ರಾಷ್ಟ್ರೀಯ ರೈತರ ದಿನ; ರೈತರಿಗೆ ರಕ್ಷಣಾ ಸಚಿವರ ಭರವಸೆ
ನವದೆಹಲಿ, ಡಿಸೆಂಬರ್ 23: ಬುಧವಾರ, ಡಿ.23ರ ರಾಷ್ಟ್ರೀಯ ರೈತ ದಿನಾಚರಣೆಗೆ ಶುಭಾಶಯ ಕೋರಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ ಶೀಘ್ರವೇ ಕೊನೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
"ರೈತರ ದಿನವಾದ ಇಂದು, ದೇಶದ ಎಲ್ಲಾ ಅನ್ನದಾತರಿಗೂ ನಮಸ್ಕಾರ ಅರ್ಪಿಸುತ್ತೇನೆ. ಇಡೀ ದೇಶಕ್ಕೆ ಆಹಾರ ಭದ್ರತೆಯನ್ನು ರೈತರು ನೀಡುತ್ತಿದ್ದಾರೆ. ಕೆಲವು ರೈತರು ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಸರ್ಕಾರವೂ ಸೂಕ್ಷ್ಮವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ರೈತರು ತಮ್ಮ ಪ್ರತಿಭಟನೆಯನ್ನು ಶೀಘ್ರವೇ ಹಿಂತೆಗೆದುಕೊಳ್ಳುವ ಭರವಸೆ ಇದೆ" ಎಂದಿದ್ದಾರೆ.
ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಬುಧವಾರ 28ನೇ ದಿನಕ್ಕೆ ಕಾಲಿಟ್ಟಿದೆ. ಈ ಬಿಕ್ಕಟ್ಟು ಪರಿಹಾರಕ್ಕೆ ಸರ್ಕಾರ ಹಾಗೂ ರೈತರ ನಡುವೆ ಆರನೇ ಸುತ್ತಿನ ಮಾತುಕತೆಯು ನಡೆಯಬೇಕಿದ್ದು, ದಿನಾಂಕ ನಿಗದಿಯಾಗಿಲ್ಲ. ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು ಕೂಡ, ರೈತರು ದಿನಾಂಕ ನಿಗದಿಗೊಳಿಸಿ ಮಾತುಕತೆ ನಡೆಸಿ, ಈ ಬಿಕ್ಕಟ್ಟನ್ನು ಬೇಗ ಕೊನೆಗೊಳಿಸುವ ಭರವಸೆ ಇದೆ ಎಂದಿದ್ದಾರೆ.

ಪಂಜಾಬ್, ಹರಿಯಾಣದಿಂದ ಬಂದ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ನಡುಗುವ ಚಳಿ ನಡುವೆಯೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದುವರೆಗೂ ಸರ್ಕಾರ ಹಾಗೂ ರೈತರ ನಡುವೆ ನಡೆದ ಮಾತುಕತೆಗಳು ವಿಫಲವಾಗಿವೆ.












Click it and Unblock the Notifications