ಬೆಂಗಳೂರು : ಐದು ಹಾಪ್ ಕಾಮ್ಸ್ ನಲ್ಲಿ ವೈನ್ ಸಿಗುತ್ತೆ!
ಬೆಂಗಳೂರು, ಜು.2 : ನಗರದ ವೈನ್ ಪ್ರಿಯರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಹಾಪ್ ಕಾಮ್ಸ್ ಗಳಲ್ಲಿ ವೈನ್ ಮಾರಾಟ ಮಾಡುವ ಯೋಜನೆ ಶೀಘ್ರದಲ್ಲೇ ನಗರದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ನಗರದ ಐದು ಮಳಿಗೆಗಳು ಸಜ್ಜಾಗಿವೆ.
ಕರ್ನಾಟಕ ವೈನ್ ಬೋರ್ಡ್ ಹಾಪ್ ಕಾಮ್ಸ್ ಗಳಲ್ಲಿ ವಿವಿಧ ಬಗೆಯ ವೈನ್ ಮಾರಾಟಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದೆ. ಪ್ರಾಯೋಗಿಕವಾಗಿ ನಗರದ ಐದು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಈ ಯೋಜನೆ ಜಾರಿಯಾದರೆ, ವೈನ್ ಪ್ರಿಯರು ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ನುಗ್ಗಬೇಕಿಲ್ಲ. ಮನೆಗೆ ತರಕಾರಿ ತೆಗೆದುಕೊಂಡು ಹೋಗುವಾಗಲೇ ನಿಮಗಿಷ್ಟವಾದ ವೈನ್ ಖರೀದಿಸಬಹುದಾಗಿದೆ.
ಮಹಿಳೆಯರು ವೈನ್ ಖರೀದಿಸಲು ಸಹಾಯಕವಾಗಲು ಮತ್ತು ವೈನ್ ಬಗ್ಗೆ ಜನರಿಗೆ ಇರುವ ಅಸ್ಪೃಶ್ಯ ಭಾವನೆ ಹೋಗಲಾಡಿಸಲು ವೈನ್ ಬೋರ್ಡ್ ಇಂತಹ ಪ್ರಯತ್ನಕ್ಕೆ ಕೈ ಹಾಕಿದೆ. ಹಾಪ್ ಕಾಮ್ಸ್ ಅಧಿಕಾರಿಗಳ ಜೊತೆ ಮಾತುಕತೆ ಮುಗಿದಿದ್ದು, ಶೀಘ್ರದಲ್ಲೇ ವೈನ್ ಮಾರಾಟ ಪ್ರಾರಂಭವಾಗಲಿದೆ.
ಬೆಲೆ ಎಷ್ಟಿರುತ್ತದೆ : ವೈನ್ ಮಾರಾಟ ಮಾಡುವ ಹಾಪ್ ಕಾಮ್ಸ್ ಗಳಿಗೆ ಸದ್ಯದಲ್ಲೇ ಅಧಿಕಾರಿಗಳು ಭೇಟಿ ನೀಡಿ ವೈನ್ ಸಂರಕ್ಷಿಸಲು ಬೇಕಾದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. 400ರಿಂದ 1,200 ರೂ.ಬೆಲೆಯ ವೈನ್ ಗಳು ಹಾಪ್ ಕಾಮ್ಸ್ ನಲ್ಲಿ ದೊರೆಯಲಿವೆ.
ಎಲ್ಲಿ ದೊರೆಯುತ್ತದೆ : ವೈನ್ ಮಾರಾಟ ಯೋಜನೆಯ ಪ್ರಾಯೋಗಿಕ ಜಾರಿಗಾಗಿ ನಗರದ ಐದು ಹಾಪ್ ಕಾಮ್ಸ್ ಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಮಲ್ಲೇಶ್ವರಂ, ಕೋರಮಂಗಲ, ಕಾಕ್ಸ್ ಟೌನ್, ವೈಟ್ ಫೀಲ್ಡ್ ಮತ್ತು ಇಂದಿರಾನಗರ ಹಾಪ್ ಕಾಮ್ಸ್ ನಲ್ಲಿ ವೈನ್ ದೊರೆಯಲಿದೆ.
ವೈನ್ ದ್ರಾಕ್ಷಿ ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಹಾಪ್ ಕಾಮ್ಸ್ ನಲ್ಲಿ ವೈನ್ ಮಾರಾಟ ಮಾಡುವ ಯೋಜನೆ ಜಾರಿಗೆ ತರಲು ಕರ್ನಾಟಕ ವೈನ್ ಬೋರ್ಡ್ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವೈನ್ ದ್ರಾಕ್ಷಿ ಬೆಳಯಲಾಗುತ್ತದೆ.
ರಾಜ್ಯದಲ್ಲಿ 17ಕ್ಕೂ ಹೆಚ್ಚು ವೈನ್ ತಯಾರಿಸುವ ಕಂಪನಿಗಳಿದ್ದು, 300ಕ್ಕೂ ಅಧಿಕ ವೈರಟಿ ವೈನ್ ಗಳು ಉತ್ಪಾದನೆ ಆಗುತ್ತವೆ. ಕೊನೆಗೂ ವೈನ್ ಹಾಪ್ ಕಾಮ್ಸ್ ಗಳಿಗೆ ಬರುವ ಕಾಲ ಹತ್ತಿರವಾಗಿದೆ. ಹಾಪ್ ಕಾಮ್ಸ್ ಗೆ ಹೋಗುವಾಗ ಜೇಬಲ್ಲಿ ದುಡ್ಡು ಜಾಸ್ತಿ ಇರಲಿ.












Click it and Unblock the Notifications