ಕೊಡಗಿನಲ್ಲಿ ಮರೆಯಾದ ಭತ್ತದ ಕೃಷಿ ಸಂಭ್ರಮ: ಏಕೆ ಹೀಗಾಯ್ತು?

ಮಡಿಕೇರಿ, ಮೇ 29: ಮುಂಗಾರು ಮಳೆ ಆರಂಭವಾಯಿತೆಂದರೆ ಕೊಡಗಿನಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಜಿಗಿತುಕೊಳ್ಳುತ್ತಿದ್ದ ಕಾಲವಿತ್ತು. ಅವತ್ತು ಇಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಹೀಗಾಗಿ ಮಳೆ ಆರಂಭವಾಗುತ್ತಿದ್ದಂತೆಯೇ ಗದ್ದೆಯಲ್ಲಿ ಉಳುಮೆ ಮಾಡುವುದು, ಗೊಬ್ಬರ ಹರಡುವುದು ಹೀಗೆ ಭತ್ತದ ಬಯಲಲ್ಲಿ ಬಿಡುವಿಲ್ಲದೆ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ರೈತಾಪಿ ವರ್ಗ ಕಣ್ಣಿಗೆ ಬೀಳುತ್ತಿತ್ತು. ಆದರೀಗ ಎಲ್ಲವೂ ಬದಲಾಗಿದೆ.

ಈಗೇನಾದರೂ ಕೊಡಗಿನತ್ತ ಹೋದರೆ ಅವತ್ತಿನ ಆ ದೃಶ್ಯಗಳು ಮಾಯವಾಗಿವೆ. ಈಗಿನವರಿಗೆ ಭತ್ತದ ಕೃಷಿಯೆಂದರೆ ಅಷ್ಟಕಷ್ಟೆಯಾಗಿದೆ. ಮೊದಲಿದ್ದ ಯಾವ ಸಂತೋಷವೂ ಈಗ ಕಾಣದಂತಾಗಿದೆ. ಇದಕ್ಕೆ ಕಾರಣಗಳು ನೂರಾರು ಇರಬಹುದು. ಆದರೆ ಒಂದೆರಡು ದಶಕಗಳ ಹಿಂದಕ್ಕೆ ಹೋಗಿ ನೋಡಿದರೆ ಅವತ್ತು ಭತ್ತದ ಕೃಷಿಯನ್ನು ಇಲ್ಲಿನ ಜನ ಸಂಭ್ರಮಿಸುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

Despite The Pre-Monsoon Rains Agricultural Activity Has Not Started In Kodagu

ಭತ್ತದ ಕೃಷಿಯೇ ಜೀವಾಳವಾಗಿದ್ದ ಕೊಡಗಿನಲ್ಲಿ ಹಬ್ಬ ಹರಿದಿನಗಳೆಲ್ಲವೂ ಅದರ ಸುತ್ತಲೇ ಆಚರಣೆಯಾಗುತ್ತಿತ್ತು. ಈಗಲೂ ಅದು ಮುಂದುವರೆದಿದೆ. ಇನ್ನು ಮಳೆಗಾಲವೂ ಕೂಡ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತಿತ್ತು. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಿದ್ದರು. ಅಲ್ಲಿಂದ ಶುರುವಾದ ಗದ್ದೆಯಲ್ಲಿನ ಭತ್ತದ ಕೃಷಿ ಚಟುವಟಿಕೆ ಮುಗಿಯುತ್ತಿದ್ದದ್ದು ಆಗಸ್ಟ್ ತಿಂಗಳಲ್ಲಿ.

