ಅಲ್ಪಸಂಖ್ಯಾತರ ವಿವಿಗೆ ಟಿಪ್ಪು ಹೆಸರು, ರೈತರ ಬೆಂಬಲ

ಟಿಪ್ಪು ಹೆಸರಿನ ವಿಶ್ವವಿದ್ಯಾಲಯ ಸ್ಥಾಪಿಸುವುದನ್ನು ವಿರೋಧಿಸಿದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತಸಂಘದ ರಾಜ್ಯ ಮುಖಂಡ ಕೆ.ಎಸ್.ನಂಜುಂಡೇಗೌಡ ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣದಲ್ಲಿ ಉದ್ದೇಶಿತ ವಿವಿ ಸ್ಥಾಪನೆಗೆ ಕೆಲವು ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ವಿಚಾರ ತಿಳಿದು ಬಂದಿದ್ದು, ರೈತಸಂಘ ಇದನ್ನು ಸಹಿಸುವುದಿಲ್ಲ ಎಂದರು.
ಟಿಪ್ಪು ಸುಲ್ತಾನ್ ಹೆಸರಿನ ಅಲ್ಪಸಂಖ್ಯಾತ ವಿವಿಯೊಂದನ್ನು ಟಿಪ್ಪುವಿನ ಕರ್ಮಭೂಮಿ ಶ್ರೀರಂಗಪಟ್ಟಣದಲ್ಲಿ ತೆರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂಘಪರಿವಾರದ ಸಂಘಟನೆಗಳು ವಿರೋಧಿಸುವುದು ಸರಿಯಲ್ಲ ಎಂದು ನಂಜುಂಡೇಗೌಡ ಕಿಡಿಕಾರಿದರು.
ಅಪ್ಪಟ ದೇಶಪ್ರೇಮಿಯಾದ ಟಿಪ್ಪುವನ್ನು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕೆಲವರು ವಿರೋಧಿಸುತ್ತಿದ್ದಾರೆ. ಕೆಲವು ಸಂಶೋಧಕರೂ ಟಿಪ್ಪು ಬಗ್ಗೆ ತಪ್ಪು ಭಾವನೆ ಬರುವಂತೆ ಬರೆದಿದ್ದಾರೆ. ಆದರೆ, ಟಿಪ್ಪು ಜಾತ್ಯತೀತ ವ್ಯಕ್ತಿಯಾಗಿದ್ದ ಎಂದು ಅವರು ಹೇಳಿದರು.
ಮೈಸೂರು ಪ್ರಾಂತ್ಯದಲ್ಲಿ ಟಿಪ್ಪು ಸುಲ್ತಾನ್ ಕೈಗೊಂಡಿರುವ ರೈತಪರ ಮತ್ತು ಜನಸಾಮಾನ್ಯರ ಪರವಾದ ಹಲವಾರು ಕಾರ್ಯಕ್ರಮಗಳು ಇಂದಿಗೂ ಉಲ್ಲೇಖನೀಯ. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರದ ಜನ ಪರ ಆಡಳಿತಗಾರ ಅವನಾಗಿದ್ದ ಎಂದು ನಂಜುಂಡೇಗೌಡ ವಿಶ್ಲೇಷಿಸಿದರು.
ಸರ್ವಧರ್ಮ ಪ್ರೇಮಿ, ದೇಶಪ್ರೇಮಿ, ಮಹಾನ್ ದೇಶಭಕ್ತನಾದ ಟಿಪ್ಪು ಸುಲ್ತಾನ್ ಹೆಸರಿನ ವಿವಿ ಸ್ಥಾಪನೆಯಿಂದ ಹೆಚ್ಚು ಅನುಕೂಲವಾಗಲಿದ್ದು, ವಿರೋಧಕ್ಕೆ ಮನ್ನಣೆ ನೀಡದೆ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಹೂಡಿಕೆ ಸಮಾವೇಶಕ್ಕೆ ವಿರೋಧ: ಡಿಸೆಂಬರ್ 19ರಂದು ಮಡಿಕೇರಿಯಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರೈತಸಂಘ ವಿರೋಧಿಸಲಿದೆ. ಬಿಜೆಪಿ ಸರ್ಕಾರ ಈ ಸಮಾವೇಶವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗು, ಸೂಕ್ಷ್ಮವಾದ ಅರಣ್ಯಪ್ರದೇಶದಿಂದ ಆವೃತವಾದ ಪ್ರದೇಶವಾಗಿದ್ದು, ಬಂಡವಾಳ ಹೂಡಿ ಕೆಯಿಂದ ಪರಿಸರ ಹಾನಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವಾರು ನಗರಗಳಿಗೆ ಕುಡಿಯುವ ನೀರು ಮತ್ತು ಜಮೀನಿಗೆ ನೀರು ಬರುತ್ತಿರುವುದು ಕೊಡಗಿನಿಂದ. ಕೈಗಾರಿಕೆಗಳ ಸ್ಥಾಪನೆಯಿಂದ ಕಾಡು ಹಾಳಾದರೆ ಕಾವೇರಿ ಬರಿದಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಮಡಿಕೇರಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹಲವಾರು ಪ್ರಗತಿಪರ ಸಂಘಟನೆಗಳು, ಮುತ್ಸದ್ದಿಗಳು ವಿರೋಧ ವ್ಯಕ್ತಪಡಿಸಿದ್ದು, 19ರಂದು ಮಡಿಕೇರಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರೈತಸಂಘ ಪಾಲ್ಗೊಳ್ಳಲಿದೆ ಎಂದವರು ಹೇಳಿದರು.












Click it and Unblock the Notifications