ಮಂಡ್ಯ: 5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ನ. 16ರಂದು ಡಿಸಿ ಕಚೇರಿಗೆ ಮುತ್ತಿಗೆಗೆ ನಿರ್ಧಾರ
ಮಂಡ್ಯ, ನವೆಂಬರ್ 11: ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಐದನೇ ದಿನವಾದ ಶುಕ್ರವಾರವೂ ಮುಂದುವರೆದಿದ್ದು, ಕೊಡಗು ಜಿಲ್ಲೆ ಮತ್ತು ಶ್ರೀರಂಗಪಟ್ಟಣ ತಾಲೂಕಿನ ರೈತ ಮುಖಂಡರು ಧರಣಿ ಬೆಂಬಲಿಸಿದ್ದಾರೆ.
ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ 4,500, ಎಸ್‌ಎಪಿ 500 ರೂ. ಘೋಷಣೆ ಮಾಡಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ ನೀಡಬೇಕು ಎಂಬ ಹಲವು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನಾ ಸಮಾವೇಶ ಮಾಡಿದ್ದೇವೆ, ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಈ ನಿರ್ಲಕ್ಷ್ಯ ಧೋರಣೆ ತಾಳಿದೆ. ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 16 ರಂದು ಸಾವಿರಾರು ಸಂಖ್ಯೆಯಲ್ಲಿ ಜನ- ಜಾನುವಾರುಗಳು ಮತ್ತು ರೈತರು ಒಟ್ಟುಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಗತ್ಯವಿದ್ದರೆ ರಾಷ್ಟ್ಟೀಯ ಹೆದ್ದಾರಿ ತಡೆ ನಡೆಸುತ್ತೀವಿ, ಪ್ರತಿ ಹಳ್ಳಿಯಿಂದಲೂ ಹೋರಾಟ ಮಾಡುತ್ತೇವೆ, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಭೇಟಿ, ಧರಣಿ ಅಂತ್ಯಕ್ಕೆ ಮನವಿ
ಪ್ರತಿಭಟನಾ ನಿರತರ ಮನವೊಲಿಸಲು ಮುಂದಾದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೂ ಈ ಪ್ರತಿಭಟನೆಯ ವಿಷಯ ತಿಳಿಸಲಾಗಿದೆ. ಕಾಲಕಾಲಕ್ಕೆ ವರದಿಯನ್ನು ನೀಡಿದ್ದೇವೆ. ರೈತರ ಸಮಸ್ಯೆಗಳು ಅರ್ಥವಾಗುತ್ತಿದೆ. ನಾವು ಮತ್ತು ಜಿಲ್ಲಾಡಳಿತ ರೈತರ ಪರವಾಗಿ ಇರುತ್ತೇವೆ ಇರದಲ್ಲಿ ಅನುಮಾನ ಬೇಡ, ಹಾಗಾಗಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು.
ರೈತರು ಪ್ರತಿಭಟನೆ ಮಾಡುವ ವಿಷಯ ತಿಳಿಯಲಿಲ್ಲ, ಯಾವ ಕಾರಣಕ್ಕೆ ಅವರು ಪ್ರತಿಭಟನೆ ಮಾಡುತ್ತೀರಾ ಎಂಬ ವಿಷಯಗಳು ಸಹ ನಮಗೆ ತಿಳಿದಿರಲಿಲ್ಲ, ಈಗಾಗಲೇ ಐದು ದಿನದಿಂದ ಧರಣಿ ನಡೆಸುತ್ತಿದ್ದೀರಾ? ಮಳೆ ಹೆಚ್ಚಾಗುವ ಹಿನ್ನಲೆಯಲ್ಲಿ ಪ್ರತಿಭಟನೆ ನಿಲ್ಲಿಸಿ, ರೈತರ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ಧರಣಿ ನಿಲ್ಲಿಸದಿರುವುದಕ್ಕೆ ತೀರ್ಮಾನ
ಪ್ರತಿಭಟನಾ ನಿರತ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಮನವರಿಕೆ ಮಾಡಿಕೊಟ್ಟರೂ ಸಹ ರೈತ ಸಂಘದ ಮುಖಂಡರು ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಸರ್ಕಾರ ಮೊದಲು ಅಧಿಕೃತವಾಗಿ ಘೋಷಣೆ ಮಾಡಬೇಕೆಂಬ ಒತ್ತಾಯದ ಮೇರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ರಾಜ್ಯ ಸಮಿತಿ ಸದಸ್ಯ ಅರಕೆರೆ ಪ್ರಸನ್ನ ಎನ್.ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕೊಡುಗು ಜಿಲ್ಲೆಯ ಮನುಸೋಮಯ್ಯ, ಕಾರ್ಯಾಧ್ಯಕ್ಷ ಸುಜಯ್ ಬೋಪಯ್ಯ, ಮುಖಂಡರಾದ ಸುಬ್ಬಯ್ಯ, ಮಂಜುನಾಥ್, ಲಿಂಗಪ್ಪಾಜಿ, ಕೃಷ್ಣೇಗೌಡ, ಮಾದಪ್ಪ, ಬಾಲಕೃಷ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications