ನಗರದಲ್ಲಿ ದೇವೇಗೌಡ್ರ ಉಪವಾಸ, ಭಾರೀ ಜನಬೆಂಬಲ

ಇಂದು (ನ 22) ಬೆಳಿಗ್ಗೆ 7.30ಕ್ಕೆ ಎಂ. ಜಿ ರಸ್ತೆಯಲ್ಲಿರುವ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಉಪವಾಸ ಸತ್ಯಾಗ್ರಹ ಕೂತಿರುವ ದೇವೇಗೌಡ, ಸಿದ್ದಲಿಂಗ ಪ್ರಭು ಹತ್ಯೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂ ಸದಾನಂದ ಗೌಡ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವ ಕ್ರಮ ಕೂಡ ಕೈಗೊಂಡಿಲ್ಲ. ಈ ಉಪವಾಸದ ನಂತರವೂ ಸರಕಾರ ಎಚ್ಚೆತ್ತು ಕೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೋರಾಟ ಏಕೆ?: ಅಕ್ಟೋಬರ್ 18ರಂದು ನೈಸ್ ಹೋರಾಟಗಾರ ಪ್ರಭು ಹತ್ಯೆಗೀಡಾಗಿದ್ದರು. ಘಟನೆ ನಡೆದು ಒಂದು ತಿಂಗಳಾದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ. ಅನ್ನದಾತರ ಮೇಲೆ ಸರಕಾರದ ನಿರ್ಲಕ್ಷ್ಯ ಒಳ್ಳ್ದೆದಲ್ಲ. ಆರೋಪಿಗಳನ್ನು ಹಿಡಿಯುವುದು ಯಾವಾಗ, ಸರಕಾರ ಏನು ನಿದ್ದೆ ಮಾಡುತ್ತಿದೆಯೇ ಎಂದು ಗೌಡ್ರು ಗುಡುಗಿದ್ದಾರೆ.
ಗೌಡರ ಈ ಉಪವಾಸ ರಾತ್ರಿ 5.30ಕ್ಕೆ ಮುಗಿಯಲಿದೆ. ಕೆಲ ದಿನಗಳ ಹಿಂದೆ ಮೃತ ಪ್ರಭು ಪತ್ನಿ ಸರಕಾರ ತನಗೆ ನ್ಯಾಯ ಒದಗಿಸಲಿಲ್ಲ ಎಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ದೇವೇಗೌಡರು ಸಿಎಂ ಮನೆಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿದ್ದಾಗ, ಆರೋಪಿ ಎಷ್ಟೇ ಪ್ರಭಲನಾಗಿದ್ದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಇನ್ನು ಎರಡು ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದ ಗೌಡರು ಭರವಸೆ ನೀಡಿದ್ದರು.
ದೇವೇಗೌಡರ ಈ ಉಪವಾಸ ಹೋರಾಟಕ್ಕೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.
ಉಪವಾಸದ ನಂತರ ಗೌಡ್ರು ಹೇಳಿದಿಷ್ಟು: ಪಾದಯಾತ್ರೆಯಿಂದಲೂ ಪ್ರಯೋಜನವಿಲ್ಲ, ಮುಖ್ಯಮಂತ್ರಿ ಸದಾನಂದ ಗೌಡರ ಭರವಸೆ ಹುಸಿಯಾಗಿದೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಇವತ್ತಿನ ನನ್ನ ಉಪವಾಸ ದಿಂದಾದರೂ ನ್ಯಾಯ ಸಿಗುವಂತಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಉಪವಾಸ ಮುರಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಲಿಂಗಯ್ಯ, ಶಾಸಕ ಬಾಲಕೃಷ್ಣ, ಈ ಕೃಷ್ಣಪ್ಪ ಮತ್ತು ಅಗ್ನಿ ಶ್ರೀಧರ್ ಉಪಸ್ಥಿತರಿದ್ದರು.












Click it and Unblock the Notifications