ದಿಶಾ ರವಿ ಬಂಧನ ಖಂಡಿಸಿ ರೈತರಿಂದ ಫೆ.18ರಂದು ರೈಲು ತಡೆ
ನವದೆಹಲಿ, ಫೆಬ್ರುವರಿ 15: ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಬೆಂಬಲಿಸಿ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಟ್ವೀಟ್‌ನ "ಟೂಲ್ ಕಿಟ್" ವಿವಾದ ಸೃಷ್ಟಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು ಬಂಧಿಸಿದ್ದಾರೆ.
ದಿಶಾ ರವಿಗೆ ಬೆಂಬಲ ವ್ಯಕ್ತಪಡಿಸಿರುವ ಪ್ರತಿಭಟನಾನಿರತ ರೈತರು ಅವರ ಬಂಧನ ಖಂಡಿಸಿ ಫೆಬ್ರುವರಿ 18ರಂದು ರೈಲು ತಡೆಗೆ ಕರೆ ನೀಡಿದ್ದಾರೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ದಿಶಾ ರವಿ ಬಿಡುಗಡೆಗೆ ಆಗ್ರಹಿಸಿದೆ.
"ರೈತರ ಹೋರಾಟವನ್ನು ದುರ್ಬಲಗೊಳಿಸಲು ಸರ್ಕಾರ ಪೊಲೀಸರ ಅಧಿಕಾರವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿದೆ. ದಿಶಾ ರವಿಯವರನ್ನು ಕೂಡಲೇ ಬಿಡುಗಡೆ ಮಾಡಬೇಕು" ಎಂದು ಆಗ್ರಹ ಮಾಡಿದೆ. ಸರ್ಕಾರದ ಈ ನಡೆ ಖಂಡಿಸಿ, ಫೆಬ್ರುವರಿ 18ರಂದು ನಾಲ್ಕು ಗಂಟೆಗಳ ಅವಧಿ ರೈಲು ತಡೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದೆ.

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಕೂಡ ದಿಶಾ ರವಿ ಬಂಧನ ಖಂಡಿಸಿದ್ದು, "ಭಯಭೀತವಾಗಿರುವ ಮೋದಿ ಸರ್ಕಾರ 21 ವರ್ಷದ ಹುಡುಗಿಯನ್ನು ಬಂಧಿಸಿ ಮಾನವೀಯತೆಯನ್ನೇ ಕೊಲ್ಲುತ್ತಿದೆ" ಎಂದು ದೂರಿದ್ದಾರೆ.












Click it and Unblock the Notifications