ಮಳೆಗಾಲ ಎದುರಿಸಲು ಸಕಲ ಸಿದ್ಧತೆ

ಮುಂಗಾರು ಆರಂಭಗೊಳ್ಳುತ್ತಿದೆ ಎನ್ನುವಾಗಲೇ ಜನ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದರು. ಮಳೆಗಾಲಕ್ಕೆ ಬೇಕಾದ ಕೊಡೆ, ರೈನ್ ಕೋಟ್, ಗಂಬೂಟು, ಪ್ಲಾಸ್ಟಿಕ್, ಕೊರಂಬು ಹೀಗೆ ಎಲ್ಲವನ್ನೂ ಖರೀದಿಸುತ್ತಿದ್ದರು. ಜೊತೆಗೆ ಮಳೆಗಾಲಕ್ಕಿರಲೆಂದು ಸೌತೆಕಾಯಿ, ಗೆಣಸು, ಕಾಳುಕಡ್ಡಿ ಸೇರಿದಂತೆ ಹಾಳಾಗದ ಒಂದಷ್ಟು ಪದಾರ್ಥಗಳು, ಸೌದೆ, ದಿನಸಿ ಸಾಮಾನುಗಳನ್ನು ಸಂಗ್ರಹಿಸಿಡುತ್ತಿದ್ದರು. ಏಕೆಂದರೆ ಗದ್ದೆ ಕೆಲಸ ಆರಂಭವಾದ ಬಳಿಕ ಹೊರ ಪ್ರಪಂಚದ ಸಂಪರ್ಕವೇ ಇರುತ್ತಿರಲಿಲ್ಲ. ಜತೆಗೆ ಪೇಟೆಗೆ ಹೋಗಿ ತರಲು ಸಮಯವೂ ಸಿಗುತ್ತಿರಲಿಲ್ಲ.

ಇನ್ನು ಮಳೆಗಾಲ ಆರಂಭವಾಯಿತೆಂದರೆ ಜನರ ಭತ್ತದ ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿಬಿಡುತ್ತಿದ್ದರು. ಗದ್ದೆ ಉಳುಮೆ ಮಾಡುವುದು, ಗೊಬ್ಬರ ಹರಡುವುದು, ಗದ್ದೆ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು ಹೀಗೆ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿರುವ ದೃಶ್ಯಗಳು ಗೋಚರಿಸುತ್ತಿದ್ದವು. ಜೂನ್ ಆರಂಭದಿಂದ ಆಗಸ್ಟ್ ತಿಂಗಳ ತನಕವೂ ವಿಶಾಲ ಗದ್ದೆ ಬಯಲುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ರೈತರು ಮಳೆಯಿರಲಿ ಇಲ್ಲದಿರಲಿ ತಮ್ಮ ಕಾಯಕವನ್ನು ನಿಲ್ಲಿಸುತ್ತಿರಲಿಲ್ಲ.

Despite The Pre-Monsoon Rains Agricultural Activity Has Not Started In Kodagu

ಮಳೆಯನ್ನು ಲೆಕ್ಕಿಸದೆ ಗದ್ದೆಯಲ್ಲಿ ಕೆಲಸ

ಇದರ ಜೊತೆಗೆ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರಿಂದ ಕೂಲಿ ಕಾರ್ಮಿಕರನ್ನು ಆಶ್ರಯಿಸದೆ ತಾವೇ ಬಹಳಷ್ಟು ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಹೆಚ್ಚಿನ ಗದ್ದೆ ಹೊಂದಿದ್ದವರು ಇತರೆ ಕುಟುಂಬಗಳ ಜೊತೆ ಕೂಡು ಆಳುಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೆಂಗಸರು ಪೈರು ಕೀಳುವ ಕೆಲಸ ಮಾಡಿದರೆ ಗಂಡಸರು ನಾಟಿ ಮಾಡುತ್ತಿದ್ದರು. ಗದ್ದೆಗಳಲ್ಲಿ ನಾಟಿ ಮಾಡುವುದೆಂದರೆ ಆನಂದವೋ ಆನಂದ. ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಯಾರೂ ಕೂಡ ಸುಮ್ಮನೆ ಹಾದು ಹೋಗುತ್ತಿರಲಿಲ್ಲ. ಗದ್ದೆಗಿಳಿದು ನಾಟಿ ನೆಟ್ಟು ಹೋಗುತ್ತಿದ್ದ ದಿನಗಳಿದ್ದವು.

ಹೆಚ್ಚಿನ ಜನರು ಗದ್ದೆಯನ್ನು ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರು. ಮುಂಜಾನೆ ಐದು ಗಂಟೆಗೆಲ್ಲ ಉಳುಮೆಗೆ ಗದ್ದೆಗಿಳಿದು ಬಿಡುತ್ತಿದ್ದರು. ಆಗೆಲ್ಲ ವಾರಾನುಗಟ್ಟಲೆ ಮಳೆ ಬಿಡುವು ನೀಡದೆ ಒಂದೇ ಸಮನೆ ಸುರಿಯುತ್ತಿರುತ್ತಿತ್ತು. ಆದರೆ ಅದನ್ನು ಲೆಕ್ಕಿಸದೆ ಸುರಿಯುವ ಮಳೆಯಲ್ಲೇ ಮುಂಜಾನೆ ಐದಕ್ಕೆ ಉಳುಮೆ ಶುರು ಮಾಡಿ ಹತ್ತು, ಹನ್ನೊಂದು ಗಂಟೆಗೆ ಉಳುಮೆ ನಿಲ್ಲಿಸುತ್ತಿದ್ದರು. ದೊಡ್ಡ ಗದ್ದೆಗಳಲ್ಲಿ ಹತ್ತಾರು ಜನ ಹರಟೆ ಹೊಡೆಯುತ್ತಾ ಹಳೆಯ ಕಥೆಗಳನ್ನು ಹೇಳುತ್ತಾ ಖುಷಿ ಖುಷಿಯಾಗಿ ನಾಟಿ ಮಾಡುತ್ತಿದ್ದರು.

ಭತ್ತದ ಕೃಷಿಯಲ್ಲಿಯೂ ಸಕತ್ ಸಂಭ್ರಮ

ಪೊಲೀಸ್, ಸೇನೆ, ಇನ್ನಿತರ ಕೆಲಸಗಳ ಮೇಲೆ ಊರಿಂದ ಹೊರಗೆ ಹೋದವರು ನಾಟಿ ಸಮಯದಲ್ಲಿ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳು ಕೂಡ ಆ ಸಮಯದಲ್ಲಿ ತವರಿಗೆ ಬಂದು ಸಹಾಯ ಮಾಡುತ್ತಿದ್ದಳು. ಸಾಮಾನ್ಯವಾಗಿ ಎಷ್ಟೇ ಓದಿದ್ದರೂ ಹೆಣ್ಣು ಮಕ್ಕಳು ಪೈರು ಕೀಳುವುದನ್ನು, ಗಂಡು ಮಕ್ಕಳು ನಾಟಿ ನೆಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಬಿಡುತ್ತಿದ್ದರು. ಅವತ್ತಿಗೆ ಎಷ್ಟು ಎಕರೆ ಗದ್ದೆಯಿದೆ ಎಂಬುದರ ಮೇಲೆ ಆತನ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಅದರಲ್ಲೂ ನೀರಾವರಿ ಭೂಮಿಯಿದ್ದರಂತೂ ಆತನ ಬಗ್ಗೆ ಮಾತನಾಡುವಂತಿರಲಿಲ್ಲ.

Despite The Pre-Monsoon Rains Agricultural Activity Has Not Started In Kodagu

ನಾಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅದರಲ್ಲೂ ದೊಡ್ಡ ನಾಟಿಯಂದು ಭೂರಿ ಬೋಜನ ನಡೆಯುತ್ತಿತ್ತು. ಗದ್ದೆಯಲ್ಲಿ ಕೊಡಿನಾಟಿ ನೆಡುವ ಪರಿಣಿತರಿದ್ದರು. ಅದು ಗದ್ದೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗದ್ದೆಯನ್ನು ವಿಭಜಿಸಿ ಎದ್ದು ಕಾಣುತ್ತಿತ್ತು. ಆ ನಂತರ ದೊಡ್ಡಗದ್ದೆಯಲ್ಲಿ ನಾಟಿಯ ಬಳಿಕ ಓಟ ನಡೆಯುತ್ತಿತ್ತು. ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನ ಕಾಯಿ ನೀಡಿ ಗೌರವಿಸಲಾಗುತ್ತಿತ್ತು. ಅದೊಂದು ಮನರಂಜನೆ ಜೊತೆಗೆ ಊರಿಗೊಬ್ಬ ಓಟಗಾರನನ್ನು ಹುಟ್ಟು ಹಾಕುತ್ತಿತ್ತು.

