ಭಾರತದಲ್ಲಿ ಮಳೆ ಮೇಲೆ ಎಲ್ ನಿನೊ ಪ್ರಭಾವ ಹೀಗಿದೆ
ನವದೆಹಲಿ, ಏ.30: ಎಲ್ ನಿನೊ ಎಂಬುದು ಒಂದು ಅಸಾಮಾನ್ಯ ಹವಾಮಾನ ವಿದ್ಯಮಾನ. ಅದು ಸಾಮಾನ್ಯವಾಗಿ ಒಂದು ವರ್ಷ ಕಾಲ ಪ್ರಭಾವ ಹೊಂದಿರುತ್ತದೆ. ಎಲ್ ನಿನೊ ಮೊದಲು ಸಮುದ್ರದ ಮೇಲ್ಮೈ ಭಾಗದಲ್ಲಿ ತಾಪಮಾನದ ಮೇಲೆ ಪ್ರಭಾವ ಬೀರುತ್ತದೆ. ಅದರಿಂದ ವಿಪರೀತ ಮಳೆ ಗಾಳಿ ಅಥವಾ ಬಿರುಬಿಸಿಲು ಗಾಳಿ ಎದ್ದು ಪ್ರವಾಹಗಳು ಅಥವಾ ಬರಗಾಲ ಎದುರಾಗುತ್ತದೆ.
Skymet ಎಂಬ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯ ಪ್ರಕಾರ ಭಾರತದ ಮುಂಗಾರು ಹಂಗಾಮದ ಮೇಲೆ ಅಡ್ಡ ಪರಿಣಾಮವನ್ನುಂಟುಮಾಡುತ್ತಾ ಬಂದಿದೆ. ತೀರಾ ಇತ್ತೀಚಿನ 2002 ಮತ್ತು 2009 ಬರಗಾಲಗಳೂ ಸೇರಿದಂತೆ 1871ನೇ ಇಸ್ವಿಯಿಂದ ದೇಶವನ್ನು ಇದುವರೆಗೂ 6 ಭೀಕರ ಬರಗಾಲಗಳು ಕಾಡಿವೆ. ಇದಕ್ಕೆಲ್ಲಾ ಎಲ್ ನಿನೊ ಪ್ರಭಾವ ನಿಚ್ಚಳವಾಗಿದೆ.

ಗಮನಾರ್ಹವೆಂದರೆ ಎಲ್ಲಾ ಎಲ್ ನಿನೊಗಳು ದೇಶಕ್ಕೆ ಬರಗಾಲವನ್ನೇ ನೀಡುತ್ತಾ ಬಂದಿಲ್ಲ. 1997/98ರಲ್ಲಿ ಬಲಾಢ್ಯ ಎಲ್ ನಿನೊ ಕಾಣಿಸಿಕೊಂಡಿತ್ತು. ಆದರೆ ಆಗ ಬರಗಾಲ ಕಾಣಿಸಿಕೊಳ್ಳಲೇ ಇಲ್ಲ. ಆದರೆ 2002ರಲ್ಲಿ ಸಾಧಾರಣ ಎಲ್ ನಿನೊ ಕಾಡಿತ್ತು. ಆಗ ಅತಿ ಕೆಟ್ಟ ಬರಗಾಲ ದೇಶವನ್ನು ಹೈರಾಣಗೊಳಿಸಿತ್ತು.
Skymet ಸಂಸ್ಥೆಯು 1880-2005 ಅವಧಿಯಲ್ಲಿ 126 ವರ್ಷಗಳ ಕಾಲದ ಎಲ್ ನಿನೊ (El Nino) ವಿದ್ಯಮಾನವನ್ನು ದಾಖಲಿಸಿಕೊಂಡು ಅಧ್ಯಯನ ಮಾಡಿದೆ. ಸಾಮಾನ್ಯವಾಗಿ ಎಲ್ ನಿನೊ ಭಾರತದ ಮುಂಗಾರು ಹಂಗಾಮದ ಮೇಲೆ ಪ್ರಭಾವ ಬೀರುತ್ತಿದ್ದು, ಎಲ್ ನಿನೊ ಕಾಣಿಸಿಕೊಂಡಾಗಲೆಲ್ಲಾ ಮಳೆ ಕಡಿಮೆಯಾಗಿದೆ. ಕೃಷಿಯಾಧಾರಿತ ಭಾರತಕ್ಕೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಇನ್ನು ಎಲ್ ನಿನೊಗೆ ವಿರುದ್ಧವಾದ ಹವಾಮಾನ ಪ್ರಕ್ರಿಯೂ ಘಟಿಸುತ್ತದೆ. ಅದು ಲಾ ನಿನಾ (La Nina). ಕಡಿಮೆ ಬಿಸಿಗಾಳಿಯಿಂದ ಸಮುದ್ರದ ನೀರು ಭಾರಿ ಶೀತಮಾರುತಗಳಾಗಿ ಪರಿವರ್ತನೆಯಾಗುತ್ತದೆ. ಈ ವಿದ್ಯಮಾನ ನೈಋತ್ಯ ಅಮೆರಿಕಾದ ಕರಾವಳಿಯಲ್ಲಿ ಉಂಟಾಗುತ್ತದೆ. ಇದರಿಂದ ಮಂದ ಆರ್ದಗಾಳಿಯು ಹಿಂದೂ ಮಹಾಸಾಗರದತ್ತ ಚಲಿಸುತ್ತದೆ. ತತ್ಫಲವಾಗಿ ಸಾಮಾನ್ಯ ಅಥವಾ ವಿಪರೀತ ಮಳೆಯಾಗುತ್ತದೆ.












Click it and Unblock the Notifications