ಹತ್ತಿ ಬೆಳೆಗೆ ವಿವಿಧ ರೋಗಗಳು; ಹತೋಟಿಗೆ ರೈತರಿಗೆ ಸಲಹೆಗಳು
ಬೆಂಗಳೂರು, ಮೇ 22; ಚಿತ್ರದುರ್ಗ ಜಿಲ್ಲೆಯಲ್ಲಿ ಹತ್ತಿ ಬೆಳೆಯಲ್ಲಿ ಸಸ್ಯ ಹೇನುಗಳು ಹಾಗೂ ಕರಿ ಜೀಗಿ ಹುಳುವಿನ ಬಾಧೆ ಕಂಡುಬಂದಿರುತ್ತದೆ. ಈ ಸಂದರ್ಭದಲ್ಲಿ ಈ ರೋಗ ವಿವಿಧ ತಾಲೂಕುಗಳಲ್ಲಿಯೂ ಕಂಡುಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರಿಗೆ ಬೆಳೆಯನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗಿದೆ.
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ದಳವಾಹಿಹಳ್ಳಿ ಗ್ರಾಮಕ್ಕೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ 'ಕೃಷಿ ಸಂಜೀವಿನಿ' ವಾಹನವು ಭೇಟಿ ನೀಡಿ ಹತ್ತಿ ಬೆಳೆ ಪರಿಶೀಲಿಸಿದಾಗ ಸಸ್ಯ ಹೇನುಗಳು ಹಾಗೂ ಕರಿ ಜೀಗಿ ಹುಳುವಿನ ಬಾಧೆ ಇರುವುದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಹತ್ತಿ ಬೆಳೆಯು 30 ರಿಂದ 60 ದಿನಗಳ ಬೆಳವಣಿಗೆಯ ಹಂತದಲ್ಲಿದೆ. ಸಸ್ಯ ಹೇನುಗಳು ಹಾಗೂ ಕರಿ ಜೀಗಿ ಹುಳುವಿನ ಬಾಧೆ ಚಿತ್ರದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ದಳವಾಹಿಹಳ್ಳಿ ಗ್ರಾಮ ಸೇರಿದಂತೆ ಸುತ್ತ-ಮುತ್ತ ಪ್ರದೇಶಗಳಲ್ಲಿ ಹಾಗೂ ಹತ್ತಿ ಬೆಳದಂತಹ ಉಳಿದ ಎಲ್ಲಾ ತಾಲೂಕುಗಳಲ್ಲಿಯೂ ಸಹ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಈ ಹುಳುವಿನ ಹತೋಟಿಗಾಗಿ ಥಿಯಾಮೇಥಾಕ್ಸಮ್ 0.3 ಗ್ರಾಂ ಪ್ರತಿ ಲೀಟರ್ ಅಥವಾ ಪ್ಲೋನಿಕಮಿಡ್ 0.3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹತೋಟಿಗೆ ತರಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಷಯ ತಜ್ಞರಾದ ಮಂಜುನಾಥ ಸ್ವಾಮಿ ರೈತ ಬಾಂಧವರಿಗೆ ಸಲಹೆ ನೀಡಿದ್ದಾರೆ.
ಇ-ಕೆವೈಸಿ ಕಡ್ಡಾಯ; ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಜಮೆಯಾಗುತ್ತಿದೆ. ಈ ಕುರಿತು ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಇದು ಕೊನೆಯ ಅವಕಾಶ ಎಂದು ಕೃಷಿ ಇಲಾಖೆ ರೈತರಿಗೆ ಮನವಿ ಮಾಡಿದೆ.
ಈಗಾಗಲೇ ಅನೇಕ ಬಾರಿ ಮನವಿ ಮಾಡಿದರೂ ಕೆಲವು ರೈತರು ಇ-ಕೆವೈಸಿ ಮಾಡಿಸಿರುವುದಿಲ್ಲ. ಅರ್ಹ ರೈತ ಫಲಾನುಭವಿಯು http://pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದು ಇಲಾಖೆ ಹೇಳಿದೆ.
ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೋಂದಾಣೆಯಾಗದ ರೈತರು ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳಚ್ಚು ನಮೂದಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಮಾಹಿತಿ ಪಡೆದು ಇ-ಕೆವೈಸಿ ನೋಂದಾಯಿಸಲು ಮನವಿ ಮಾಡಲಾಗಿದೆ.












Click it and Unblock the Notifications