ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಆಕ್ರೋಶ
ಚಾಮರಾಜನಗರ, ಮೇ, 18: ಬರ ಹಾಗೂ ಮಳೆ ಹಾನಿಗೊಳಗಾದ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ಯ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ನೇತೃತ್ವದಲ್ಲಿ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ಪ್ರವಾಸಿ ಮಂದಿರ ಮುಂಭಾಗದ ರಸ್ತೆ ತಡೆದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜ್ ಮಾತನಾಡಿ, ಮೈಸೂರು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 2,000 ಹೆಕ್ಟೇರ್ ಪ್ರದೇಶದ ಬೆಳೆ ತೀವ್ರ ಬಿರುಗಾಳಿಯಿಂದ ನಾಶವಾಗಿದೆ. ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ರೈತರ ಬೆಳೆ ನಷ್ಟ ಅಂದಾಜು ಮಾಡುವಲ್ಲಿ ವಿಫಲರಾಗಿದ್ದಾರೆ. ನಷ್ಟ ಹೊಂದಿರುವ ಬೆಳೆ ಸಮೀಕ್ಷೆಯ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವು ನೊಂದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರದ ಹಂತದಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ರೈತರು ಜಾಗೃತರಾಗಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ ಸಮರ್ಪಕ ವರದಿಯನ್ನು ತಯಾರಿಸಿ ವಿಶೇಷ ಪ್ಯಾಕೇಜ್‌ಗೆ ವರದಿ ಸಲ್ಲಿಸಬೇಕು. ಜಿಲ್ಲಾ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ ಹೆಕ್ಟೇರ್‌ಗೆ ಸುಮಾರು ಒಂದು ಲಕ್ಷ ರೂಪಾಯಿನಷ್ಟು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಇನ್ನು ರಾಷ್ಟ್ರೀಯ ಹೆದ್ದಾರಿ ತಡೆ ಬಳಿಕ ತಾಲೂಕು ಕಚೇರಿಗೆ ರೈತರು ಮುತ್ತಿಗೆ ಹಾಕಿ, ತಹಶಿಲ್ದಾರ್‌ಗೆ ಬೇಡಿಕೆ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದರು.












Click it and Unblock the Notifications