ಧಾರವಾಡ ಜಿಲ್ಲೆಯ ರೈತ ಸಮುದಾಯಕ್ಕೆ ಅತಿವೃಷ್ಟಿ, ಅನಾವೃಷ್ಟಿ ಅನುಭವ
ಹುಬ್ಬಳ್ಳಿ, ಆಗಸ್ಟ್, 03: ಧಾರವಾಡ ಜಿಲ್ಲೆಯಲ್ಲಿ ರೈತರಿಗೆ ಒಂದೇ ವರ್ಷದಲ್ಲಿ ಅತೀವೃಷ್ಟಿ ಹಾಗೂ ಅನಾವೃಷ್ಟಿಯ ಅನುಭವವಾಗಿದೆ. ಬಿತ್ತನೆ ಮಾಡಬೇಕಾದ ಸಮಯ ಜೂನ್ ತಿಂಗಳಿನಲ್ಲಿ ಮಳೆಯ ದರ್ಶನವೇ ಆಗಲಿಲ್ಲ, ಪರಿಣಾಮ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಲಗಳಲ್ಲಿ ಬಿತ್ತನೆಯಾಯಿತು. ಇನ್ನು ಜುಲೈ ಮಧ್ಯಭಾಗದಲ್ಲಿ ಆರಂಭವಾದ ವರ್ಷಧಾರೆ ಎಡೆಬಿಡದೆ ಸುರಿದು ತಲ್ಲಣ ಸೃಷ್ಟಿಸಿದೆ. ಇದು ಧಾರವಾಡ ಜಿಲ್ಲೆಯ ಈ ವರ್ಷದ ಮುಂಗಾರು ಹಂಗಾಮಿನ ಸ್ಥಿತಿಯಾಗಿದೆ.
ಕಳೆದ ವರ್ಷ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ರೈತರು ಬೆಳೆಗಳನ್ನು ಕಳೆದುಕೊಂಡರೆ, ಈ ಬಾರಿ ಎರಡೇ ತಿಂಗಳಲ್ಲಿ ಬರ, ನೆರೆ ಎರಡನ್ನೂ ಅನುಭವಿಸುವಂತಾಗಿದೆ. ಜೂನ್‌ನಲ್ಲಿ ಮಳೆ ಇಲ್ಲದೆ ಒಣ ನೆಲದಲ್ಲೇ ಅನೇಕ ರೈತರು ಬಿತ್ತನೆ ಮಾಡಿದರು. ಆ ಸಮಯದಲ್ಲಿ ವರುಣ ಕೃಪೆ ತೋರಲಿಲ್ಲ. ಬಿತ್ತನೆ ಮಾಡಿದ ಬೀಜ ಉಳಿಸಿಕೊಳ್ಳಲು ಕೃಷಿಕರು ಟ್ಯಾಂಕರ್‌ಗಳಲ್ಲಿ ನೀರು ತಂದು ಹಾಕಿ ಒಂದಿಷ್ಟು ಬೆಳೆ ಉಸಿರಾಡುವಂತೆ ಮಾಡಿದರು.

ಜೂನ್ ತಿಂಗಳು ಪೂರ್ತಿ ಮಳೆ ಹೋಗಿದ್ದರಿಂದ ಸರ್ಕಾರ ಕೂಡ ಬರಗಾಲ ಘೋಷಣೆ ಮಾಡುವ ಆಲೋಚನೆಯಲ್ಲಿತ್ತು. ಅಷ್ಟರಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆದಿದ್ದಾನೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪೂರ್ತಿ ಪ್ರಮಾಣದಲ್ಲಿ ಬಿತ್ತನೆಯಾಗದೆ ಎಲ್ಲೆಡೆ ಕಪ್ಪು ಹೊಲಗಳು ಕಾಣುತ್ತಿವೆ. ಇದೀಗ ಮಳೆಯಾದರೂ ಫಸಲು ತೆಗೆಯುವ ಸ್ಥಿತಿಯಲ್ಲಿ ರೈತರು ಇಲ್ಲ.
ಇನ್ನು ಜುಲೈನಲ್ಲಿ ಭಾಳೆ ಸುರಿದಿದ್ದರಿಂದ ಕೆಲವೆಡೆ ಬಿತ್ತನೆ ಮಾಡಲಾದ ಹೆಸರು, ಶೇಂಗಾ ಬೆಳೆಗಳು ನೀರಲ್ಲಿ ಜಲಾವೃತವಾಗಿದ್ದವು. ಈಗ ಅವುಗಳ ಬೇರು ಕೊಳೆತು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದೇ ಮಳೆ ಒಂದು ತಿಂಗಳು ಮೊದಲು ಬಂದಿದ್ದರೆ ಬಿತ್ತನೆಯಾಗಿ ಭರಪೂರ ಫಸಲು ಬರುತ್ತಿತ್ತು ಎಂದು ರೈತ ಸಮುದಾಯ ಆತಂಕ ವ್ಯಕ್ತಪಡಿಸಿದೆ.
ಮಳೆ ಕೊರತೆ ಹಿನ್ನೆಲೆ ಬಿತ್ತನೆ ಕುಂಠಿತ
ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ಅಲ್ಲಲ್ಲಿ ಬಿರು ಮಳೆಯಾಗಿದೆ. ಆದರೆ ಹೇಳಿಕೊಳ್ಳುವಂತಹ ಮಳೆಯೇನೂ ಆಗಿಲ್ಲ. ಮಳೆ ವಿಳಂಬವಾದ ಹಿನ್ನೆಲೆ ಬಿತ್ತನೆಗಾಗಿ ಕಾದು ಕುಳಿತಿದ್ದ ರೈತರು ಈಗ ಬಿತ್ತನೆಯಲ್ಲಿ ತೊಡಗಿಕೊಂಡಿದ್ದು, ಬೇರೆ ಬೆಳೆಗಿಂತ ರಾಗಿ ಬಿತ್ತನೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಕಳೆದ 7 ದಿನಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 21.3 ಮಿಲಿ ಮೀಟರ್ ಆಗಿದ್ದು, ಒಟ್ಟು 26.2 ಮಿಲಿ ಮೀಟರ್ ಮಳೆಯಾಗಿದೆ. ಹೀಗಾಗಿ ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಜೋರಾಗಿ ನಡೆದಿದೆ. ಇಷ್ಟು ದಿನ ಮಳೆಗಾಗಿ ಕಾದು ಕುಳಿತಿದ್ದ ರೈತರು ಉಳುಮೆ ಮಾಡಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆಯಾಗುತ್ತಿದ್ದ ಶೇಂಗಾ, ಮುಸುಕಿನ ಜೋಳ ಬಿತ್ತನೆಗೆ ಅವಧಿ ಮುಗಿದಿರುವುದರಿಂದ ಹೆಚ್ಚಿನ ರೈತರು ರಾಗಿ ಬಿತ್ತನೆ ಕಡೆ ಮೊರೆಹೋಗಿದ್ದಾರೆ.
ಇನ್ನೊಂದು ಉತ್ತಮ ಪ್ರಮುಖ ಬೆಳೆಯಾದ ನೆಲಗಡಲೆಯನ್ನು ಕಳೆದ ಬಾರಿ ಇಷ್ಟೊತ್ತಿಗಾಗಲೇ 20,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇಕಡಾ 75ರಷ್ಟು ಗುರಿ ಸಾಧನೆ ಮಾಡಲಾಗಿತ್ತು. ಆದರೆ ಈ ಬಾರಿ ಇದುವರೆಗೂ ಕೇವಲ 11,550 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇಕಡಾ 43ರಷ್ಟು ಮಾತ್ರ ಬಿತ್ತನೆಯಾಗಿದೆ. ಹೀಗಾಗಿ ಈ ಬಾರಿ ನಿರೀಕ್ಷಿತ ಗುರಿ ಮುಟ್ಟುವುದು ಅಸಾಧ್ಯವಾಗಿದ್ದು, ನೆಲಗಡಲೆ ಅಭಾವ ಉಂಟಾಗುವ ಆತಂಕವೂ ಸಹ ಎದುರಾಗಿದೆ. ಬಹುತೇಕ ರೈತರು ರಾಗಿ ಅಥವಾ ಹುರುಳಿ ಮೊರೆ ಹೋಗುವ ಸಾಧ್ಯತೆಯೂ ಇದೆ.
ಕಳೆಗುಂದಿದ ಸೂರ್ಯಕಾಂತಿ
ಕಳೆದ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬೆಳೆಯನ್ನು ನಿರೀಕ್ಷೆಗೂ ಮೀರಿ 336 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಹೀಗಾಗಿ ಈ ಬಾರಿ 330 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತಾದರೂ ಕೈಕೊಟ್ಟ ಮಳೆಯಿಂದ ಇದುವರೆಗೂ ಜಿಲ್ಲೆಯಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ.












Click it and Unblock the Notifications