ಬಿರು ಬಿಸಿಲಿನ ಝಳಕ್ಕೆ ಒಣಗಿದ ಬೆಳೆ: ದಾವಣಗೆರೆ ಜಿಲ್ಲೆ ರೈತರು ಇಟ್ಟ ಬೇಡಿಕೆಯೇನು ಗೊತ್ತಾ?
ದಾವಣಗೆರೆ, ಮೇ, 16: ಬಿರು ಬಿಸಿಲಿನ ಝಳದಿಂದ ಒಣಗಿ ನಾಶವಾಗಿರುವ ಬೆಳೆ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲಾ ರೈತರ ಒಕ್ಕೂಟ ಮತ್ತು ಕುಕ್ಕುವಾಡ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದಿಂದ ಮನವಿ ಪತ್ರ ಸಲ್ಲಿಸಿದೆ.
ನೀರಿಲ್ಲದೆ ಬಿರು ಬಿಸಿಲಿನ ಝಳ ಮತ್ತು ಬಿಸಿ ಹವೆ (ಉಷ್ಣಹವೆ) ಜ್ವಾಲೆಯಿಂದಾಗಿ ದಾವಣಗೆರೆ ಜಿಲ್ಲೆಯ ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ವಾರ್ಷಿಕ ಬೆಳೆ ಕಬ್ಬು ಮತ್ತು ಜಿಲ್ಲೆಯಾದ್ಯಂತ ಸುಮಾರು 10-20 ವರ್ಷಗಳಿಂದ ಬೆಳೆಸಿರುವ ಅಡಿಕೆ ಮತ್ತು ತೆಂಗಿನ ತೋಟಗಳು ಸಂಪೂರ್ಣ ಒಣಗಿ ನಾಶವಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರೈತರು ಭೀಕರ ಬರ ಮತ್ತು ಬಿಸಿಲಿನ ಝಳಕ್ಕೆ ಸಿಲುಕಿ ಬಸವಳಿದಿದ್ದಾರೆ. ರೈತರು ಸಾಕಿದ ಜಾನುವಾರುಗಳಿಗೆ ಮೇವು ಇಲ್ಲದೆ, ಕುಡಿಸಲು ನೀರು ಇಲ್ಲದೆ ಹಾಹಾಕಾರದಿಂದ ನರಳಿದ್ದಾರೆ. ಅಲ್ಲದೆ, ಮತ್ತೊಂದೆಡೆ ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಇಲ್ಲದೆ, ಮಳೆಯೂ ಇಲ್ಲದೆ, ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಬೇಸಿಗೆಯ ಬಿರು ಬಿಸಿಲಿನ ಹೊಡೆತಕ್ಕೆ ರೈತ ತತ್ತರಿಸಿ ಹೋಗಿದ್ದಾನೆ. ಕಾದ ಹೆಂಚಿನ ಮೇಲೆ ರೈತನ ಬದುಕು ಎಂಬಂತೆ ಆಗಿದೆ.
ರೈತರ ಹೊಲಗಳಿಗೆ ಭೇಟಿ ನೀಡಿ ಬಿಸಿಲಿನ ತಾಪಮಾನಕ್ಕೆ ನೀರಿಲ್ಲದೆ ಒಣಗಿ ನಾಶವಾಗಿರುವ ಬೆಳೆ ಸಮೀಕ್ಷೆ ನಡೆಸಬೇಕು. ಭದ್ರಾ ನೀರು ಇಲ್ಲದೆ, ಬಿಸಿಲಿನ ಝಳದಿಂದ ಒಣಗಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಬೆಳೆಗಳ ನಾಶದ ಅಂದಾಜನ್ನು ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ.
ಈ ಬೆಳೆ ನಾಶದಿಂದ ಆಗಿರುವ ನಷ್ಟದ ಅಂದಾಜು ಮಾಡುವ ಸಮೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಖರೀದಿಸಿ ಬಿತ್ತಿದ ಬೀಜ, ಹಾಕಿದ ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿದಂತೆ ಜಮೀನು ಉಳುಮೆ, ರೈತನ ಕುಟುಂಬದ ಶ್ರಮ ಮತ್ತು ಕೂಲಿ ವೆಚ್ಚ ಸೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಅಂತರ್ಜಲ ಮಟ್ಟ ಕುಸಿದು ಬತ್ತಿರುವ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಅವುಗಳ ಅಂತರ್ಜಲ ಮಟ್ಟ ಮರುಪೂರಣ ಮಾಡುವ ಮೂಲಕ ಪುನರ್ಜೀವನಗೊಳಿಸಬೇಕು. ದನ ಕರುಗಳು ಕುರಿ- ಮೇಕೆಗಳು ಬಿಸಿಲಿನ ಝಳದಿಂದ ನರಳುತ್ತಿವೆ. ಇವು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಬಡಕಲಾಗಿವೆ. ಈಗಾಗಲೇ ಕೆಲವು ಜಾನುವಾರುಗಳು ಸವನ್ನಪ್ಪಿವೆ. ಕೆಲವನ್ನು ರೈತರು ಸಾಕಾಲಾಗದೆ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಷ್ಟದ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು.
ಎಲ್ಲಾ ನಷ್ಟದ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಂಟಿ ಜವಾಬ್ದಾರಿಯಿಂದ ಕರೆದು, ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಅಧಿಕಾರಿಗಳ ಸಮಿತಿ ರಚಿಸಬೇಕು ಎಂದು ಕೇಳಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ. ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್‌ನಲ್ಲಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಾರೂಪಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಲಾಗಿದೆ.
ರೈತರ ಒಕ್ಕೂಟದ ನಿಯೋಗದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಬಲ್ಲೂರು ರವಿಕುಮಾರ್, ರಾಘವೇಂದ್ರ ನಾಯ್ಕ್, ಹದಡಿ ಜಿ.ಸಿ.ನಿಂಗಪ್ಪ, ಕುಕ್ಕುವಾಡದ ರುದ್ರೆಗೌಡ್ರು, ಡಿ.ಬಿ.ಶಂಕರ್, ಕೆ.ಸಿ.ಶಿವಕುಮಾರ, ಕೆ.ಜಿ.ರವಿಕುಮಾರ, ಬಲ್ಲೂರು ಬಸವರಾಜು, ಮುದಹದಡಿ ದಿಳ್ಳೇಪ್ಪ, ಶಂಭುಲಿಂಗನಗೌಡ್ರು, ನಾಗರಸನಹಳ್ಳಿ ಚನ್ನಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಗುತ್ನಾಳ ಮಂಜುನಾಥ, ತುರ್ಚಗಟ್ಟದ ಶ್ರೀನಿವಾಸ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications