ನರೇಗಾ ಯೋಜನೆಯಡಿ ಸೀಬೆ ಬೆಳೆದು ಯಶಸ್ಸು ಕಂಡ ಮಹಿಳೆ
ಚಿತ್ರದುರ್ಗ, ಜುಲೈ 24; ಚಿತ್ರದುರ್ಗದ ರೈತ ಮಹಿಳೆಯೊಬ್ಬರು ತೈವಾನ್ ಪಿಂಕ್ ತಳಿಯ ಸೀಬೆಯನ್ನು ಬೆಳೆದು ಯಶಸ್ಸುಗಳಿಸಿದ್ದಾರೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿ ಮಹಿಳೆ ಸೀಬೆ ಕೃಷಿಯನ್ನು ಕೈಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ತಾಲೂಕು. ಆದರೆ ರೈತ ಮಹಿಳೆ ತಿಪ್ಪೀರಮ್ಮ ತೋಟಗಾರಿಕೆ ಇಲಾಖೆ ಸಹಾಯದಿಂದ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸವಲತ್ತು ಪಡೆದು ಸೀಬೆ ಬೆಳೆದು ಯಶಸ್ವಿಯಾಗಿದ್ದಾರೆ.

ತಾಲೂಕಿನಲ್ಲಿ ಮಳೆಯ ಕೊರತೆ ಇದ್ದರೂ ಸಹ ರೈತರ ಪ್ರಯೋಗಶೀಲತೆಯಲ್ಲಿ ಕೊರತೆ ಕಾಣಿಸುವುದಿಲ್ಲ. ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನಹಳ್ಳಿ ಪಂಚಾಯಿತಿಯ ರಾಮಸಾಗರ ಗ್ರಾಮದ ತಿಪ್ಪೀರಮ್ಮ ಸೀಬೆ ಬೆಳೆದು ಉತ್ತಮ ಆದಾಯಗಳಿಸುತ್ತಿದ್ದಾರೆ. ಇತರ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
7 ಎಕರೆ ಜಮೀನಿನಲ್ಲಿ ಕೃಷಿ; ರೈತ ಮಹಿಳೆ ತಿಪ್ಪೀರಮ್ಮ ತಮ್ಮ 7 ಎಕರೆ ಜಮೀನಿನಲ್ಲಿ ಈ ಹಿಂದೆ ಲಭ್ಯವಿದ್ದ ಅತ್ಯಲ್ಪ ನೀರಿನಲ್ಲಿ ಈರುಳ್ಳಿ, ಟೊಮೆಟೋ, ರಾಗಿ ಈ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದರು. ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಕಡಿಮೆ ನೀರು ಬಯಸುವ ಖುಷ್ಕಿ ತೋಟಗಾರಿಕೆ ಬೆಳೆಯಾದ ಸೀಬೆಯನ್ನು ಬೆಳೆಯಲು ನಿರ್ಧರಿಸಿದರು.
ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆದು 2 ಎಕರೆ 20 ಗುಂಟೆಯಲ್ಲಿ ತೈವಾನ್ ಪಿಂಕ್ ತಳಿಯ ಸೀಬೆಯನ್ನು ಬೆಳೆದರು. ಸಸಿಗಳನ್ನು ವಿಜಯಪುರ ಜಿಲ್ಲೆಯಿಂದ ಪ್ರತಿ ಸಸಿಗೆ ರೂ. 45 ರಂತೆ ಹಣ ಪಾವತಿಸಿ ಡೋರ್ ಡೆಲವರಿ ಪಡೆದುಕೊಂಡರು.
ಸಸಿಗಳನ್ನು 5*5 ಮೀ. ಅಂತರದ ಅಧಿಕ ಸಾಂದ್ರ ಪದ್ಧತಿಯಲ್ಲಿ ನಾಟಿ ಮಾಡಿ ಸಸಿಗಳನ್ನು ಚೆನ್ನಾಗಿ ಆರೈಕೆ ಮಾಡಿದರು. ಸಸಿಗಳಿಗೆ ಈಗ ಒಂದು ವರ್ಷ ಆಗಿದ್ದು, ಎರಡು ಬೀಡುಗಳಲ್ಲಿ ಒಟ್ಟಾರೆ 1200 ಕೆಜಿ ಹಣ್ಣನ್ನು ಕಟಾವು ಮಾಡಿ ತಾವೇ ಸ್ವತಃ ಬೈಕ್‍ನಲ್ಲಿ ಸ್ಥಳೀಯ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಹೆಚ್ಚಿನ ಫಸಲು ಬಂದಾಗ ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಪ್ರತಿ ಕೆಜಿಗೆ ರೂ. 30 ರಿಂದ 50ರ ವರೆಗೆ ದರಕ್ಕೆ ಮಾರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಇಳುವರಿಯ ನೀರಿಕ್ಷೆಯಲ್ಲಿದ್ದಾರೆ ರೈತ ಮಹಿಳೆ ತಿಪ್ಪೀರಮ್ಮ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449151288ಕ್ಕೆ ರೈತರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications