ಎರಡು ವರ್ಷದಲ್ಲೇ ಅತಿಹೆಚ್ಚಿನ ಜಿಡಿಪಿ ಸಾಧನೆ
ಹೊಸದೆಹಲಿ, ಆ. 30: ಕಳೆದ ಎರಡು ವರ್ಷದಲ್ಲೇ ಅತಿ ಹೆಚ್ಚಿನ ಜಿಡಿಪಿ ದರ ದಾಖಲಾಗಿದೆ. ಕೇಂದ್ರ ಲೆಕ್ಕ ಪತ್ರ ಸಮಿತಿ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೇಶ ಶೇ. 5.7 ಆರ್ಥಿಕ ಅಭಿವೃದ್ಧಿ ದರ ದಾಖಲಿಸಿದೆ. ಇದು ದೇಶದ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.
ವಿವಿಧ ಉತ್ಪನ್ನ ತಯಾರಿಕಾ ವಿಭಾಗ ಮತ್ತು ಸೇವಾ ಘಟಕಕ್ಕೆ ಸರ್ಕಾರ ನೀಡಿದ ಉತ್ತೇಜನ ಈ ಬೆಳವಣಿಗೆಗೆ ಕಾರಣವಾಗಿದೆ. ಕೇಂದ್ರ ಲೆಕ್ಕಪತ್ರ ಸಮಿತಿ ಬಿಡುಗಡೆಮಾಡಿರುವ ಅಂಕೆ ಸಂಖ್ಯೆಗಳ ಆಧಾರದಲ್ಲಿ ಎಪ್ರಿಲ್-ಜೂನ್ ವೇಳೆಯಲ್ಲಿ ದೇಶ ಶೇ. 5.7 ಅಭಿವೃದ್ಧಿ ದರ ದಾಖಲಿಸಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ. 4.6 ರಷ್ಟಿತ್ತು.

ಇದು ಕೇಂದ್ರ ಸರ್ಕಾರದ ವಿಶ್ವಾಸ ಹೆಚ್ಚಿಸಿದ್ದು ದೊಡ್ಡ ದೊಡ್ಡ ಯೋಜನೆಗಳಿಗೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಾಗುತ್ತದೆ ಎನ್ನಬಹುದಾದರೂ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಇನ್ನೂ ಅನೇಕ ಸಮಸ್ಯೆಗಳಿಂದ ಹೊರತಾಗಿಲ್ಲ.
ಮಳೆ ಕಣ್ಣಾಮುಚ್ಚಾಲೆ ನಡುವೆಯೂ ಉತ್ತಮ ಪ್ರಗತಿ ಸಾಧಿಸಿರುವುದು ಸಂತಸ ತಂದಿದೆ. ರಫ್ತಿನ ಪ್ರಮಾಣ ಹೆಚ್ಚಿಸಲು ಗಮನ ನೀಡಲಾಗುತ್ತಿದೆ. ಕೆಲವೊಂದು ಕ್ಷೇತ್ರಗಳಲ್ಲಿ ನಷ್ಟ ಎದುರಾಗುತ್ತಿದ್ದು ಲೋಪ ತಡೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಿಡಿಪಿ ಅಭಿವೃದ್ಧಿ ನಮ್ಮದೇ ಸಾಧನೆ: ಚಿದಂಬರಂ
ಜೆಡಿಪಿ ದರದಲ್ಲಿ ಶೇ. 5.7 ರಷ್ಟು ಸಾಧನೆಯಾಗಲು ಯುಪಿಎ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳೇ ಕಾರಣ ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಆರ್ಥಿಕ ಅಭಿವೃದ್ಧಿಗೆ ಈ ಬೆಳವಣಿಗೆ ದುಕ್ಸೂಚಿಯಾಗಿ ನಿಲ್ಲುತ್ತದೆ. 2014-15 ಹಣಕಾಸು ವರ್ಷದ ಆರಂಭದಲ್ಲಿ ಯುಪಿಎ ಕೈಗೊಂಡ ಕಾರ್ಯಕ್ರಮಗಳೇ ಇದಕ್ಕೆ ಕಾರಣ ಎಂದಿದ್ದಾರೆ.
ಎನ್‌ಡಿಎ ಸರ್ಕಾರ ಯುಪಿಎ ರೂಪಿಸಿದ್ದ ಉತ್ತಮ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ












Click it and Unblock the Notifications