ಭತ್ತದ ಕೃಷಿಯತ್ತ ಬೆಳೆಗಾರರಿಗೆ ನಿರಾಸೆ

ಕಾಲಾಂತರಗಳಲ್ಲಿ ವಾಣಿಜ್ಯ ಬೆಳೆಗಳ ಭರಾಟೆ, ಕೂಲಿ ಕಾರ್ಮಿಕರ ಕೊರತೆ, ಜಾನುವಾರುಗಳನ್ನು ಸಾಕಲಾಗದ ಪರಿಸ್ಥಿತಿ, ಓದಿದವರು ಕೆಲಸದ ನಿಮಿತ್ತ ಹೊರಗೆ ಹೋಗಿ ನೆಲೆಸಲಾರಂಭಿಸಿದ ಪರಿಣಾಮ ಜತೆಗೆ ಕೂಲಿಯ ದರ ದುಪ್ಪಟ್ಟು, ಮಳೆಯ ಕೊರತೆ ಇದೆಲ್ಲದರ ನಡುವೆ ಭತ್ತದ ಬೆಳೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾದ ಕಾರಣಗಳಿಂದಾಗಿ ಬಹಳಷ್ಟು ಮಂದಿ ಭತ್ತದ ಕೃಷಿಯತ್ತ ನಿರಾಸಕ್ತಿ ತೋರಲಾರಂಭಿಸಿದರು. ಮತ್ತೆ ಕೆಲವರು ಕೃಷಿ ಮಾಡದೆ ಪಾಳು ಬಿಟ್ಟರು.

ಇನ್ನು ಕೆಲವರು ಭತ್ತದ ಗದ್ದೆಯನ್ನು ತೋಟವಾಗಿ ಮಾರ್ಪಡಿಸಿದರೆ ಮತ್ತೆ ಕೆಲವರು ನಿವೇಶನಗಳನ್ನಾಗಿ ಪರಿವರ್ತಿಸಿದರು. ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ದನ ಸಾಕುವವರು ಇಲ್ಲ ಹೀಗಾಗಿ ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುತ್ತಿರುವ ರೈತ ಈಗ ಸಂಕಷ್ಟವನ್ನೇ ಅನುಭವಿಸುತ್ತಿದ್ದಾನೆ. ಪ್ರತಿ ವರ್ಷ ಗದ್ದೆ ನೆಡುವುದು ಕೂಡ ಕಷ್ಟವಾಗುತ್ತಿದೆ.

ಭತ್ತದ ಕೃಷಿಯ ಖುಷಿ ಇವತ್ತಿಗೂ ಹಸಿರು

ಕೊಡಗಿನ ಮಟ್ಟಿಗೆ ಹೇಳುವುದಾದರೆ ಭತ್ತ ದೊಡ್ಡ ಮಟ್ಟದ ಆದಾಯ ತರುವ ಕೃಷಿಯಾಗಿ ಉಳಿದಿಲ್ಲ ಹೀಗಾಗಿ ಅದರ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಹೋಗುತ್ತಿದೆ. ಜತೆಗೆ ಅದರ ಭತ್ತದ ಕೃಷಿಯ ವೈಭವೂ ಮರೆಯಾಗುತ್ತಿದೆ. ಕೆಲವೇ ಕೆಲವರು ಮಾತ್ರ ಭತ್ತದ ಕೃಷಿಯನ್ನು ಮಾಡುತ್ತಿದ್ದಾರೆ. ಮುಂದಿನ ತಲೆಮಾರಿನವರು ಭತ್ತದ ಕೃಷಿಯತ್ತ ಆಸಕ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತದೆ. ಅದು ಏನೇ ಇರಲಿ ಅವತ್ತಿನ ಭತ್ತದ ಕೃಷಿಯ ಖುಷಿ ಇವತ್ತಿಗೂ ಹಸಿರಾಗಿ ಉಳಿದಿರುವುದಂತು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+