇ ಇಲ್ಲ ಎಂದಿದ್ದಾರೆ ಕೋಡಿಹಳ್ಳಿ.

ಮುಂಗಾರು ಹಂಗಾಮಿಗೆ ಸಿದ್ಧತೆ; ರೈತರಿಗೆ ಸಲಹೆಗಳು ಮುಂಗಾರು ಹಂಗಾಮಿಗೆ ಸಿದ್ಧತೆ; ರೈತರಿಗೆ ಸಲಹೆಗಳು

ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಮಾದರಿ ಕಾಯ್ದೆ ಜಾರಿಗೆ ತರುವುದರೊಂದಿಗೆ ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಿದ್ದಾರೆ ಎಂದು ಒನ್‌ಇಂಡಿಯಾ ಜೊತೆಗಿನ exclusive ಸಂದರ್ಶನದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಅಷ್ಟೇ!

ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಅಷ್ಟೇ!

ಒನ್‌ಇಂಡಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಸಂಕಷ್ಟದಲ್ಲಿ ಆತ್ಮ್‌ನಿರ್ಭರ್‌ಭಾರತ ಎಂದು ಸ್ಥಳೀಕರಣ, ಸ್ವದೇಶಿ ಆಧ್ಯತೆ ಬಗ್ಗೆ ಮಾತನಾಡುತ್ತಿದ್ದಾರೆ. ನೀವ್ಯಾಕೆ ಕಾರ್ಪೊರೇಟ್ ಕಂಪನಿಗಳಿಗೆ ಅನಕೂಲ ಮಾಡಿಕೊಡಲು ಎಪಿಎಂಸಿ ಕಾನೂನಿಗೆ ತಿದ್ದುಪಡಿ ತಂದಿದ್ದಾರೆ ಎಂದು ವಿರೋಧ ಮಾಡ್ತಿರೋದು?

ಕೋಡಿಹಳ್ಳಿ ಚಂದ್ರಶೇಖರ್: ಪ್ರಧಾನಿ ನರೇಂದ್ರ ಮೋದಿ ಒಬ್ಬ ಶುದ್ಧ ರೈತ ವಿರೋಧಿ ಮನುಷ್ಯ. ಮೋದಿಗೆ ಗ್ರಾಮೀಣ ಭಾರತದ ಬಗ್ಗೆ ಒಂದಿಷ್ಟು ಕಳಕಳಿಯೂ ಇಲ್ಲ, ಬದ್ಧತೆಯೂ ಇಲ್ಲ. ಯಾಕೆ ಅಂದರೆ ಅವರು ಇದೆಲ್ಲವನ್ನೂ ಮಾಡುತ್ತಿರುವುದೇ ಎಂಎನ್‌ಸಿಗಳನ್ನು ಬರಮಾಡಿಕೊಳ್ಳುವುದಕ್ಕೆ. ಇಲ್ಲಿ ಏನಿದೆ ಸ್ವದೇಶಿ? ಬದನೆಕಾಯಿ. ಎಂಎನ್‌ಸಿಗಳಿಗೆ ಅವಕಾಶ ಮಾಡಿಕೊಡುವುದಕ್ಕಾಗಿಯೇ ಕಾನೂನು ತಿದ್ದುಪಡಿ ಮಾಡುವಾಗ, ಸ್ವದೇಶಿ ಮಾತನಾಡುತ್ತಾರೆ ಇವರು. ಎಲ್ಲಾ ಚೈನಾದಿಂದ ಬನ್ನಿ, ಅಮೆರಿಕದಿಂದ ಬನ್ನಿ, ಇಲ್ಲಿ ನಿಮ್ಮನ್ನು ಉದ್ಧಾರ ಮಾಡೋದಕ್ಕೆ ಭೂಮಿ ಕೊಡ್ತೇವೆ, ನೀರು ಕೊಡ್ತೇವೆ, ವಿದ್ಯುತ್ ಕೊಡ್ತೇವೆ ಅನ್ನೋರು ಇವ್ರು ಸ್ವದೇಶಿನಾ? ಇವ್ರು ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಅಷ್ಟೇ!

ಮೋದಿ ತಪ್ಮಾಡ್ತಿದ್ದೀರಿ ಎಂದು ಹೇಳೊದಕ್ಕೆ ಧಮ್ ಇದೆಯಾ?

ಮೋದಿ ತಪ್ಮಾಡ್ತಿದ್ದೀರಿ ಎಂದು ಹೇಳೊದಕ್ಕೆ ಧಮ್ ಇದೆಯಾ?

ಒನ್‌ಇಂಡಿಯಾ: ಯಡಿಯೂರಪ್ಪ ರೈತ ಪರವಾಗಿ ಹೋರಾಟ ಮಾಡಿಕೊಂಡು ಬಂದವನು, ಯಡಿಯೂರಪ್ಪನಿಂದ ರೈತರಿಗೆ ಮೋಸ ಆಗೋದಕ್ಕೆ ಸಾಧ್ಯವೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ನಿಮಗೆ ಸಿಎಂ ಮೇಲೆ ನಂಬಿಕೆ ಇಲ್ವಾ?

ಕೋಡಿಹಳ್ಳಿ ಚಂದ್ರಶೇಖರ್: ಆಯ್ತು, ನಂಬೋಣ! ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಪ್ರಶ್ನೆ ಕೇಳ್ತಿನಿ. ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಅಥವಾ ಬಿಜೆಪಿ ಎಂಪಿಗಳು, ಬಿಜೆಪಿ ನಾಯಕರು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರೆ ನೀವು ತಪ್ಪು ಮಾಡುತ್ತಿದ್ದೀರಿ ಅಂತಾ ಹೇಳೊದಕ್ಕೆ ಧಮ್ ಇರೊರು ಇವತ್ತು ಬಿಜೆಪಿಯಲ್ಲಿ ಯಾರಿದ್ದಾರೆ ಹೇಳಿ, ಯಡಿಯೂರಪ್ಪ ಅವರೇ?. ನಮ್ಮ ಸಿಎಂ ಸೇರಿದಂತೆ ಅವರ ಪಕ್ಷದ ಯಾರಿಗೂ ಭಾರತ ಸರ್ಕಾರಕ್ಕೆ ಬುದ್ದಿ ಹೇಳೋದಕ್ಕೆ ತಾಕತ್ತಿಲ್ಲ. ಮೋದಿ ಸಮರ್ಥನೆ ಮಾಡಿಕೊಂಡು ನಾವಿದ್ದೀವಿ, ರೈತರ ಹಿತಾಸಕ್ತಿಯನ್ನು ಬಿಟ್ಟುಕೊಟ್ಟು ಬಿಡ್ತೇವಾ ಅಂತಾ ಮಾತಾಡೋದಕ್ಕೆ ಅವರು ಸೀಮಿತಾ ಅಷ್ಟೇ.

ರೈತರಿಗೆ ಮೋಸಾ ಆಗೋದಕ್ಕೆ ಬಿಡೊದಿಲ್ಲ ಅಂತಾ ಯಡಿಯೂರಪ್ಪ ಹೇಳುವುದಾದರೆ, ಸುಗ್ರೀವಾಜ್ಞೆ ತಂದು ರೈತಪರವಿದ್ದ ಕಾನೂನನ್ನು ಯಾಕೆ ತಿದ್ದುಪಡಿ ಮಾಡಿದ್ರು? ರೈತರ ಸಂಸ್ಥೆಯ ಕಾನೂನನ್ನು ಯಾಕೆ ತಿದ್ದುಪಡಿ ಮಾಡಿದ್ರು? ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಎಪಿಎಂಸಿ ಕಾನೂನನ್ನು ಮತ್ತಷ್ಟು ಬಲಪಡಿಸಬೇಕಿತ್ತು. ಅದನ್ನು ಬಿಟ್ಟು ಯಾಕೆ ಸುಗ್ರೀವಾಜ್ಞೆ ಮೂಲಕ ಕಾನೂನಿಗೆ ತಿದ್ದುಪಡಿ ಮಾಡಿದರು? ಯಡಿಯೂರಪ್ಪರಿಗೆ ಕೂಡ ಮೋದಿ ಎದುರು ಮಾತನಾಡಲು ಆಗದೇ, ಈಗ ತಿದ್ದುಪಡಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಲಾಕ್ ಡೌನ್ ಸಂಕಷ್ಟದಲ್ಲಿ ಮೆಕ್ಕೆಜೋಳ ಬೆಳೆಗಾರರುಲಾಕ್ ಡೌನ್ ಸಂಕಷ್ಟದಲ್ಲಿ ಮೆಕ್ಕೆಜೋಳ ಬೆಳೆಗಾರರು

ಓಪನ್ ಮಾರ್ಕೆಟ್ ಆದರೆ ರೈತರಿಗೆ ಒಳ್ಳೆಯದು ಅಲ್ಲವಾ?

ಓಪನ್ ಮಾರ್ಕೆಟ್ ಆದರೆ ರೈತರಿಗೆ ಒಳ್ಳೆಯದು ಅಲ್ಲವಾ?

ಒನ್‌ಒಂಡಿಯಾ: ಓಪನ್ ಮಾರ್ಕೆಟ್ ಆದ್ರೆ ರೈತರಿಗೆ ಒಳ್ಳೆಯದು ಅಲ್ಲವಾ? ರೈತರಿಗೆ ಉತ್ತಮ ಬೆಲೆ ಸಿಗುತ್ತದೆ, ಇದರಿಂದ ರೈತರಿಗೆ ಯಾವುದೆ ತೊಂದರೆ ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ.


ಕೋಡಿಹಳ್ಳಿ ಚಂದ್ರಶೇಖರ್: ಕಾನೂನುನ್ನು ತಿದ್ದುಪಡಿ ಮಾಡಿರುವುದೇ ಕಾರ್ಪೊರೇಟ್ ಕಂಪನಿಗಳಿಗಾಗಿ. ಹೀಗಿದ್ದಾಗ ರೈತರಿಗೆಲ್ಲಿ ಲಾಭವಾಗುತ್ತದೆ? ಈಗ ಎಪಿಎಂಸಿಗಳಲ್ಲಿ ಲೈಸನ್ಸ್ ಹೊಂದಿರುವ ವ್ಯಾಪಾರಸ್ಥರು, ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಕಾನೂನು ಪಾಲನೆ ಮಾಡಬೇಕು. ಆದರೆ ಕಾರ್ಪೊರೇಟ್ ಕಂಪನಿಗಳು ಎಪಿಎಂಸಿ ಹೊರಗೆ ರೈತರ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಎಪಿಎಂಸಿಗಳಲ್ಲಿ ವ್ಯವಹಾರ ಶೂನ್ಯವಾಗುತ್ತದೆ. ಆ ಮೂಲಕ ಇಡೀ ಕೃಷಿ ಮಾರುಕಟ್ಟೆ ವ್ಯವಸ್ಥೆ ಸಂಪೂರ್ಣ ನಾಶವಾಗಲಿದೆ.

ಮೊದಲಿಗೆ ಎಪಿಎಂಸಿಯನ್ನು ಬಿಟ್ಟು ಹೊರಗಡೆ ಖರೀದಿ ಮಾಡಲಿಕ್ಕೆ ಅವಕಾಶ ಇರಲಿಲ್ಲ, ಈಗ ಕೊಟ್ಟಾಯ್ತು. ಎಪಿಎಂಸಿ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡಿ ಖರೀದಿ ಮಾಡಬೇಕಿತ್ತು. ಹಾಗಾದಾಗ ಮಾತ್ರ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಅವಕಾಶವಿರುತ್ತದೆ. ಈಗ ಮಾಯಕಟ್ಟೆಯಲ್ಲಿ ರೈತರ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿ ಮಾಡುವುದಿಲ್ಲ.

ಹಂತ ಹಂತವಾಗಿ ಸ್ಥಳೀಯ ವ್ಯಪಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಕಣ್ಮರೆ ಆಗ್ತಾರೆ. ಆಗ ಉಳಿಯೋದು ಈ ಬಹುರಾಷ್ಟ್ರೀಯ ಕಂಪನಿಗಳು ಮಾತ್ರ. ಸ್ಥಳೀಯ ವ್ಯಾಪಾರಿಗಳು ಸ್ಪರ್ಧಾತ್ಮಕ ದರದಲ್ಲಿ ರೈತರ ಉತ್ಪನ್ನಗಳನ್ನು ಈಗ ಖರೀದಿ ಮಾಡುತ್ತಿದ್ದಾರೆ. ಮುದಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನಿಗದಿ ಮಾಡಿದ ಬೆಲೆಗೆ ರೈತ ತನ್ನ ಉತ್ಪನ್ನವನ್ನು ಮಾರಾಟ ಮಾಡಬೇಕಾಗುತ್ತದೆ. ಮಾರುಕಟ್ಟೆ ಏಕಸ್ವಾಮ್ಯ ದಿಂದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತದೆ. ಇದನ್ನ ನಾವು ವಿರೋಧಿಸುತ್ತಿರುವುದು.

ರೈತರ ಪರ ನಿಲ್ಲುತ್ತೇನೆ ಎಂದಿದ್ದರು ಡಿಸಿಎಂ ಸವದಿ

ರೈತರ ಪರ ನಿಲ್ಲುತ್ತೇನೆ ಎಂದಿದ್ದರು ಡಿಸಿಎಂ ಸವದಿ

ಒನ್‌ಇಂಡಿಯಾ: ಈ ಎಲ್ಲ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೀರಾ? ಸರ್ಕಾರ ನಿಮಗೆ ಏನೆಂದು ಭರವಸೆ ಕೊಟ್ಟಿದೆ?

ಕೋಡಿಹಳ್ಳಿ ಚಂದ್ರಶೇಖರ್: ನಾವು ಈ ಹಿಂದೆ ಮಾದರಿ ಕಾನೂನು ಪ್ರಸ್ತಾವನೆಗೆ ಬಂದಾಗಲೇ ಇದನ್ನು ವಿರೋಧಿಸಿದ್ದೇವೆ. ಕಾನೂನು ಸಚಿವ ಮಾಧುಸ್ವಾಮಿ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಅವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೊಟ್ಟಿದ್ದೇವೆ. ಕಂದಾಯ ಸಚಿವ ಆರ್. ಅಶೋಕ್ ಅವರೊಂದಿಗೆ ಚರ್ಚೆ ಮಾಡಿ, ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿಪತ್ರ ಕೊಟ್ಟಿದ್ದೇವೆ.

ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೂ ಮಾತನಾಡಿದ್ದೇವೆ. ನಾನು ರೈತರ ಪರ ನಿಲ್ಲುತ್ತೇನೆ. ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರ ನಿಂತರೆ ನಾನು ಒಪ್ಪುವುದಿಲ್ಲ ಎಂದಿದ್ದರು. ನಿಮ್ಮ ಪರವಾಗಿ ಇದ್ದೇವೆ ಅಂತಾ ಬಹಳಷ್ಟು ಮಂತ್ರಿಗಳು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎದುರು ನಿಲ್ಲುವುದಕ್ಕೆ ಅವರಿಗೆ ಆಗುತ್ತದೆಯಾ? ಇಲ್ಲ. ಅದಕ್ಕೆ ಈಗ ಎಲ್ಲರೂ 'ಇದು ಮಾದರಿ ಕಾನೂನು' ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಮೈಷುಗರ್ ಕಾರ್ಖಾನೆಯ ಗೊಂದಲಕ್ಕೆ ತೆರೆ ಬೀಳುತ್ತಾ?ಮೈಷುಗರ್ ಕಾರ್ಖಾನೆಯ ಗೊಂದಲಕ್ಕೆ ತೆರೆ ಬೀಳುತ್ತಾ?

ಎಚ್ಚರಿಕೆ ಕೊಟ್ಟಿದ್ದರು ಪ್ರೊ. ಪ್ರೊ. ನಂಜುಂಡಸ್ವಾಮಿ

ಎಚ್ಚರಿಕೆ ಕೊಟ್ಟಿದ್ದರು ಪ್ರೊ. ಪ್ರೊ. ನಂಜುಂಡಸ್ವಾಮಿ

ಒನ್‌ಇಂಡಿಯಾ: ಈಗ ಎಪಿಎಂಸಿ ಕಾನೂನಿಗೆ ತಿದ್ದುಪಡಿ ತರುವಂತಹ ಘಟನೆ ಹಿಂದೆ ಏನಾದ್ರು ನಡೆದಿತ್ತಾ? ಸರ್ಕಾರ ಯಾಕೆ ತರಾತುರಿಯಲ್ಲಿ ರೈತ ಪರ ಕಾನೂನಿನ ತಿದ್ದುಪಡಿಗೆ ಮುಂದಾಯ್ತು?

ಕೋಡಿಹಳ್ಳಿ ಚಂದ್ರಶೇಖರ್: ಹಿಂದೆ ಪ್ರೊ. ನಂಜುಂಡಸ್ವಾಮಿ ಅವರು ಇದ್ದಾಗ ನಡೆದಿದ್ದ ಘಟನೆಯೊಂದನ್ನು ನಿಮಗೆ ಘಟನೆ ಹೇಳುತ್ತೇನೆ. ಅದು 2004ನೇ ಇಶ್ವಿ. ಯಶವಂತಪುರ ಎಪಿಎಂಸಿಗೆ ಪಕ್ಕದಲ್ಲಿಯೆ ಇರುವ ಮೆಟ್ರೊ ಸಂಸ್ಥೆಯವರು ಎಪಿಎಂಸಿಯಲ್ಲಿ ತೋಗರಿ ಬೇಳೆಯನ್ನು ಖರೀದಿ ಅಲ್ಲಿಯೆ 60 ರೂಪಾಯಿ ವ್ಯತ್ಯಾಸದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡ್ತಾರೆ. ಮತ್ತೆ 8 ದಿನಗಳನ್ನು ಬಿಟ್ಟು ಅದನ್ನೆ ಪುನರಾವರ್ತನೆ ಮಾಡುತ್ತಾರೆ. ಅದರಿಂದ ಇಡೀ ಮಾರುಕಟ್ಟೆ ಅವರ ಅಡಿಯಾಳಾಗಿರಬೇಕು ಹಾಗೆ ಮಾಡುವುದು ಮೆಟ್ರೊ ಉದ್ದೇಶವಾಗಿತ್ತು.

ಆಗ ಅಲ್ಲಿನ ಪ್ರಮುಖ ವ್ಯಾಪಾರಸ್ಥರು ಪ್ರೊ. ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸುತ್ತಾರೆ. ಪ್ರೊಫೆಸರ್ ಸೂಚನೆಯಂತೆ ಅವತ್ತು ನಾವು ಮೆಟ್ರೊದವರಿಗೆ ಎಚ್ಚರಿಕೆ ಕೊಟ್ಟಿದ್ದೇವು. ಎಪಿಎಂಸಿಯ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ರೆ ಹುಶಾರ್. ಎಪಿಎಂಸಿ ಪ್ರವೇಶ ಮಾಡಲು, ಅಲ್ಲಿ ಖರೀದಿ ಮಾಡಲು ಲೈಸನ್ಸ್ ಹೊಂದಿರಬೇಕು. ಅಲ್ಲಿ ಅಂಗಡಿಯನ್ನು ಹೊಂದಿರಬೇಕು, ಕರಾರುಗಳನ್ನು ಪಾಲಿಸಬೇಕು. ಇದು ನಿಮಗೆ ಬರುವುದಿಲ್ಲ ಎಂದಿದ್ದೇವು. ಜೊತೆಗೆ ಸರ್ಕಾರವನ್ನು ಮುಂದೆ ಇಟ್ಟುಕೊಂಡುಬಂದರೆ, ನಾವು ಕೂಡ ಬೇರೆ ಮಾರ್ಗ ಅನುಸರಿಸಬೇಕಾಗುತ್ತದೆ. ಬೆಂಗಳೂರಿನಲ್ಲಿರುವ ನಿಮ್ಮ ಎಲ್ಲ ಮೆಟ್ರೊಗಳನ್ನು ಒಡೆದು ಹಾಕ್ತೇವೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದೇವು. ಹೀಗಾಗಿ ಅವರೆಲ್ಲರೂ ಪ್ರಯತ್ನ ನಡೆಸಿ ಈಗ ಸರ್ಕಾರದ ಮೂಲಕ ಎಪಿಎಂಸಿ ನಾಶ ಮಾಡಲು ಮುಂದಾಗಿದ್ದಾರೆ.

ಕಾನೂನಿಗೆ ಬದಲಾವಣೆ ತಂದಿದ್ದು ಯಾಕೆಂದರೆ: ಹಿಂದೆ ಮೆಟ್ರೊದವನನ್ನು ನಾವು ಕತ್ತು ಹಿಡಿದು ಹೊರಗೆ ತಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದೇವು. ಎಪಿಎಂಸಿಗಳಿಗೆ ಯಾವುದೇ ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರವೇಶ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಪ್ರವೇಶ ಮಾಡಿಕೊಡಲಿಕ್ಕಾಗಿಯೆ ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ. ಹೊಸ ಕಾನೂನಿನಂತೆ ಎಪಿಎಂಸಿ ಬಿಟ್ಟು ಅವರು ಖಾಸಗಿ ಮಾರುಕಟ್ಟೆಯನ್ನು ಮಾಡಿಕೊಳ್ಳಬಹುದು. ಇದೆಲ್ಲವೂ ಕೂಡ ರೈತರ ಮಾರುಕಟ್ಟೆಯನ್ನು ಮುಗಿಸಲು ಮಾಡಿರುವಂತಹ ಸಂಚು, ಇದು ರೈತ ವಿರೋಧಿಯಾದ ತೀರ್ಮಾನ, ರೈತ ವಿರೋಧಿ ಸರ್ಕಾರಗಳ ಕೆಲಸ ಅಂತಾ ಹೇಳುತ್ತೇನೆ.

ಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣುಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು

2004ರಲ್ಲಿಯೆ ಕಾಯಿದೆ ತಿದ್ದುಪಡಿಗೆ ಪ್ರಯತ್ನ

2004ರಲ್ಲಿಯೆ ಕಾಯಿದೆ ತಿದ್ದುಪಡಿಗೆ ಪ್ರಯತ್ನ

ಒನ್‌ಇಂಡಿಯಾ: ಈ ಹಿಂದೆ ಯಾವಾಗಲಾದರೂ ಎಪಿಎಂಸಿ ಕಾನೂನು ತಿದ್ದುಪಡಿ ಪ್ರಯತ್ನಗಳು ನಡೆದಿದ್ದವಾ? ಅಥವಾ ಇದೇ ಮೊದಲ ಬಾರಿ ತಿದ್ದುಪಡಿ ಮಾಡಲಾಗಿದೆಯಾ?

ಕೋಡಿಹಳ್ಳಿ ಚಂದ್ರಶೇಖರ್: 2004ರಲ್ಲಿಯೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರೋದಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು. ಆಗ ನಾವೆಲ್ಲ ರಾಜ್ಯ ಹಾಗೂ ದೇಶಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಆಗಿನ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಎಪಿಸಿಎಂಸಿ ಕಾನೂನಿಗೆ ತಿದ್ದುಪಡಿ ತರಬೇಡಿ ಅಂತಾ ಒತ್ತಾಯ ಮಾಡಿದ್ದೇವು. ಆ ನಂತರ ಮತ್ತೆ 2017ರಲ್ಲಿ ಎಪಿಎಂಸಿ ಮಾದರಿ ತಿದ್ದುಪಡಿ ಕಾನೂನು ಅಂತಾ ಪ್ರಸ್ತಾವನೆಯನ್ನು ಇಡುತ್ತಾರೆ. ಭಾರತ ಸರ್ಕಾರಕ್ಕೆ ಇದನ್ನು ತರೋದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಕಳಿಸಿ ಸುಗ್ರೀವಾಜ್ಞೆ ಮೂಲಕ ಕಾನೂನಿಗೆ ತಿದ್ದುಪಡಿ ಮಾಡಿದ್ದಾರೆ.

ಬ್ರಿಟಿಷ್‌ ಆಡಳಿತಕ್ಕಿಂತ ಕಡೆಯಾಯ್ತು ಕೇಂದ್ರದ ನಡೆ

ಬ್ರಿಟಿಷ್‌ ಆಡಳಿತಕ್ಕಿಂತ ಕಡೆಯಾಯ್ತು ಕೇಂದ್ರದ ನಡೆ

ಒನ್‌ಇಂಡಿಯಾ: ಎಪಿಎಂಸಿ ಕಾನೂನು ಜಾರಿಗೆ ಬಂದಿದ್ದು ಯಾವಾಗ?

ಕೋಡಿಹಳ್ಳಿ ಚಂದ್ರಶೇಖರ್: ರೈತ ಪರ ಕಾನೂನಿಗೆ ಬ್ರಿಟಿಷರ ಕಾಲದಿಂದಲೂ ಪ್ರಯತ್ನ ನಡೆದಿತ್ತು. 1926ರಲ್ಲಿ ರಾಯಲ್ ಕಮಿಷನ್ ನೇಮಕ ಮಾಡಿದಾಗಲೇ ರೈತರಿಗೆ ಪ್ರತ್ಯೇಕ ಮಾರುಕಟ್ಟೆ ಇರಬೇಕು ಅಂತ ಯೋಚಿಸಿ ಜಾರಿಗೆ ತರಲು ಪ್ರಯತ್ನಿಸಿದ್ದರು. ನಂತರ 1955ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾನೂನು ಜಾರಿಗೆ ತರಲಾಯಿತು. ಕೊನೆಗೆ 1966ರಲ್ಲಿ ಕಾನೂನಾತ್ಮಕ ಮನ್ನಣೆಯನ್ನು ಎಪಿಎಂಸಿಗಳಿಗೆ ಕೊಟ್ಟು ಕೃಷಿ ಉತ್ನನ್ನಗಳ ಮಾರುಕಟ್ಟೆ ಸಮಿತಿ ರಚನೆ ಮಾಡಲಾಯ್ತು. ಕೃಷಿ ಭೂಮಿಯನ್ನು ಹೊಂದಿರುವ ಸದಸ್ಯ ರೈತ ಮಾತ್ರ ಮತದಾನದಿಂದ 11 ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ. ಅವರು ಸಮಿತಿಗೆ ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡುತ್ತಾರೆ. ಸಂಪೂರ್ಣವಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಮಿತಿ ಕೆಲಸ ಮಾಡುತ್ತದೆ. ಹೀಗಾಗಿ ಇಲ್ಲಿ ರೈತನದ್ದೆ ಅಧಿಕಾರ ನಡೆಯುತ್ತಿತ್ತು. ಈಗ ಆಧಿಕಾರವನ್ನು ಕಿತ್ತು ಕೊಟ್ಟಿದ್ದು ಯಾಕೇ?

 Vocal for Local: ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ರೂಪಿಸಿ Vocal for Local: ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ರೂಪಿಸಿ

ರೈತ ಸಂಘ ಹೋರಾಟ ಮುಂದುವರೆಸಲಿದೆ

ರೈತ ಸಂಘ ಹೋರಾಟ ಮುಂದುವರೆಸಲಿದೆ

ಒನ್‌ಇಂಡಿಯಾ: ಮುಂದೆ ರೈತ ಸಂಘದ ನಡೆ ಏನು? ಎಪಿಎಂಸಿ 'ಮಾದರಿ' ಕಾನೂನು ಒಪ್ಪಿಕೊಂಡು ಸುಮ್ಮನಾಗುತ್ತೀರಾ?


ಕೋಡಿಹಳ್ಳಿ ಚಂದ್ರಶೇಖರ್: ಎಪಿಎಂಸಿಗಳನ್ನು ಉಳಿಸಿಕೊಳ್ಳಲು ರೈತ ಸಂಘ ಹೋರಾಟ ಮುಂದುವರೆಸಲಿದೆ. ಎಪಿಎಂಸಿ ನಿಯಮಗಳನ್ನು ದಾಟಿ ಯಾವುದೆ ವ್ಯಾಪಾರಸ್ಥರು ಖರೀದಿ ಮಾಡಬಾರದು ಅಂತಾ ಒತ್ತಡವನ್ನು ತರುತ್ತೇವೆ. ಕಾರ್ಪೊರೇಟ್ ಕಂಪನಿಗಳು ಎಲ್ಲೆಲ್ಲಿ ಖರೀದಿ ಮಾಡುತ್ತಾರೊ? ಅಲ್ಲಿ ಅಡ್ಡಿಪಡಿಸುತ್ತೇವೆ. ಸರ್ಕಾರದಿಂದ ರೈತರ ವಿರೋಧಿ ಧೋರಣೆ ಮುಂದುವರೆಯುತ್ತದೆ. ಮುಂದಿನ ವಾರ ನಾವು ಈ ಕುರಿತು ಸಭೆಯನ್ನು ಕರೆದು ಮುಂದಿನ ಹೋರಾಟದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

English summary
Interview with Kodihalli Chandrashekar, President Karnataka rajya raitha sangha on APMC Law Amendment,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X