ರಸಗೊಬ್ಬರಕ್ಕೆ ಸಬ್ಸಿಡಿ: ರೈತರಿಗೆ ಬಂಪರ್ ಕೊಡುಗೆ ನೀಡಿದ ಕೇಂದ್ರ ಸರ್ಕಾರ
ಬೆಂಗಳೂರು, ಏಪ್ರಿಲ್ 01: ಖಾರಿಫ್ ಋತುವಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ ನೀಡಲು ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಯಂ ರಸಗೊಬ್ಬರಗಳ ಮೇಲೆ ಖಾರಿಫ್-2025ಕ್ಕೆ ಅಂದರೆ 1/4/2025 ರಿಂದ 30/9/2025ರ ತನಕ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳಿಗೆ ಅನುಮೋದನೆ ಕೊಡಲಾಗಿದೆ.

2025ರ ಖಾರಿಫ್ ಋತುವಿಗೆ ಪಿ & ಕೆ ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ನಿಗದಿಪಡಿಸಲು ರಸಗೊಬ್ಬರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ನೀಡಲಾಗಿದೆ.
2024ರ ಖಾರಿಫ್ ಋತುವಿಗೆ ಬಜೆಟ್ ಅವಶ್ಯಕತೆ ಸುಮಾರು 37,216.15 ಕೋಟಿ ರೂ. ಇದು 2024-25ರ ರಬಿ ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 13,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರೈತರಿಗೆ ಸಬ್ಸಿಡಿ ಪ್ರಯೋಜನಗಳು
* ರಸಗೊಬ್ಬರಕ್ಕೆ ಸಬ್ಸಿಡಿ ನೀಡುವುದರಿಂದ ಕಡಿಮೆ ದರದಲ್ಲಿ, ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರೈತರಿಗೆ ರಸಗೊಬ್ಬರಗಳ ಲಭ್ಯತೆಯನ್ನು ಇದು ಖಚಿತಪಡಿಸುತ್ತದೆ.
* ರಸಗೊಬ್ಬರದ ಬೆಲೆ ಮತ್ತು ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುತ್ತದೆ.
ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಈ ರಸಗೊಬ್ಬರದ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗಲಿದೆ. ಖಾರಿಫ್-2025ರ ಅವಧಿಯಲ್ಲಿ ಅನುಮೋದಿತ ದರಗಳ ಆಧಾರದ ಮೇಲೆ ಏಪ್ರಿಲ್ 1ರಿಂದ 30/9/2025ರ ತನಕ ಸಬ್ಸಿಡಿ ಜಾರಿಯಲ್ಲಿರುತ್ತದೆ.
ಸರ್ಕಾರವು ರಸಗೊಬ್ಬರ ತಯಾರಕರು/ ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ 28 ದರ್ಜೆಯ ಪಿ & ಕೆ ರಸಗೊಬ್ಬರಗಳನ್ನು ಒದಗಿಸುತ್ತಿದೆ. ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಪಿ & ಕೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.
ರಸಗೊಬ್ಬರಗಳಾದ ಯೂರಿಯಾ, ಡಿಎಪಿ, ಎಂಒಪಿ ಮತ್ತು ಗಂಧಕದ (ಸಲ್ಫರಿನ) ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪರಿಷ್ಕರಣೆಗಳನ್ನು ಗಮನದಲ್ಲಿಟ್ಟುಕೊಂಡು, ಪಿ & ಕೆ ರಸಗೊಬ್ಬರಗಳ ಮೇಲೆ ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ.
ಕರ್ನಾಟಕದ ವಿವಿಧ ಸಂಸದರು ಈ ತೀರ್ಮಾನದ ಕುರಿತು ಸಂತಸ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ದೇಶದ ಅನ್ನದಾತರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಯುಗಾದಿ ಹಬ್ಬಕ್ಕೆ ಬಂಪರ್ ಸಬ್ಸಿಡಿ ಘೋಷಣೆ ಮಾಡಿ ರೈತರ ಮೊಗದಲ್ಲಿ ಮಂದಹಾಸ ತಂದಿದೆ' ಎಂದು ಹೇಳಿದ್ದಾರೆ.
'ಮಣ್ಣಿಗೆ ಪೋಷಕಾಂಶವನ್ನು ಒದಗಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಅಂಗವಾಗಿ ರಸಗೊಬ್ಬರಗಳಿಗೆ ಬರೋಬ್ಬರಿ 37,216 ಕೋಟಿ ರೂಪಾಯಿ ಸಬ್ಸಿಡಿ ನೀಡಿ ಕೇಂದ್ರ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ. ದೇಶದ ಬೆನ್ನೆಲುಬು ಆಗಿರುವ ಅನ್ನದಾತರ ಶ್ರೇಯೋಭಿವೃದ್ಧಿಗೆ ಪ್ರಧಾನಿ ಮೋದಿ ಸರ್ಕಾರ ಬದ್ಧವಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications