ಕೊಡಗು ಕಾಫಿ ದಸರಾ: ಕಾಫಿ ಬೆಳೆ ಅಭಿವೃದ್ಧಿಗೆ ಪ್ರೋತ್ಸಾಹ ಅಗತ್ಯ
ಮಡಿಕೇರಿ, ಅಕ್ಟೋಬರ್ 09: ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಕಾಫಿ ದಸರಾ ಆಯೋಜನೆ ಮಾಡಲಾಗಿದೆ. "ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಉತ್ಪಾದಿಸುತ್ತಿದ್ದು, ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ. ಕೊಡಗು ಜಿಲ್ಲೆಯ ಕಾಫಿಗೆ ದೇಶ ವಿದೇಶಗಳಲ್ಲೂ ಮಾರುಕಟ್ಟೆ ಸೌಲಭ್ಯ ಒದಗುವಂತಾಗಬೇಕು. ಆ ನಿಟ್ಟಿನಲ್ಲಿ ಕಾಫಿ ಬೆಳೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು" ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದ್ದಾರೆ.
ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಮೊದಲ ವರ್ಷ ಕಾಫಿ ದಸರಾ ಕಾರ್ಯಕ್ರಮದಲ್ಲಿ ಕಾಫಿ ಹಾಗೂ ವಿವಿಧ ಕೃಷಿ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಡಾ. ಮಂತರ್ ಗೌಡ ಮಾತನಾಡಿದರು.

ಶಾಸಕರು ಮಾತನಾಡಿ, "ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಕಾಫಿ ದಸರಾವು ಒಂದು ವೇದಿಕೆಯಾಗಿದ್ದು, ಕಾಫಿ ಕೃಷಿಯಲ್ಲಿ ಕೊಡಗಿನ ಜನರು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ಕಾಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ" ಎಂದು ಸಲಹೆ ನೀಡಿದರು.
"ಕಾಫಿ ದಸರಾ ವಿಚಾರ ಸಂಕಿರಣದಲ್ಲಿ ವಿವಿಧ ತಜ್ಞರು, ವಿಜ್ಞಾನಿಗಳು, ಕೃಷಿಕರು ಪಾಲ್ಗೊಂಡು ಕಾಫಿ ಉತ್ತೇಜನ ಸಂಬಂಧಿಸಿದಂತೆ ಹಲವು ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ತಜ್ಞರ ಅಭಿಪ್ರಾಯವನ್ನು ಕ್ರೊಢೀಕರಿಸಿ ಕಾಫಿ ಬೆಳೆಯಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಶ್ರಮಿಸಬೇಕಿದೆ" ಎಂದರು.
ಹಲವು ಪ್ರಯೋಗ: ಕಾಫಿ ದಸರಾದಲ್ಲಿ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, "ಪ್ರಥಮ ಬಾರಿಗೆ ಕಾಫಿ ದಸರಾ ಏರ್ಪಡಿಸಿರುವುದು ವಿಶೇಷವಾಗಿದೆ. ಕೊಡಗಿನ ಕಾಫಿ ಬೆಳೆ ಪ್ರಗತಿ ಹಾಗೂ ಸಾಧಕರ ಬಗ್ಗೆ ದಾಖಲೀಕರಣವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾಫಿ ಟೇಬಲ್ ಹೊರತರಲು ಪ್ರಯತ್ನಿಸಲಿದೆ" ಎಂದು ಹೇಳಿದರು.
ಕಾಫಿ ಕೃಷಿಕ ಧರ್ಮರಾಜ ಮಾತನಾಡಿ, "ಕಾಫಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಹಲವು ಪ್ರಯೋಗಗಳನ್ನು ಮಾಡಬೇಕಿದೆ. ಸರಿಯಾದ ಸಮಯಕ್ಕೆ ಮಳೆಯಾಗಬೇಕು. ಜೊತೆಗೆ ರಸಗೊಬ್ಬರ ಪೂರೈಕೆ ಮತ್ತಿತರವನ್ನು ಸಕಾಲದಲ್ಲಿ ನಿರ್ವಹಿಸಿದ್ದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಲಿದೆ" ಎಂದರು.
"ಅತಿಯಾದ ರಸಗೊಬ್ಬರವು ಸಹ ಕಾಫಿ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಮಳೆಗೆ ತಕ್ಕಂತೆ ರಸಗೊಬ್ಬರ ಹಾಕಬೇಕು. ಕಾಫಿ ಗಿಡ ಸಂರಕ್ಷಣೆ ಸಂಬಂಧಿಸಿದಂತೆ ಗಾಳಿ, ನೀರು, ಬೆಳಕು ಬಗ್ಗೆ ಕಾಫಿ ಬೆಳೆಗಾರರಲ್ಲಿ ಕನಿಷ್ಠ ಮಾಹಿತಿ ಇರಬೇಕು" ಎಂದು ಸಲಹೆ ನೀಡಿದರು.
ಕೊಡಗು ಪ್ಲಾಂಟರ್ಸ್ ಅಸೋಷಿಯೇಷನ್‍ನ ಕಾರ್ಯಕಾರಿ ಮಂಡಳಿ ಸದಸ್ಯ ಕೆ. ಕೆ. ವಿಶ್ವನಾಥ ಮಾತನಾಡಿ, "ಹವಾಮಾನ ಬದಲಾವಣೆ ಕಾರಣ ಕಾಫಿ ಬೆಳೆ ಪ್ರದೇಶದಿಂದ ಪ್ರದೇಶಕ್ಕೆ ಇಳುವರಿಯಲ್ಲಿ ವ್ಯತ್ಯಾಸವಾಗಿರುತ್ತದೆ. ಆದ್ದರಿಂದ ಸುಸ್ಥಿರ ಬೆಳೆ ನಿರೀಕ್ಷೆ ಮಾಡುವುದು ಕಷ್ಟಸಾಧ್ಯವಾಗಿದೆ" ಎಂದು ವಿವರಿಸಿದರು.
"ಕಾಫಿ ಬೆಳೆ ಸಂಬಂಧಿಸಿದಂತೆ ಮಾರುಕಟ್ಟೆ ಬೆಲೆ ಗಮನಿಸಿ ಕಾಫಿ ಮಾರಾಟ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕಾಫಿ ಬೆಳೆ ಸಂಬಂಧ ಹೆಚ್ಚಿನ ನಿಗಾವಹಿಸಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆಯ ಬಗ್ಗೆ ಮಾಹಿತಿ ಇರಬೇಕು" ಎಂದರು.
ವಿಜ್ಞಾನಿ ಡಾ. ಶಿವಪ್ರಸಾದ್ ಕಾಫಿ ಬೆಳೆಗಾರರು ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ. ಕಾಫಿ ತೋಟಗಳಲ್ಲಿ ಇಂಗುಗುಂಡಿ ಮಾಡಿ ಕೃಷಿ ಪೋಷಕಾಂಶ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ. ಜೇನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಜೇನು ಕೃಷಿಯು ಸಹ ಒಂದು ಉದ್ಯಮವಾಗಿದ್ದು, ಕಾಫಿ ಜೊತೆಗೆ ಜೇನುಕೃಷಿಯಲ್ಲಿ ಕೈಗೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.












Click it and Unblock the Notifications