ಬೆಂಬಲ ಬೆಲೆ ಯೋಜನೆ; ಧಾರವಾಡ ಎಪಿಎಂಸಿಯಲ್ಲಿ ಕಡಲೆ ಕಾಳು ಖರೀದಿ ಆರಂಭ
ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ನೂತನ ಎಪಿಎಂಸಿ ಆವರಣದಲ್ಲಿ ಸರ್ಕಾರಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ತಾಲೂಕಿನ ರೈತರು ಇದರ ಉಪಯೋಗ ಪಡೆಯಬಹುದಾಗಿದೆ.
ಧಾರವಾಡ, ಮಾರ್ಚ್ 10; ಧಾರವಾಡದ ರೈತರಿಗೆ ಸಿಹಿಸುದ್ದಿ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಕಡಲೆ ಕಾಳು ಖರೀದಿ ಮಾಡಲು ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ಧಾರವಾಡ ನೂತನ ಎಪಿಎಂಸಿ ಆವರಣದಲ್ಲಿ ಸರ್ಕಾರಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದೆ.
ಶುಕ್ರವಾರ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಲ್ಲಪ್ಪ ಹುಲ್ಲೂರ ಎಪಿಎಂಸಿ ಆವರಣದಲ್ಲಿ ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು. ಧಾರವಾಡ ತಾಲೂಕಿನ ರೈತರು ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ತಾಲೂಕಿನ ಸುಮಾರು 1,000ಕ್ಕೂ ಹೆಚ್ಚು ರೈತರು ಕಡಲೆ ಕಾಳು ಮಾರಾಟ ಮಾಡಲು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಮಾರಾಟಕ್ಕೆ ನೋಂದಣಿ ಮಾಡಿಸಿಕೊಳ್ಳಲು ಮಾರ್ಚ್ 31ರ ತನಕ ಅವಕಾಶ ನೀಡಲಾಗಿದೆ. ನೋಂದಣಿ ಆಗಿರುವ ರೈತರ ಕಾಳು ಖರೀದಿಗೆ ಮೇ 15, 2023ರ ವರಗೆ ಕಾಲಾವಕಾಶವಿದೆ. ಈ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ರೂ. 5,335 ದರ ನೀಡಲಾಗುತ್ತಿದೆ. ಪ್ರತಿ ಎಕರೆಗೆ 4 ಕ್ವಿಂಟಲ್‍ದಂತೆ ಗರಿಷ್ಠ 15 ಕ್ವಿಂಟಲ್ ಕಡಲೆಕಾಳು ಉತ್ಪನ್ನವನ್ನು ಪ್ರತಿ ರೈತನಿಂದ ಖರೀದಿಸಲಾಗುತ್ತದೆ.
ಕಡಲೆ ಕಾಳು ಖರೀದಿಗಾಗಿ ರೈತರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಸರ್ಕಾರದ ಖರೀದಿ ಕೇಂದ್ರಕ್ಕೆ ತಮ್ಮ ಕಡಲೆಕಾಳು ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದು ಕರೆ ನೀಡಲಾಗಿದೆ. ಉತ್ತಮ ದರದಲ್ಲಿ ಕಡಲೆಕಾಳು ಖರೀದಿಗೆ ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಿದೆ. ಇತರ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಕಡಲೆ ಕಾಳು ಖರೀದಿ ಮಾಡುತ್ತಾರೆ, ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲು ಬೆಂಬಲಬೆಲೆ ಯೋಜನೆಯಡಿ ಸರ್ಕಾರದಿಂದಲೇ ಈ ಖರೀದಿ ಕೇಂದ್ರ ಆರಂಭಿಸಲಾಗಿದೆ.

ಕಡಲೆ ಕಾಳು ಬೆಳೆದ ರೈತರು ಕಡ್ಡಾಯವಾಗಿ ಸರ್ಕಾರಿ ಕಡಲೆ ಖರೀದಿ ಕೇಂದ್ರಗಳಲ್ಲಿಯೇ ತಮ್ಮ ಹೆಸರು ನೋಂದಣಿ ಮಾಡಿಸಬೇಕು. ನೋಂದಣಿಗೆ ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ರೈತನ ಹೆಸರಿರುವ ಭೂಮಿ ಉತಾರ ಹಾಗೂ ಕಡಲೆ ಬೆಳೆದ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು. ರೈತರು ನೋಂದಣಿ ಮಾಡಲು ಈಗಲೂ ಅವಕಾಶವಿದೆ. ಹಣ ನೇರವಾಗಿ ಆಧಾರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹೋಗಲಿದೆ.
ಶುಕ್ರವಾರ ನಡೆದ ಕಡಲೆ ಕಾಳು ಖರೀದಿ ಕೇಂದ್ರದ ಚಾಲನಾ ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ಕಾರ್ಯದರ್ಶಿ ಅಜೇಯ ಹಳೆಮನಿ, ಸಂಘದ ಉಪಾಧ್ಯಕ್ಷ ರಾಮಣ್ಣ ಖನಾಜಿ ಹಾಗೂ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ಸಂಘದ ನಿರ್ದೇಶಕರು, ರೈತರು, ಸಿಬ್ಬಂದಿಗಳು ಭಾಗವಹಿಸಿದ್ದರು.
ತೋಟಗಾರಿಕಾ ತರಬೇತಿಗೆ ಅರ್ಜಿ ಹಾಕಿ; ಧಾರವಾಡ ಜಿಲ್ಲೆಯ ರೈತರ ಮಕ್ಕಳಿಗೆ 2023-24ನೇ ಸಾಲಿಗೆ, 10 ತಿಂಗಳ ಅವಧಿಯ ಮೇ 2, 2023 ರಿಂದ ಫೆಬ್ರವರಿ 29, 2024 ರ ವರೆಗೆ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮಹಿಳಾ 5 ಹಾಗೂ ಪುರುಷ 10 ಒಟ್ಟು 15 ಅಭ್ಯರ್ಥಿಗಳಿಗೆ ತೋಟಗಾರಿಕಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ) ಧಾರವಾಡ ಕಛೇರಿಯಲ್ಲಿ ಸಲ್ಲಿಸಬೇಕು.
ಅರ್ಜಿಯ ಜೊತೆ ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30 ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (IPO) ಅಥವಾ Bank Demand Draft ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಧಾರವಾಡ ರವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಲಗತ್ತಿಸಬೇಕು. ಅರ್ಜಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಸ್ಟೇಷನ್ ರಸ್ತೆ, ಧಾರವಾಡ ರವರ ಕಛೇರಿಯಲ್ಲಿ ಅಥವಾ https://horticulturedir.karnataka.gov.in ವೆಬ್‌ಸೈಟ್‌ನಲ್ಲಿ ಮಾ.11 ರಿಂದ ಏಪ್ರಿಲ್ 12 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಏಪ್ರಿಲ್ 12ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಧಾರವಾಡ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 0836-2957801.












Click it and Unblock the Notifications