Cauvery dispute: ರಾಜ್ಯಕ್ಕೆ ಅನ್ಯಾಯವಾಗಲು ನಾರಿಮನ್ ಪ್ರಮುಖ ಕಾರಣ: ಗಂಭೀರ ಆರೋಪ
ಮಂಡ್ಯ, ಸೆಪ್ಟೆಂಬರ್, 15: ಕಾವೇರಿ ವಿಚಾರದಲ್ಲಿ ಅಡ್ವಕೇಟ್ ಜನರಲ್ ಆಗಿದ್ದ ನಾರಿಮನ್ ರಾಜ್ಯದ ಪರವಾಗಿದ್ದರು ಎನ್ನುವುದಕ್ಕಿಂತ ರಾಜ್ಯ ಸರ್ಕಾರವನ್ನು ದಿಕ್ಕು ತಪ್ಪಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಯಲು ಸಹಕಾರ ನೀಡಿದರು ಎನ್ನಬಹುದು ಎಂದು ಚಿಂತಕ ಅರ್ಜುನಹಳ್ಳಿ ಪ್ರಸನ್ನಕುಮಾರ್ ಹೇಳಿದರು.
ಪಾಂಡವಪುರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗಲು ಈ ಹಿಂದಿನ ಅಡ್ವಕೇಟ್ ಜನರಲ್ ನಾರಿಮನ್ ಹಾಗೂ ರಾಜ್ಯವನ್ನಾಳಿದ ಮೂರು ಪಕ್ಷಗಳು ಕಾರಣವಾಗಿವೆ. ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ವಿಫಲರಾದರು.

2001ರಲ್ಲಿ ತಮಿಳುನಾಡು ಸೇರಿದಂತೆ ಕಾವೇರಿ ಜಲಾನಯನದ ಪಾಂಡಿಚೇರಿ, ಕೇರಳ ಜನಸಂಖ್ಯೆ ಅನುಗುಣವಾಗಿ ಹೆಚ್ಚುವರಿ ನೀರಿಗಾಗಿ ಬೇಡಿಕೆ ಇಟ್ಟು ಸುಪ್ರೀಂ ಕೋರ್ಟ್‌ಗೆ ಅಫಿಡೇವಿಟ್ ಸಲ್ಲಿಸಿದರು. ಆದರೆ ರಾಜ್ಯ ಸರ್ಕಾರ ಆ ಬಗ್ಗೆ ಯೋಚನೆಯೂ ಮಾಡಲಿಲಲ್ಲ. ಈ ಕಾರಣಗಳಿಂದಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕಾವೇರಿ ನ್ಯಾಯಾಧೀಕರಣ ರಚನೆಯಾದಗಲೇ ರಾಷ್ಟ್ರೀಯ ಜಲನೀತಿ ಇಲ್ಲದ ಕಾರಣ ನ್ಯಾಯಾಧೀಕರಣವನ್ನು ಒಪ್ಪಲು ಸಾಧ್ಯವಿಲ್ಲವೆಂದು ನಮ್ಮ ಸರ್ಕಾರ ತಿರಸ್ಕರಿಸಬೇಕಿತ್ತು. ನಮಗಿಂತಲೂ ಮುಂಚಿತವಾಗಿ 1987ರಲ್ಲೇ ಪಂಜಾಬ್, ರಾಜಸ್ಥಾನ್, ಹರಿಯಾಣ ರಾಜ್ಯಗಳನ್ನು ಒಳಗೊಂಡತೆ ನ್ಯಾಯಾಧಿಕರಣ ರಚನೆಯಾಗಿತ್ತು. ಆದರೆ ನೀರು ಹಂಚಿಕೆ ವಿಚಾರವಾಗಿ ಪಂಜಾಬ್ ಒಮ್ಮೆಯೂ ನ್ಯಾಯಾಧೀಕರಣ ಆದೇಶವನ್ನು ಪಾಲಿಸಲೇ ಇಲ್ಲ. ಆದರೆ ನಮ್ಮ ಸರ್ಕಾರಗಳು ನ್ಯಾಯಾಧೀಕರಣವನ್ನು ಒಪ್ಪಿಕೊಂಡಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈಗ ಏನೂ ಮಾಡಲು ಸಾಧ್ಯವಿಲ್ಲ. ನಾರಿಮನ್ ಯಾವ್ಯಾವ ರೀತಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದು ದಾಖಲಾಗಿದೆ. ನಾನು ಈ ಹಿಂದೆಯೇ ನಾರಿಮನ್ ಅವರನ್ನು ಬದಲಾಯಿಸಲು ಒತ್ತಾಯಿಸಿದೆ. ಆದರೆ ನನ್ನ ಮನವಿಯನ್ನು ಯಾವ ಪಕ್ಷಗಳು ಸ್ವೀಕರಿಸಲಿಲ್ಲ. ಅದರ ಪ್ರತಿಫಲವನ್ನು ಈಗ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆಗಳು ಮುಚ್ಚಿ ಹೋಗುತ್ತವೆ
ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ತಮಿಳುನಾಡಿಗೆ ನೀರು ಹರಿದು ಕೆಆರ್‌ಎಸ್ ಬರಿದಾದರೆ ಜಿಲ್ಲೆಯಲ್ಲಿರುವ ಏಳು ಸಕ್ಕರೆ ಕಾರ್ಖಾನೆಗಳ ಜೊತೆಗೆ ಮನ್‌ಮುಲ್‌ನಂತಹ ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳು ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಹಸು ಕರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ಅಲ್ಲದೆ ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ. ಕಾವೇರಿ ವಿಚಾರದಲ್ಲಿ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್ ನೀಡುವ ತೀರ್ಪು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅವರು ದಾಖಲೆಗಳನ್ನು ನೋಡಿಕೊಂಡು ತೀರ್ಪು ನೀಡುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಕೋ.ಪು.ಗುಣಶೇಖರ್, ಎಂ.ರಮೇಶ್ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications