ಮೂರೂ ಬಿಟ್ಟವರು ಊರಿಗೆ ದೊಡ್ಡವರು: ಯಾರಿವರು ?

ಸ್ವಾತಂತ್ರ್ಯಾನಂತರ ನಮ್ಮ ರಾಜ್ಯ ದೇಶ ಬಹಳಷ್ಟು ಹೋರಾಟಗಳನ್ನು ಕಂಡಿದೆ. ತಮ್ಮ ಹಕ್ಕಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ನಾಡುನುಡಿಗಾಗಿ ಜೈಲು ಸೇರಿರುವವರು ಒಬ್ಬರೇ ಇಬ್ಬರೇ ? ಆದರೆ ಈ ಹೋರಾಟದ ಮೂಲಕ ಜೈಲುವಾಸ ಅನುಭವಿಸಿದರೆ ಅದರಲ್ಲಿ ಒಂದು ಹಿತಾನುಭವವಿರುತ್ತದೆ.
ಸಾರ್ವಜನಿಕರಿಗೆ ಅನುಕೂಲವಾಗುವ ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಮಾಡಬೇಕೆಂದು ಅಣ್ಣಾ ಹಜಾರೆ ಹೋರಾಟ ನಡೆಸಿ ಜೈಲು ಸೇರಿ ವಾಪಸ್ ಬಂದಾಗ ಅವರ ಹೋರಾಟಕ್ಕೆ ಮತ್ತಷ್ಟು ಭಲ ಸಿಕ್ಕಿತ್ತು ಮತ್ತು ಜನಸಾಮಾನ್ಯರ ದೃಷ್ಟಿಯಲ್ಲಿ ಅವರೊಬ್ಬರು ನಿಷ್ಕಳಂಕ ಹೀರೋ ಆಗಿ ಹೊರ ಹೊಮ್ಮಿದ್ದರು, ಯಾಕೆಂದ್ರೆ ಅವರು ಜೈಲು ಶಿಕ್ಷೆ ಅನುಭವಿಸಿದರ ಹಿಂದಿನ ತತ್ವಕ್ಕಾಗಿ.
ರೈತರು ತಾವು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಪದಾರ್ಥಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಲಿಲ್ಲ ಎಂದು ಹೆದ್ದಾರಿ ತಡೆ ನಡೆಸುತ್ತಾರೆ. ಅದಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಾರೆ. ಯಾಕೆಂದ್ರೆ ಜೈಲು ಶಿಕ್ಷೆಯ ಹಿಂದೆ ದೇಶದ ಬೆನ್ನೆಲುಬಾದ ರೈತರ ವರ್ಷಪೂರ್ತಿ ಪರಿಶ್ರಮವಿರುತ್ತದೆ. ತೆಲಂಗಾಣ ಹೋರಾಟ ನೀವು ಗಮನಿಸಿರ ಬಹದು, ಬಹಳಷ್ಟು ಮಂದಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ, ಆ ಜೈಲು ಶಿಕ್ಷೆ ಅನುಭವಿಸಿದವನು ತನ್ನ ಹೋರಾಟಕ್ಕಾಗಿ ತಾನು ಜೈಲು ಸೇರಿದ್ದೇನೆ ಎನ್ನುವ ಹೆಮ್ಮೆ ಅವನಿಗಿರುತ್ತದೆ.
ಕನ್ನಡ ಪರ ಸಂಘಟನೆಗಳ ನಾಯಕರುಗಳು ಜೈಲು ಸೇರುತ್ತಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಕೆಲವೊಮ್ಮೆ ಅಲ್ಪಸ್ವಲ್ಪ ತೊಂದರೆ ತಂದರೂ ಅವರ ಉದ್ದೇಶ ನಾಡುನುಡಿ ಎನ್ನುವುದು ಸ್ಪಷ್ಟ. ನಮ್ಮ ರಾಜ್ಯದಲ್ಲಿದ್ದು ನಮ್ಮ ರಾಜ್ಯದ ವಿರುದ್ದ ಮೆಸೆಯುವ ಕಿಡಿಗೇಡಿಗಳ ವಿರುದ್ದ ತಿರುಗಿ ಬೀಳುವ ಇಂತಹ ಹೋರಾಟಗಾರರು ಜೈಲು ಸೇರಿದರೆ ಅವರಿಗೆ ತಾಯಿ ಭುವನೇಶ್ವರಿಯ ಸೇವೆ ಸಲ್ಲಿಸಿದಷ್ಟೇ ಹೆಮ್ಮೆ ಇರುತ್ತದೆ. ಒಬ್ಬ ಮರ್ಯಾದಸ್ಥ ಒಂದು ವೇಳೆ ಯಾವುದೇ ಕಾರಣಕ್ಕೆ ಪೋಲೀಸ್ ಮೆಟ್ಟಲು ಏರಿದ್ದ ಪಕ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಯಾಕೆಂದರೆ ಅವರುಗಳು ಮರ್ಯಾದೆಗಾಗಿ ಬದುಕುವವರು.
ಈ ಎಲ್ಲಾ ಮೇಲೆ ತಿಳಿಸಿದ ಜೈಲು ಶಿಕ್ಷೆಯ ಹಿಂದಿನ ಉದಾಹರಣೆಗಳನ್ನು ರಾಜಕಾರಿಣಿಗಳು ಜೈಲು ಶಿಕ್ಷೆ ಅನುಭವಿಸುತ್ತಿರುವುದಕ್ಕೆ ತಾಳೆ ಹಾಕಿ ನೋಡಿದರೆ. ಸಾರ್ವಜನಿಕರ ದುಡ್ಡಿನಲ್ಲಿ ಆಟವಾಡುವ ಇಂತಹ ರಾಜಕಾರಿಣಿಗಳು ಅದೇ ಗತ್ತು ದರ್ಪದಿಂದ ಸಾರ್ವಜನಿಕರ ಮುಂದೆ ಮತ್ತೆ ಪ್ರತ್ಯಕ್ಷರಾಗುತ್ತಾರಲ್ಲಾ? ಹಾಗಾಗಿ ಇವರನ್ನು ಬದುಕಿಗಾಗಿ ಮರ್ಯಾದೆ ಹೋದ್ರೂ ಪರವಾಗಿಲ್ಲ ಎನ್ನುವ ಕೆಟಗರಿಗೆ ಸೇರಿಸಬಹುದು.
ಇಂತಹ ಭ್ರಷ್ಟ ರಾಜಕಾರಿಣಿಗಳು ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಬರುವಾಗ ಅವರಿಗೆ ಸಿಗುವ ಅಭೂತಪೂರ್ವ ಸ್ವಾಗತ ಬಹುಷಃ ದೇಶದ ಗಡಿ ಕಾಯುವ ಯೋಧನಿಗೂ ಸಿಗುವುದಿಲ್ಲವೇನೋ? ಯಾಕಂದರೆ ಇಂತವರ ವಿರೋಧ ಕಟ್ಟಿ ಕೊಂಡರೆ ಜನಸಾಮಾನ್ಯನ ಬದುಕು ದುಸ್ತರ ಅಲ್ವೇ ? ಅದಕ್ಕೆ ಹೇಳೋದು ಮೂರು ಬಿಟ್ಟವರು ಊರಿಗೆ ದೊಡ್ಡವರೆಂದು. ಅಲ್ಲಾ.ಅಲ್ಲಾ. ದೇವರೆಂದು....ಏನಂತೀರಿ..












Click it and Unblock the Notifications