ಈ ಬಾರಿ ಈರುಳ್ಳಿ ಕಣ್ಣೀರು ತರಿಸಲು ಬಿಡಲ್ಲ
ನವದೆಹಲಿ, ಸೆ.6 : ಕಳೆದ ವರ್ಷ ಹಬ್ಬಗಳ ಸಂಭ್ರಮಕ್ಕೆ ಏರಿದ್ದ ಈರುಳ್ಳಿ ಬೆಲೆ ಅಡ್ಡಿಯಾಗಿತ್ತು. ಈ ಬಾರಿಯೂ ಅಂಥಹದೆ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಮುಂಜಾಗೃತವಾಗಿ ಈರುಳ್ಳಿ ದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಮುಂಗಾರು ಹಂಗಾಮು ವಿಳಂಬವಾದ ಪರಿಣಾಮ ಪ್ರಮುಖವಾಗಿ ಈರುಳ್ಳಿ ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಈರುಳ್ಳಿ ಬಿತ್ತನೆ ತಡವಾಗಿದೆ.

ಹಾಗಾಗಿ ಒಂದು ತಿಂಗಳು ವಿಳಂಬವಾಗಿ ಈರುಳ್ಳಿ ಬೆಳೆ ರೈತರ ಕೈ ಸೇರಲಿದೆ. ಇದು ಹಬ್ಬದ ಸೀಸನ್ ಮೇಲೆ ಪರಿಣಾಮ ಬೀರುವ ಲಕ್ಷಣವಿದ್ದು ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.(ಆಮ್ಲೆಟ್ ಗೆ ಈರುಳ್ಳಿ ಹಾಕದಿದ್ದಕ್ಕೆ ಗುಂಡೇಟು!)
ಹಬ್ಬದ ಸೀಸನ್ ಬಂತು
ಸೆಪ್ಟಂಬರ್ ಅಂತ್ಯ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹಬ್ಬದ ಸರಮಾಲೆಯಿದ್ದು ಈರುಳ್ಳಿ ಬೆಲೆ ಪ್ರತಿ ಕೆಜಿ ಗೆ 80 ರಿಂದ 100ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಇದಕ್ಕೆ ಪರ್ಯಾಯ ಕ್ರಮ ಅನುಸರಿಸಿ ಗ್ರಾಹಕರಿಗೆ 25 ರಿಂದ 30 ರೂ.ಗಳಲ್ಲಿ ಈರುಳ್ಳಿ ಲಭ್ಯವಾಗುವಂತೆ ನೋಡಿಕೊಳ್ಳಲಲಾಗುವುದು ಎಂದು ತಿಳಿಸಿದ್ದಾರೆ.
ಅಗತ್ಯಬಿದ್ದರೆ ಆಮದು
ಅಗತ್ಯಬಿದ್ದರೆ ಈರುಳ್ಳಿ ಆಮದು ಮಾಡಿಕೊಳ್ಳಲಾಗುವುದು. ಕಳೆದ ವರ್ಷ ಇದೇ ಅವಧಿಯಲ್ಲಿ ಈರುಳ್ಳಿ, ಟೊಮಾಟೋ ಮತ್ತು ವಿವಿಧ ತರಕಾರಿಗಳ ಬೆಲೆ ಯಾವ ದರದಲ್ಲಿತ್ತು ಎಂಬುದು ಜನತೆಗೆ ಗೊತ್ತಿದೆ. ಆದರೆ ಈ ವರ್ಷ ತರಕಾರಿಗಳ ಬೆಲೆ ಹೆಚ್ಚಳವಾಗಲು ಅವಕಾಶ ನೀಡುವುದಿಲ್ಲ. ಸಮರ್ಪಕ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ದರ ಹೇಗಿದೆ?
ಸದ್ಯ ಈರುಳ್ಳಿ ದರ ಪ್ರತಿ ಕೆಜಿಗೆ 20 ರಿಂದ 30 ರೂ. ಇದೆ. ದೆಹಲಿಯಲ್ಲಿ 30 ರೂ., ಬೆಂಗಳೂರಲ್ಲಿ 28, ಮುಂಬೈನಲ್ಲಿ 30 ಮತ್ತು ಚೆನೈನಲ್ಲಿ 26 ರೂ. ಇದೆ. ಆದರೆ ಪ್ರತಿ ದಿನ ದರದಲ್ಲಿ 1 ರಿಂದ 2 ರೂ ಹೆಚ್ಚಳವಾಗುತ್ತಿರುವುದು ಗೃಹಿಣಿಯರ ಗಮನಕ್ಕೆ ಬರುತ್ತಿದೆ.












Click it and Unblock the Notifications