ಮಂಡ್ಯದಲ್ಲಿ ರೈತ ಮುಖಂಡರಿಂದ ಬಸವರಾಜ ಬೊಮ್ಮಾಯಿ ಪುತ್ಥಳಿಗೆ ರಕ್ತದಲ್ಲಿ ಅಭಿಷೇಕ
ಮಂಡ್ಯ, ಡಿಸೆಂಬರ್, 28: ಮಂಡ್ಯದಲ್ಲಿ ರೈತರು ಕಬ್ಬಿನ ನಿಗದಿ ಬೆಲೆಗೆ ಆಗ್ರಹಿಸಿ ತಿಂಗಳಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಕಳೆದ 52 ದಿನಗಳಿಂದ ರೈತ ಮುಖಂಡು ಪ್ರತಿಭಟನೆ ಮಾಡಿಕೊಂಡು ಬಂದಿದ್ದಾರೆ. ಆದರೂ ಇದುವರೆಗೂ ಕೂಡ ಸರ್ಕಾರ ರೈತರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಆದ್ದರಿಂದ ಇದೀಗ ಆಕ್ರೋಶಗೊಂಡ ರೈತ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ಪುತ್ಥಳಿಗೆ ರಕ್ತದಲ್ಲಿ ಅಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ರೈತ ಮುಖಂಡರು, ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕೃತಿಗೆ ಸಿರಂಜ್ ಮೂಲಕ ರಕ್ತದ ಅಭಿಷೇಕ ಮಾಡಿದ್ದಾರೆ. ರಕ್ತದ ಅಭಿಷೇಕ ಮಾಡಲಿಕ್ಕೆಂದೇ ರೈತರು ಸಿಎಂ ಪುತ್ಥಳಿ ಮಾಡಿಸಿ ತಂದಿದ್ದರು. ರೈತರು ಮೊದಲೇ ಸಿರಂಜ್‌ನಲ್ಲಿ ರಕ್ತವನ್ನು ಶೇಖರಿಸಿಕೊಂಡಿದ್ದರು. ನಂತರ ಕಾರಿನಲ್ಲಿ ಪುತ್ಥಳಿ ತಂದು ರಕ್ತದ ಅಭಿಷೇಕ ಮಾಡಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ರೈತರ ಆಕ್ರೋಶ
ಮಂಡ್ಯದಲ್ಲಿ ರೈತರು ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಸರ್ಕಾರ ಮಾತ್ರ ರೈತರ ಕಡೆಗೆ ಗಮನ ಹರಿಸುತ್ತಿಲ್ಲ. ರೈತರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಮಂಡ್ಯದಲ್ಲಿ ರೈತರು ಚಡ್ಡಿ ಮೆರವಣಿಗೆ ಮಾಡಿದರೆ, ಮಹಿಳಾ ರೈತರು ಬಾರುಕೋಲು ಚಳವಳಿಯನ್ನೂ ನಡೆಸಿದ್ದರು.

ರೈತರು ನಡೆಸುತ್ತಿದ್ದ ಬೈಕ್ ರ್‍ಯಾಲಿಯಲ್ಲಿ ಕನ್ನಡ, ದಲಿತ, ಪ್ರಗತಿಪರ, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು, ಚಾಲಕರು ಸಹ ಭಾಗವಹಿಸಿದ್ದರು. ರೈತರು ಟ್ರಾಕ್ಟರ್ ಮತ್ತು ಎತ್ತಿನ ಗಾಡಿಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದರು. ಬಳಿಕ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ರೈತ ಮಹಿಳೆಯರಿಂದ ಬಾರುಕೋಲು ಚಳವಳಿ
ಮದ್ದೂರಿನ ರೈತರು ಚಡ್ಡಿ ಮೆರವಣಿಗೆ ಮಾಡಿದರೆ, ರೈತ ಮಹಿಳೆಯರು ಬಾರುಕೋಲು ಚಳವಳಿಯನ್ನು ನಡೆಸಿದ್ದರು. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಹಲವು ಸಂಘಟನೆಗಳ ಬೆಂಬಲದೊಂದಿಗೆ ವಿಭಿನ್ನ ರೀತಿಯಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಆದರೂ ಸಹ ರೈತರ ಹೋರಾಟಕ್ಕೆ ಸರ್ಕಾರ ಇದುವರೆಗೂ ಸ್ಪಂದನೆ ನೀಡಿಲ್ಲ. ಕಬ್ಬು, ಹಾಲಿನ ದರ ನಿಗದಿ ಬಗ್ಗೆ ಯಾವುದೇ ಭರವಸೆನ್ನೂ ನೀಡಿಲ್ಲ ಎಂದು ರೈತರು ಕಿಡಿ ಕಾರಿದರು. ಸರ್ಕಾರ ರೈತರ ಬೇಡಿಕೆ ಈಡೇರಿಸದೆ ಉದಾಸೀನ ತೋರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿ ಹೋಗಿದ್ದಾರೆ. ಇತ್ತ ರೈತರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications